

ಬಳ್ಳಾರಿ, 26 ನವೆಂಬರ್ (ಹಿ.ಸ.)
ಸಂವಿಧಾನವು ನಮ್ಮ ದೇಶದ ಸರ್ವೋಚ್ಚ ಕಾನೂನಾಗಿದ್ದು, ಪ್ರತಿಯೊಬ್ಬ ನಾಗರಿಕರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಖಾತರಿ ಮಾಡುತ್ತದೆ ಎಂದು ಕಲಾ ನಿಕಾಯದ ಡೀನ್ . ರಾಬರ್ಟ್ ಜೋಸ್ ಅಭಿಪ್ರಾಯಪಟ್ಟಿದ್ದಾರೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ರಾಷ್ಟ್ರೀಯ ಸಂವಿಧಾನ ದಿನಾಚರಣೆಯ ಅಂಗವಾಗಿ ಗುರುವಾರ ನಡೆದ ‘ಸಂವಿಧಾನ 76: ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಂವಿಧಾನಿಕ ದೃಷ್ಟಿಕೋನ ಮತ್ತು ಭಾರತೀಯ ಪ್ರಜಾಪ್ರಭುತ್ವದ ಭವಿಷ್ಯ’ ವಿಷಯದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳನ್ನು ಪ್ರತಿಪಾದಿಸುವ ಮೂಲಕ ವೈವಿಧ್ಯತೆಯಲ್ಲಿ ಏಕತೆಯನ್ನು ಖಚಿತಪಡಿಸಿದೆ. ಪ್ರತಿಯೊಬ್ಬರೂ ಸಂವಿಧಾನದ ಆದರ್ಶಗಳಿಗೆ ಬದ್ಧರಾಗಿರಬೇಕು ಎಂದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪೆÇ್ರ. ಪಿ. ಕಣ್ಣನ್ ಅವರು, ಭಾರತೀಯ ಸಂವಿಧಾನ ರಚನೆಯ ಹಾದಿ ಸುಲಭವಾಗಿರಲಿಲ್ಲ. 1947ರ ಆಗಸ್ಟ್ 29ರಂದು ಸಂವಿಧಾನ ಕರಡು ಸಮಿತಿ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ಸಮಾಜವಾದ, ಜಾತ್ಯತೀತತೆ, ಪ್ರಜಾಸತ್ತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಏಕತೆ ಮತ್ತು ಸಮಗ್ರತೆ ಸಂವಿಧಾನದ ಮೂಲ ಆಶಯಗಳಾಗಿವೆ ಎಂದು ಸ್ಮರಿಸಿದರು.
ಪ್ರಭಾರ ಕುಲಸಚಿವ ವಿ. ಲೋಕೇಶ್ ಅವರು, ಸಂವಿಧಾನ ದಿನವು ನಮ್ಮ ಹಕ್ಕು, ಕರ್ತವ್ಯ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಅರಿತುಕೊಳ್ಳುವ ದಿನವಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಬೆಳೆಸುವ ಮೂಲಕ ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ಪ್ರಾಣಿಶಾಸ್ತ್ರ ವಿಭಾಗದ ಡಾ. ನಾಗಭೂಷಣ್ ಚರಂತಿಮಠ್ ಅವರು ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು. ಕುಲಸಚಿವ ವಿಶ್ವಜಿತ್ ಮೆಹತಾ ಅವರು ಉಪಸ್ಥಿತರಿದ್ದರು.
ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವೀರಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್