ಬಾಂಗ್ಲಾ: ಅವಾಮಿ ಲೀಗ್ಗೆ ನೆರವು ಆರೋಪ; ಪೊಲೀಸ್ ಅಧಿಕಾರಿ ಬಂಧನ, 101 ಬ್ಯಾಂಕ್ ಖಾತೆಗಳು ಸ್ಥಗಿತ
ಢಾಕಾ (ಬಾಂಗ್ಲಾದೇಶ), 26 ನವೆಂಬರ್ (ಹಿ.ಸ.): ಬಾಂಗ್ಲಾದೇಶದಲ್ಲಿ ನಿಷೇಧಿತ ಅವಾಮಿ ಲೀಗ್‌ಗೆ ಆರ್ಥಿಕ ನೆರವು ನೀಡಿದ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಡಿ ವಿಶೇಷ ಪೊಲೀಸ್ ಪಡೆಯ ಕಂಪನಿ ಕಮಾಂಡರ್ ಸೇರಿದಂತೆ ಹಲವು ಮಂದಿಯ ವಿರುದ್ಧ ತನಿಖೆ ತೀವ್ರಗೊಂಡಿದೆ. ಈ ನಡುವೆ, ಹಿಂಸಾಚಾರಕ್ಕೆ ಹಣಕಾಸು
बांग्लादेश के गोपालगंज में हिंसा। फोटो - इंटरनेट मीडिया


ಢಾಕಾ (ಬಾಂಗ್ಲಾದೇಶ), 26 ನವೆಂಬರ್ (ಹಿ.ಸ.):

ಬಾಂಗ್ಲಾದೇಶದಲ್ಲಿ ನಿಷೇಧಿತ ಅವಾಮಿ ಲೀಗ್‌ಗೆ ಆರ್ಥಿಕ ನೆರವು ನೀಡಿದ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಡಿ ವಿಶೇಷ ಪೊಲೀಸ್ ಪಡೆಯ ಕಂಪನಿ ಕಮಾಂಡರ್ ಸೇರಿದಂತೆ ಹಲವು ಮಂದಿಯ ವಿರುದ್ಧ ತನಿಖೆ ತೀವ್ರಗೊಂಡಿದೆ. ಈ ನಡುವೆ, ಹಿಂಸಾಚಾರಕ್ಕೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ 97 ವ್ಯಕ್ತಿಗಳು ಮತ್ತು ನಾಲ್ಕು ವ್ಯಾಪಾರ ಸಂಸ್ಥೆಗಳಿಗೆ ಸೇರಿದ ಒಟ್ಟು 101 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.

ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ನವೆಂಬರ್ 27 ಮತ್ತು 28ರಂದು ದೇಶವ್ಯಾಪಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ಶೇಖ್ ಹಸೀನಾ ಅವರ ತವರು ಜಿಲ್ಲೆ ಗೋಪಾಲಗಂಜ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಕುರಿತು ತನಿಖೆ ನಡೆಸುತ್ತಿರುವ ಗುಪ್ತಚರ ಸಂಸ್ಥೆಗಳಿಗೆ, ಅವಾಮಿ ಲೀಗ್‌ನ ಚಟುವಟಿಕೆಗಳಿಗೆ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಉದ್ಯಮಿಗಳು ಪ್ರಚೋದನೆ ಹಾಗೂ ಆರ್ಥಿಕ ನೆರವು ನೀಡಿರುವ ಮಾಹಿತಿ ಲಭ್ಯವಾಗಿದೆ ಎಂದು ವರದಿಗಳು ತಿಳಿಸಿವೆ.

'ಪ್ರೊಥೋಮ್ ಅಲೊ', 'ಢಾಕಾ ಟ್ರಿಬ್ಯೂನ್' ಮತ್ತು 'ದಿ ಡೈಲಿ ಸ್ಟಾರ್' ಪತ್ರಿಕೆಗಳ ವರದಿಗಳ ಪ್ರಕಾರ, ರಾಷ್ಟ್ರೀಯ ಕಂದಾಯ ಮಂಡಳಿ (ಎನ್‌ಬಿಆರ್) ಹಿಂಸಾಚಾರಕ್ಕೆ ಹಣಕಾಸು ನೆರವು ನೀಡಿದ ಆರೋಪದ ಹಿನ್ನೆಲೆಯಲ್ಲಿ 101 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ. ಈ ಖಾತೆಗಳು ಮಾಜಿ ಕಾರ್ಯದರ್ಶಿ, ನಿಷೇಧಿತ ಅವಾಮಿ ಲೀಗ್ ನಾಯಕರು ಹಾಗೂ ಜನಪ್ರತಿನಿಧಿಗಳಿಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ.

