ಬೆಂಗಳೂರಿನಲ್ಲಿ ಕ್ಯಾಬ್, ರ್ಯಾಪಿಡೋ ಚಾಲಕರನ್ನು ಗುರಿಯಾಗಿಸಿ ಸುಲಿಗೆ; ನಾಲ್ವರ ಬಂಧನ
ಬೆಂಗಳೂರಿನಲ್ಲಿ ರಾತ್ರಿ ವೇಳೆ ಕ್ಯಾಬ್ ಹಾಗೂ ರ್ಯಾಪಿಡೋ ಚಾಲಕರನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ವೈಟ್ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಖರೀದಿಗಾಗಿ ಮೂರು ತಿಂಗಳಲ್ಲಿ 30ಕ್ಕೂ ಹೆಚ್ಚು ಸುಲಿಗೆ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ
Bengaluru-Cab-Rapido-Drivers-Targeted-By-Robbery-Gang-Four-Arrested


ಬೆಂಗಳೂರು, 26 ನವೆಂಬರ್ (ಹಿ.ಸ.):

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ವೇಳೆ ಕ್ಯಾಬ್ ಹಾಗೂ ರ್ಯಾಪಿಡೋ ಚಾಲಕರನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳ ಗ್ಯಾಂಗ್ ಅನ್ನು ವೈಟ್ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ 30ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಡ್ರಗ್ಸ್ ಖರೀದಿಸಲು ಹಣ ಹೊಂದಿಸುವ ಉದ್ದೇಶದಿಂದ ಈ ಕೃತ್ಯ ಎಸಗುತ್ತಿದ್ದ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವೈಟ್ಫೀಲ್ಡ್ನ ಗಾಂಧಿಪುರ ಹಾಗೂ ವಿಜಯನಗರ ನಿವಾಸಿಗಳಾದ ಮನೋಜ್, ಪ್ರೀತಮ್ ಪ್ರಕಾಶ್, ಸಯ್ಯದ್ ಶಫಿ ಮತ್ತು ಅಖಿಲೇಶ್ ಬಂಧಿತ ಆರೋಪಿಗಳು.

ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಸಮೀಪದ ನಿರ್ಜನ ಪ್ರದೇಶದಲ್ಲಿ ರ್ಯಾಪಿಡೋ ಚಾಲಕ ಮೊಹಮ್ಮದ್ ನಿಸಾರ್ ಅವರನ್ನು ವ್ಯಾಗನರ್ ಕಾರಿನಲ್ಲಿ ಬಂದ ಆರೋಪಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು.

ಬಳಿಕ ಅವರ ಮೊಬೈಲ್ ಮೂಲಕ ಆನ್ಲೈನ್ನಲ್ಲಿ ಹಣ ವರ್ಗಾವಣೆ ಮಾಡಿಸಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದೂರು ದಾಖಲಾಗುತ್ತಿದ್ದಂತೆ ವೈಟ್ಫೀಲ್ಡ್ ಡಿಸಿಪಿ ಹರಿಬಾಬು ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.

ಆರೋಪಿಗಳು ಬಳಸಿದ್ದ ಬಾಡಿಗೆ ಕಾರಿನ ಸುಳಿವು ಆಧರಿಸಿ ಪೊಲೀಸರು ಸುಮಾರು 2ರಿಂದ 3 ಕಿ.ಮೀ. ದೂರ ಕಾರನ್ನು ಬೆನ್ನಟ್ಟಿದ್ದಾರೆ. ಕಾರು ಅತಿವೇಗವಾಗಿ ಚಲಿಸುತ್ತಿದ್ದ ಹಿನ್ನೆಲೆಯಲ್ಲಿ ರೆಂಟಲ್ ಕಂಪನಿಯ ನೆರವಿನಿಂದ ತಾಂತ್ರಿಕವಾಗಿ ಕಾರಿನ ಎಂಜಿನ್ ಸ್ಥಗಿತಗೊಳಿಸಿದ್ದಾರೆ.

ಕಾರು ನಿಂತ ಬಳಿಕ ಎಂಜಿನ್ ಪರಿಶೀಲಿಸಲು ಕೆಳಗಿಳಿದ ಆರೋಪಿಗಳನ್ನು ಪೊಲೀಸರು ಸುತ್ತುವರಿದು ಬಂಧಿಸಿದ್ದಾರೆ. ಸ್ಥಳದಲ್ಲೇ ಮೂವರು ಸಿಕ್ಕಿಬಿದ್ದಿದ್ದು, ಪರಾರಿಯಾಗಿದ್ದ ಮತ್ತೊಬ್ಬ ಆರೋಪಿಯನ್ನೂ ಬಳಿಕ ಬಂಧಿಸಲಾಗಿದೆ.

ಬಿಕಾಂ ಪದವೀಧರ, ಟ್ಯಾಟೂ ಆರ್ಟಿಸ್ಟ್ ಕೂಡ ಗ್ಯಾಂಗ್ನಲ್ಲಿ!

ಬಂಧಿತ ನಾಲ್ವರೂ ಮಾದಕ ವ್ಯಸನಿಗಳಾಗಿದ್ದು, ಡ್ರಗ್ಸ್ ಖರೀದಿಸಲು ಹಣ ಹೊಂದಿಸುವುದಕ್ಕಾಗಿ ಸುಲಿಗೆ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸುಲಿಗೆ ಮಾಡಿದ ಹಣವನ್ನು ನೇರವಾಗಿ ಶಂಕಿತ ಡ್ರಗ್ ಪೆಡ್ಲರ್ನ ಖಾತೆಗೆ ವರ್ಗಾಯಿಸುತ್ತಿದ್ದರು ಎನ್ನಲಾಗಿದೆ.

ಪ್ರಮುಖ ಆರೋಪಿ ಮನೋಜ್ ಸುಲಿಗೆಗೆ ಚಾಲಕರನ್ನು ಆಯ್ಕೆ ಮಾಡುವುದು ಹಾಗೂ ಹಣದ ಮೊತ್ತ ನಿರ್ಧರಿಸುವ ಕೆಲಸ ಮಾಡುತ್ತಿದ್ದ. ಪ್ರೀತಮ್ ಪ್ರಕಾಶ್ ಬಿಕಾಂ ಪದವೀಧರನಾಗಿದ್ದರೆ, ಸಯ್ಯದ್ ಶಫಿ ಕ್ಯಾಬ್ ಚಾಲಕನಾಗಿ ಮತ್ತು ಅಖಿಲೇಶ್ ಟ್ಯಾಟೂ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಆರಂಭದಲ್ಲಿ ಆಟೋ ಬಳಸಿಕೊಂಡು ಸುಲಿಗೆ ಮಾಡುತ್ತಿದ್ದ ಆರೋಪಿಗಳು ಬಳಿಕ ಬಾಡಿಗೆ ವ್ಯಾಗನರ್ ಕಾರನ್ನು ಬಳಸಲಾರಂಭಿಸಿದ್ದರು.

ಕಳೆದ ಮೂರು ತಿಂಗಳಲ್ಲಿ ಸುಮಾರು 30 ಸುಲಿಗೆ ಕೃತ್ಯ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಪೈಕಿ ಪೊಲೀಸರು ಈಗಾಗಲೇ 11 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ. ಸಣ್ಣ ಮೊತ್ತದ ಹಣ ಕಳೆದುಕೊಂಡಿದ್ದ ಹಲವು ಚಾಲಕರು ದೂರು ನೀಡಲು ಹಿಂದೇಟು ಹಾಕಿದ್ದ ಹಿನ್ನೆಲೆಯಲ್ಲಿ, ಸಂತ್ರಸ್ತರನ್ನು ಪತ್ತೆಹಚ್ಚಿ ದೂರು ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನೂ ಪೊಲೀಸರು ಕೈಗೊಂಡಿದ್ದಾರೆ.

ಸಂತ್ರಸ್ತರು ಭಯಪಡದೆ ದೂರು ನೀಡಿ: ಪೊಲೀಸ್ ಆಯುಕ್ತರ ಮನವಿ

ಈ ಕುರಿತು ಬೆಂಗಳೂರು ನಗರ ಪೂರ್ವ ವಲಯ ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್. ಮಾತನಾಡಿ, ನಗರದಲ್ಲಿ ಸಂಘಟಿತ ಅಪರಾಧಗಳನ್ನು ನಿಯಂತ್ರಿಸಲು ಮುಖ್ಯ ಆಯುಕ್ತರು ಸ್ಪಷ್ಟ ಸೂಚನೆ ನೀಡಿದ್ದಾರೆ. ಪೂರ್ವ ವಲಯದ ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸಣ್ಣ ಮೊತ್ತದ ಸುಲಿಗೆ ನಡೆಸುತ್ತಿದ್ದ ಗ್ಯಾಂಗ್ಗಳ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ವೈಜ್ಞಾನಿಕ ಸಾಕ್ಷ್ಯಗಳೊಂದಿಗೆ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಡ್ರಗ್ ಪೆಡ್ಲರ್ಗಳ ಜಾಲವನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರಿದಿದೆ. ಸುಲಿಗೆಗೆ ಒಳಗಾದವರು ಭಯಪಡದೆ ಪೊಲೀಸ್ ಠಾಣೆಗೆ ಬಂದು ದೂರು ನೀಡಬೇಕು. ಅವರಿಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಒಂಟಿ ಮಹಿಳೆ ಮೇಲೆ ಕಲ್ಲಿನಿಂದ ಹಲ್ಲೆ; ಮೊಬೈಲ್ ಸುಲಿಗೆಗೆ ಯತ್ನ

ಇದೇ ವೇಳೆ ಬೆಂಗಳೂರಿನ ಓಲ್ಡ್ ಮದ್ರಾಸ್ ರಸ್ತೆಯ ಮೇಡಹಳ್ಳಿ ಬ್ರಿಡ್ಜ್ ಸಮೀಪದ ಸ್ಕೈವಾಕ್ ಬಳಿ ಮತ್ತೊಂದು ಸುಲಿಗೆ ಯತ್ನದ ಘಟನೆ ನಡೆದಿದೆ. ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿದ ಆರೋಪಿ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಮಹಿಳೆ ಜೋರಾಗಿ ಕಿರುಚಿಕೊಂಡಿದ್ದರಿಂದ ಆಕ್ರೋಶಗೊಂಡ ಆರೋಪಿ ಕೈಗೆ ಸಿಕ್ಕ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ.

ಮಹಿಳೆಯ ಚೀರಾಟ ಕೇಳಿದ ತಕ್ಷಣ ಸ್ಥಳದಲ್ಲಿದ್ದ ಇಬ್ಬರು ಯುವಕರು ಧಾವಿಸಿ ಬಂದು ಆಕೆಗೆ ನೆರವಾಗಿದ್ದಾರೆ. ಈ ಸಂಬಂಧ ಕೆ.ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಬಾಬು ಎಂಬ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಒಂದೇ ದಿನ ನಗರದಲ್ಲಿ ನಡೆದ ಈ ಎರಡು ಪ್ರತ್ಯೇಕ ಘಟನೆಗಳು ರಾತ್ರಿ ವೇಳೆ ಸಂಚರಿಸುವ ಕ್ಯಾಬ್, ಬೈಕ್ ಚಾಲಕರು ಹಾಗೂ ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸಿವೆ. ಸುಲಿಗೆ ಮತ್ತು ಕಳ್ಳತನದಂತಹ ಕೃತ್ಯಗಳನ್ನು ತಡೆಗಟ್ಟಲು ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande