
ಬಳ್ಳಾರಿ, 26 ನವೆಂಬರ್ (ಹಿ.ಸ.)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆದೇಶದ ಮೇರೆಗೆ ಬಳ್ಳಾರಿ ಜಿಲ್ಲೆಯಾದ್ಯಂತ ನವೆಂಬರ್ 25ರಂದು ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರ ಅಭಿಯಾನ ಯಶಸ್ವಿಯಾಗಿ ನಡೆದಿದ್ದು, ಜಿಲ್ಲೆಯ 16 ವಿವಿಧ ಸ್ಥಳಗಳಲ್ಲಿ ಒಟ್ಟು 1,005 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರ ಪಿ. ಗಾದೆಪ್ಪ ಅವರು ಸ್ವತಃ ರಕ್ತದಾನ ಮಾಡುವ ಮೂಲಕ ಸಾರ್ವಜನಿಕರಿಗೆ ಮಾದರಿಯಾದರು. ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಹಾಗೂ ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಅವರೂ ರಕ್ತದಾನ ಮಾಡಿ ಅಭಿಯಾನಕ್ಕೆ ಪ್ರೋತ್ಸಾಹ ನೀಡಿದರು.
'ರಕ್ತದಾನ ಮಹಾದಾನ – ನಿಮ್ಮ ಒಂದು ಹನಿ ರಕ್ತ ಮತ್ತೊಬ್ಬರ ಬದುಕಿಗೆ ಸಂಜೀವಿನಿ' ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಅಭಿಯಾನದಲ್ಲಿ ವಿವಿಧ ಇಲಾಖೆಗಳು, ರಕ್ತನಿಧಿ ಕೇಂದ್ರಗಳು, ಸಮಗ್ರ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳು, ಸ್ವಯಂಸೇವಾ ಸಂಸ್ಥೆಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ತಾಲೂಕುವಾರು ರಕ್ತ ಸಂಗ್ರಹಣೆ
ಬಳ್ಳಾರಿ ನಗರ ಮತ್ತು ತಾಲೂಕಿನಲ್ಲಿ ಬಿಐಟಿಎಂ ಕಾಲೇಜಿನಲ್ಲಿ 147, ಆರ್.ವೈ.ಎಂ.ಇ.ಸಿ. ಕಾಲೇಜಿನಲ್ಲಿ 89, ನೂತನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 72, ಕೆಪಿಟಿಸಿಎಲ್‌ನಲ್ಲಿ 63, ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ 61, ದೇವನ್ ಮಸ್ತಾನ್ ದರ್ಗಾದಲ್ಲಿ 30, ಜಿಲ್ಲಾ ಆಸ್ಪತ್ರೆಯಲ್ಲಿ 18 ಹಾಗೂ ಕೃಷಿ ಮಾರುಕಟ್ಟೆಯಲ್ಲಿ 13 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ.
ಸಂಡೂರು ತಾಲೂಕಿನಲ್ಲಿ ಶ್ರೀ ಕುಮಾರಸ್ವಾಮಿ ದೇವಸ್ಥಾನದಲ್ಲಿ 145, ಎನ್.ಎಂ.ಡಿ.ಸಿ.ಯಲ್ಲಿ 46 ಹಾಗೂ ತೋರಣಗಲ್ಲು ಜಿಂದಾಲ್‌ನಲ್ಲಿ 20 ಯೂನಿಟ್ ರಕ್ತ ಸಂಗ್ರಹವಾಗಿದೆ.
ಸಿರುಗುಪ್ಪ ತಾಲೂಕಿನಲ್ಲಿ ಕಿಷ್ಕಿಂಧಾ ವಿಶ್ವವಿದ್ಯಾಲಯದಲ್ಲಿ 105, ಸಾರ್ವಜನಿಕ ಶಿಬಿರದಲ್ಲಿ 24 ಹಾಗೂ ಆಕ್ಸಿಸ್ ಬ್ಯಾಂಕ್‌ನಲ್ಲಿ 14 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. ಕಂಪ್ಲಿಯಲ್ಲಿ 81 ಹಾಗೂ ಕುರುಗೋಡಿನಲ್ಲಿ 77 ಯೂನಿಟ್ ರಕ್ತ ಸಂಗ್ರಹವಾಗಿದೆ.
ಬಳ್ಳಾರಿ ನಗರದ ಬಿಐಟಿಎಂ ಕಾಲೇಜು, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ಕಿಷ್ಕಿಂಧಾ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಗ್ರಹಿಸಲು ಗಣನೀಯ ಸಹಕಾರ ನೀಡಿವೆ. ಈ ಸಂಸ್ಥೆಗಳ ಆಡಳಿತ ಮಂಡಳಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸ್ವಯಂಪ್ರೇರಿತ ಸೇವೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಶೇಷವಾಗಿ ಅಭಿನಂದಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಲಕಾನಂದ ಮಳಗಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್