ಹಿಂಸಾಚಾರದ ಹಿಂದೆ ಸಂಘಟಿತ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಮತ್ತು ಆಡಳಿತ ವ್ಯವಸ್ಥೆಯೊಳಗಿನ ಕೆಲವರು ರಾಜಕೀಯ ಹಾಗೂ ಆರ್ಥಿಕ ಬೆಂಬಲ ಒದಗಿಸಿದ್ದಾರೆಯೇ ಎಂಬ ಎರಡು ಪ್ರಮುಖ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಕೇವಲ ಹಿಂಸಾಚಾರದಲ್ಲಿ ನೇರವಾಗಿ ಭಾಗಿಯಾದವರನ್ನು ಬಂಧಿಸುವುದರಿಂದ ಇಂತಹ ಘಟನೆಗಳನ್ನು ತಡೆಯಲು ಸಾಧ್ಯವಿಲ್ಲ. ಹೀಗಾಗಿ, ಘಟನೆಗಳ ಹಿಂದಿರುವ ಸಂಚುಕೋರರು, ಹಣಕಾಸು ನೆರವು ನೀಡಿದವರು ಮತ್ತು ಸಹಕರಿಸಿದವರನ್ನು ಪತ್ತೆಹಚ್ಚಲು ತನಿಖಾ ಸಂಸ್ಥೆಗಳು ಮುಂದಾಗಿವೆ.

ಗೋಪಾಲಗಂಜ್‌ನಲ್ಲಿ ಅವಾಮಿ ಲೀಗ್‌ನ ಕಾರ್ಯಕ್ರಮಗಳ ಸಂದರ್ಭದಲ್ಲಿ ನಡೆದ ವ್ಯಾಪಕ ಹಿಂಸಾಚಾರ ಮತ್ತು ಧ್ವಂಸ ಕೃತ್ಯಗಳಲ್ಲಿ ಪೊಲೀಸರ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮುಕ್ಸೂದ್‌ಪುರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆಯ ಬಳಿಕ ಹಿಂಸಾಚಾರದಲ್ಲಿ ಭಾಗಿಯಾದವರಿಗೆ ಪೊಲೀಸ್ ಅಥವಾ ಆಡಳಿತ ವ್ಯವಸ್ಥೆಯೊಳಗಿನ ವ್ಯಕ್ತಿಗಳಿಂದ ನೆರವು ದೊರೆತಿತ್ತೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಫರೀದ್‌ಪುರ ವಲಯದ ಮೂವತ್ತಕ್ಕೂ ಹೆಚ್ಚು ಪೊಲೀಸ್ ಮತ್ತು ಆಡಳಿತಾಧಿಕಾರಿಗಳನ್ನು ಗುಪ್ತಚರ ಸಂಸ್ಥೆಗಳು ನಿಗಾದಲ್ಲಿಟ್ಟಿವೆ ಎಂದು ವರದಿಯಾಗಿದೆ.

ಈ ಕುರಿತು ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ ಅಹ್ಸಾನ್ ಹಬೀಬ್ ಪಲಾಶ್ ಪ್ರತಿಕ್ರಿಯಿಸಿ, ಎಷ್ಟು ಮಂದಿ ಅಧಿಕಾರಿಗಳು ನಿಗಾದಲ್ಲಿದ್ದಾರೆ ಎಂಬ ಮಾಹಿತಿ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮೊಹಮ್ಮದ್ ಅಬುಲ್ ಹಸನ್ ಅವರನ್ನು ನವೆಂಬರ್ 23ರ ರಾತ್ರಿ ಢಾಕಾ ಮಹಾನಗರ ಪೊಲೀಸರ ಅಪರಾಧ ಪತ್ತೆ ವಿಭಾಗದ ಅಧಿಕಾರಿಗಳು ಮೈಮನ್‌ಸಿಂಗ್‌ನಲ್ಲಿರುವ ವಿಶೇಷ ಕ್ಷಿಪ್ರ ಪ್ರತಿಕ್ರಿಯಾ ಪಡೆ-14ರ ಕಚೇರಿಯಿಂದ ಬಂಧಿಸಿದ್ದಾರೆ. ಗೋಪಾಲಗಂಜ್‌ನ ಹಿಂಸಾಚಾರದಲ್ಲಿ ಅವರ ಪಾತ್ರವಿರುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ನ್ಯಾಯಾಲಯದಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಕೇಂದ್ರ ಕಚೇರಿ ಮೇಲಿನ ದಾಳಿ ಮತ್ತು ಪಕ್ಷದ ಕಾರ್ಯಕರ್ತ ಮಕ್ಬೂಲ್ ಹುಸೇನ್ ಹತ್ಯೆ ಪ್ರಕರಣದಲ್ಲಿ ಅವರನ್ನು ಬಂಧಿಸಿರುವುದಾಗಿ ದಾಖಲಿಸಲಾಗಿದೆ ಎನ್ನಲಾಗಿದೆ. ನವೆಂಬರ್ 24ರಂದು ನ್ಯಾಯಾಲಯದ ಆದೇಶದಂತೆ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಢಾಕಾ ಮಹಾನಗರ ಪೊಲೀಸ್ ಇಲಾಖೆಯ ಅಭಿಯೋಜನಾ ವಿಭಾಗದ ಸಹಾಯಕ ಉಪನಿರೀಕ್ಷಕ ರೊಕೋನುಜ್ಜಮಾನ್ ಬಂಧನವನ್ನು ಖಚಿತಪಡಿಸಿದ್ದಾರೆ.

ಮತ್ತೊಂದೆಡೆ, ರಾಜಧಾನಿ ಢಾಕಾದ ಗುಲ್ಶನ್ ಪ್ರದೇಶದ 41ನೇ ರಸ್ತೆಯ 74ನೇ ಮನೆಯೊಂದರಿಂದ ಅವಾಮಿ ಲೀಗ್‌ನ 20 ನಾಯಕರನ್ನು ಬಂಧಿಸಲಾಗಿದೆ. ಯುವ ದಳದ ನಾಯಕರು ಮತ್ತು ಕಾರ್ಯಕರ್ತರು ಅವರನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ವಶಕ್ಕೆ ಪಡೆದಿದ್ದಾರೆ ಎಂದು ಗುಲ್ಶನ್ ಪೊಲೀಸ್ ಠಾಣಾಧಿಕಾರಿ ಅಬು ಜಾಯೆದ್ ಮೊಹಮ್ಮದ್ ನಜ್ಮುನ್ ನೂರ್ ತಿಳಿಸಿದ್ದಾರೆ. ಬಂಧಿತರ ವಿರುದ್ಧ ಈ ಹಿಂದೆ ಪ್ರಕರಣಗಳು ದಾಖಲಾಗಿವೆಯೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಮಂಗಳವಾರ ರಾತ್ರಿ ಅವಾಮಿ ಲೀಗ್ ನಾಯಕ ಜಾವೇದ್ ದೀದಾರ್ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಇನ್ನೊಂದೆಡೆ, ಯುವ ದಳ ನವೆಂಬರ್ 29 ಮತ್ತು 30ರಂದು ದೇಶಾದ್ಯಂತ ಪ್ರತಿಭಟನೆಗಳು ಹಾಗೂ ಮೆರವಣಿಗೆಗಳನ್ನು ನಡೆಸಲು ನಿರ್ಧರಿಸಿದೆ. ದೇಶವನ್ನು ಅಸ್ಥಿರಗೊಳಿಸುವ ಸಂಚುಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುವ ದಳದ ನಾಯಕ ಮಿನ್ಹಾಜುಲ್ ಇಸ್ಲಾಂ ಭುಯಾನ್ ಹೇಳಿದ್ದಾರೆ.

ಅವಾಮಿ ಲೀಗ್ ನವೆಂಬರ್ 27 ಮತ್ತು 28ರಂದು ದೇಶವ್ಯಾಪಿ ಬಂದ್‌ಗೆ ಕರೆ ನೀಡಿದ್ದು, ಪಕ್ಷದ ಮೇಲಿನ ನಿಷೇಧವನ್ನು ತಕ್ಷಣವೇ ತೆರವುಗೊಳಿಸಬೇಕು, ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಹಾಗೂ ಶೇಖ್ ಹಸೀನಾ ಸೇರಿದಂತೆ ಪಕ್ಷದ ನಾಯಕರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ. ಡಿಸೆಂಬರ್ 16ರಂದು ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಮರಳುವುದಾಗಿ ಘೋಷಿಸಿರುವ ಬೆನ್ನಲ್ಲೇ ಈ ಬಂದ್‌ಗೆ ಕರೆ ನೀಡಲಾಗಿದ್ದು, ದೇಶದಲ್ಲಿ ರಾಜಕೀಯ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande