ಕೆಇಎ ಪರೀಕ್ಷೆಗಳಲ್ಲಿ ಇನ್ಮುಂದೆ ಕ್ಯೂಆರ್ ಕೋಡ್ ಮೂಲಕ ಅಭ್ಯರ್ಥಿಗಳ ಹಾಜರಾತಿ
ಬೆಂಗಳೂರು, 26 ನವೆಂಬರ್ (ಹಿ.ಸ.): ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಪರೀಕ್ಷೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಇನ್ನು ಮುಂದೆ ಕ್ಯೂಆರ್ ಕೋಡ್ ಮೂಲಕವೇ ಅಭ್ಯರ್ಥಿಗಳ ಹಾಜರಾತಿ ಮತ್ತು ನೈಜತೆಯನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಪರೀಕ್ಷಾ ಮೇಲ್ವಿಚಾರಕರಿಗೆ ತರಬೇತಿ ನೀಡು
ಕೆಇಎ ಆಡಳಿತಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಹಾಗೂ ಪರೀಕ್ಷಾ ನಿಯಂತ್ರಕಿ ಅರ್ಚನಾ


ಬೆಂಗಳೂರು, 26 ನವೆಂಬರ್ (ಹಿ.ಸ.):

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಪರೀಕ್ಷೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಇನ್ನು ಮುಂದೆ ಕ್ಯೂಆರ್ ಕೋಡ್ ಮೂಲಕವೇ ಅಭ್ಯರ್ಥಿಗಳ ಹಾಜರಾತಿ ಮತ್ತು ನೈಜತೆಯನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಪರೀಕ್ಷಾ ಮೇಲ್ವಿಚಾರಕರಿಗೆ ತರಬೇತಿ ನೀಡುವ ಉದ್ದೇಶದಿಂದ ಗುರುವಾರ ವರ್ಚುವಲ್ ಸಭೆ ಆಯೋಜಿಸಲಾಗಿತ್ತು. ಕೆಇಎ ಆಡಳಿತಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಹಾಗೂ ಪರೀಕ್ಷಾ ನಿಯಂತ್ರಕಿ ಅರ್ಚನಾ ಅವರು ಸಭೆ ನಡೆಸಿ ಮೇಲ್ವಿಚಾರಕರಿಗೆ ಹೊಸ ವ್ಯವಸ್ಥೆಯ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು.

ನೂತನ ವ್ಯವಸ್ಥೆಯನ್ನು ನವೆಂಬರ್ 27ರಿಂದ ನಡೆಯಲಿರುವ ಪರೀಕ್ಷೆಗಳಲ್ಲಿ ಜಾರಿಗೆ ತರಲಾಗುತ್ತದೆ.

ಈ ಹಿಂದೆ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳ ನೆರವಿನಿಂದ ಮೊಬೈಲ್ ಅನ್ವಯಿಕ ತಂತ್ರಾಂಶದ ಮೂಲಕ ಅಭ್ಯರ್ಥಿಗಳ ನೈಜತೆಯನ್ನು ಪರಿಶೀಲಿಸಲಾಗುತ್ತಿತ್ತು. ಇದೀಗ ಸುಧಾರಣಾ ಕ್ರಮದ ಭಾಗವಾಗಿ ಪರೀಕ್ಷಾ ಮೇಲ್ವಿಚಾರಕರ ನೆರವಿನಿಂದ ಕ್ಯೂಆರ್ ಕೋಡ್ ಬಳಸಿ ಅಭ್ಯರ್ಥಿಗಳ ಗುರುತನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ.

ಪ್ರತಿ ಪರೀಕ್ಷಾ ಕೊಠಡಿಗೆ ಇಬ್ಬರು ಮೇಲ್ವಿಚಾರಕರನ್ನು ನೇಮಿಸಲು ಇತ್ತೀಚೆಗೆ ನಿರ್ಧರಿಸಲಾಗಿದೆ. ಅವರಲ್ಲಿ ಒಬ್ಬರನ್ನು ಕ್ಯೂಆರ್ ಕೋಡ್ ಮೂಲಕ ಅಭ್ಯರ್ಥಿಗಳ ನೈಜತೆ ಪರಿಶೀಲಿಸುವ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ. ಮೊದಲ ಗಂಟೆ ಬಾರಿಸುವವರೆಗೆ ಈ ಪ್ರಕ್ರಿಯೆ ನಡೆಯಲಿದ್ದು, ನಂತರ ಪರೀಕ್ಷಾ ವೀಕ್ಷಕರ ನೇತೃತ್ವದಲ್ಲಿ ಪರೀಕ್ಷಾ ಕಾರ್ಯ ಮುಂದುವರಿಯಲಿದೆ.

ಈ ಕ್ರಮದಿಂದ ಅಭ್ಯರ್ಥಿಗಳ ಗುರುತು ಪರಿಶೀಲನೆ ಮತ್ತು ಹಾಜರಾತಿ ದಾಖಲಾತಿಯಲ್ಲಿ ಹೆಚ್ಚಿನ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆ ತರಲು ಕೆಇಎ ಉದ್ದೇಶಿಸಿದೆ ಎಂದು ಪ್ರಕಟಣೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande