
ವಿಜಯಪುರ, 26 ನವೆಂಬರ್ (ಹಿ.ಸ.)
ಭಾರತದ ಸಂವಿಧಾನದ ಮೂಲ ಆಶಯವೇ ಎಲ್ಲರನ್ನು ಒಳಗೊಳ್ಳುವ ಸಂಸ್ಕೃತಿಯಾಗಿದೆ. ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಗೌರವ ಮತ್ತು ನ್ಯಾಯ ದೊರೆಯಬೇಕು ಎಂಬ ಉದಾತ್ತ ಪರಿಕಲ್ಪನೆಯನ್ನು ಸಂವಿಧಾನ ಹೊಂದಿದೆ. ನಮ್ಮ ಜೀವನದ ಪ್ರತಿಯೊಂದು ಉಸಿರಿನಲ್ಲಿಯೂ ಸಂವಿಧಾನದ ಆಶಯಗಳು ಅಡಕವಾಗಿವೆ. ಸಂವಿಧಾನವು ಕೇವಲ ಆಡಳಿತಾತ್ಮಕ ದಾಖಲೆಯಲ್ಲ, ಅದು ಇಡೀ ಬದುಕಿನ ಮಾರ್ಗದರ್ಶಿ ಹಾಗೂ ಪ್ರಜಾಪ್ರಭುತ್ವದ ಸೌಂದರ್ಯವಾಗಿದೆ ಎಂದು ಸಾಹಿತಿ ರಂಜಾನ್ ದರ್ಗಾ ಹೇಳಿದರು.
ಉಪನ್ಯಾಸ ನೀಡಿದ ಅವರು, ಬಸವಣ್ಣನವರ ವಚನಗಳು ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿವೆ. ಬಡವರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನತೆ ದೊರೆಯಬೇಕು ಎಂಬ ಮಹತ್ವದ ಕನಸನ್ನು ಬಸವಾದಿ ಶರಣರು ಕಂಡಿದ್ದರು. ಅವರ ವಿಚಾರಧಾರೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಸಮಾಜದ ಪ್ರತಿಯೊಬ್ಬರೂ ಯಾವುದೇ ತಾರತಮ್ಯವಿಲ್ಲದೆ ಸಮಾನ ಅವಕಾಶ ಮತ್ತು ಗೌರವದಿಂದ ಬದುಕುವ ವಾತಾವರಣವನ್ನು ಭಾರತದ ಸಂವಿಧಾನ ಕಲ್ಪಿಸಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಾಕಾರಗೊಳಿಸುವ ಶಕ್ತಿ ಸಂವಿಧಾನಕ್ಕಿದೆ. ಹೀಗಾಗಿ ಪ್ರತಿಯೊಬ್ಬರೂ ಸಂವಿಧಾನದ ಮಹತ್ವವನ್ನು ಅರಿತುಕೊಂಡು ಅದರ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ಭಾರತದ ಇತಿಹಾಸವನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ ಹಿಂದೆ ಅನೇಕ ಸಂಸ್ಥಾನಗಳಿದ್ದವು. ವಿವಿಧ ಭಾಷೆ, ಸಂಸ್ಕೃತಿ ಹಾಗೂ ಪ್ರಾದೇಶಿಕ ವೈವಿಧ್ಯತೆಗಳನ್ನು ಹೊಂದಿದ್ದ ವಿಶಾಲ ದೇಶವನ್ನು ಒಗ್ಗೂಡಿಸಿ, ಎಲ್ಲರನ್ನೂ ಒಂದೇ ಸಂವಿಧಾನದ ಚೌಕಟ್ಟಿನಡಿ ತರುವಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ ಎಂದರು.
ದೇಶದ ವಿವಿಧ ಭಾಷೆ, ಸಂಸ್ಕೃತಿ ಮತ್ತು ಸಮುದಾಯಗಳನ್ನು ಒಗ್ಗೂಡಿಸುವ ಪ್ರಜಾಸತ್ತಾತ್ಮಕ ಆಶಯ ಹಾಗೂ ಸಮಾನತೆಯ ಮೌಲ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಿರುವುದು ಅದರ ಪ್ರಮುಖ ವಿಶೇಷತೆಯಾಗಿದೆ. ವೈವಿಧ್ಯತೆಯಲ್ಲಿ ಏಕತೆ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಸಂವಿಧಾನ ದೇಶದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಒದಗಿಸಿದೆ ಎಂದು ತಮ್ಮ ಉಪನ್ಯಾಸದಲ್ಲಿ ವಿವರಿಸಿದರು.
ಸಮಾನತೆ, ಸಹಬಾಳ್ವೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯ ಮೌಲ್ಯಗಳೇ ಸಂವಿಧಾನದ ಜೀವಾಳವಾಗಿದ್ದು, ಬಸವಣ್ಣನವರ ವಚನಗಳ ಆಶಯಗಳಿಗೂ ಸಂವಿಧಾನದ ಮೂಲ ತತ್ವಗಳಿಗೂ ಸಾಮ್ಯತೆ ಇದೆ ಎಂಬ ಸಂದೇಶವನ್ನು ರಂಜಾನ್ ದರ್ಗಾ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande