ಮನೆ ಪಾಠ ಮಾಡದ 2ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿಯರಿಂದ ಹಲ್ಲೆ ಆರೋಪ
ಬಾಗಲಕೋಟೆ , 26 ನವೆಂಬರ್ (ಹಿ.ಸ.) ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಎರಡನೇ ತರಗತಿಯ ಎಂಟು ವರ್ಷದ ವಿದ್ಯಾರ್ಥಿಯ ಮೇಲೆ ಶಿಕ್ಷಕಿ ಹಾಗೂ ಶಾಲೆಯ ಪ್ರಾಂಶುಪಾಲರು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ಕೇಳಿಬಂದಿದೆ. ಗ್ರಾಮದ ರಾಣಿ
ಹಲ್ಲೆ


ಬಾಗಲಕೋಟೆ , 26 ನವೆಂಬರ್ (ಹಿ.ಸ.)

ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಎರಡನೇ ತರಗತಿಯ ಎಂಟು ವರ್ಷದ ವಿದ್ಯಾರ್ಥಿಯ ಮೇಲೆ ಶಿಕ್ಷಕಿ ಹಾಗೂ ಶಾಲೆಯ ಪ್ರಾಂಶುಪಾಲರು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ಕೇಳಿಬಂದಿದೆ.

ಗ್ರಾಮದ ರಾಣಿ ಚೆನ್ನಮ್ಮ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಶ್ರೇಯಸ್ ಆಸಂಗಿ (8) ಹಲ್ಲೆಗೊಳಗಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಶಾಲೆಯ ಸಹ ಶಿಕ್ಷಕಿ ವಿಜಯಲಕ್ಷ್ಮಿ ತಳವಾರ ಹಾಗೂ ಪ್ರಾಂಶುಪಾಲ ಹಂಬಿ ಅವರು ಸೇರಿಕೊಂಡು ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೋಷಕ ಅನಿಲ್ ಆಸಾಂಗಿ ಆರೋಪಿಸಿದ್ದಾರೆ. ಹೋಂವರ್ಕ್ ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ಮಗುವಿಗೆ ಹೊಡೆದ ಪರಿಣಾಮ ಮೈಮೇಲೆ ಬಾಸುಂಡೆ ಹಾಗೂ ಗಾಯದ ಗುರುತುಗಳಾಗಿವೆ ಎಂದು ಪೋಷಕರು ದೂರಿದ್ದಾರೆ.

ಮನೆಯಲ್ಲಿದ್ದಾಗ ಮಗುವಿನ ಮೈಮೇಲಿನ ಗಾಯದ ಗುರುತುಗಳನ್ನು ಗಮನಿಸಿದ ಪೋಷಕರು ಆತಂಕಗೊಂಡು, ಶಿಕ್ಷಕರ ವರ್ತನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸುರಕ್ಷತೆ ಮತ್ತು ಉತ್ತಮ ವಾತಾವರಣ ಕಲ್ಪಿಸಬೇಕಾದ ಶಿಕ್ಷಕರಿಂದಲೇ ಇಂತಹ ಘಟನೆ ನಡೆದಿದೆ ಎನ್ನಲಾದ ಆರೋಪ ಪೋಷಕರಲ್ಲಿ ಅಸಮಾಧಾನ ಮೂಡಿಸಿದೆ.

ಘಟನೆಯ ಬಳಿಕ ಬಾಲಕನನ್ನು ಜಮಖಂಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಬಾಲಕನ ಪೋಷಕರು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಸಹ ಶಿಕ್ಷಕಿ ವಿಜಯಲಕ್ಷ್ಮಿ ತಳವಾರ ಹಾಗೂ ಪ್ರಾಂಶುಪಾಲ ಹಂಬಿ ಅವರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

ಮಕ್ಕಳಿಗೆ ಶಿಕ್ಷಣ ನೀಡುವ ಹೆಸರಿನಲ್ಲಿ ದೈಹಿಕ ಶಿಕ್ಷೆ ನೀಡುವ ಆರೋಪಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರಕರಣದ ಕುರಿತು ಪೊಲೀಸರು ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕಿದೆ. ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಕೂಡ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಬೇಕೆಂಬ ಒತ್ತಾಯ ಮಾಡಿದ್ದಾರೆ

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande