ಶೋಷಿತರ ಧ್ವನಿಯಾದ ಮಂಜುಳಾ ಅವರ ಕಾವ್ಯಯಾನ
ಗದಗ, 25 ನವೆಂಬರ್ (ಹಿ.ಸ.) ಸಾಹಿತ್ಯವು ಕೇವಲ ಮನರಂಜನೆಯ ಸಾಧನವಲ್ಲ. ಅದು ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸಿ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು ಸಮಾನತೆಯ ಕನಸುಗಳನ್ನು ಬಿತ್ತುವ ಪ್ರಬಲ ಅಭಿವ್ಯಕ್ತಿ ಮಾಧ್ಯಮವಾಗಿದೆ ಎಂದು ಲಕ್ಕುಂಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮೀರನಾಯಕ (ಕಲ್ಲಿಗನ
ಫೋಟೋ


ಗದಗ, 25 ನವೆಂಬರ್ (ಹಿ.ಸ.)

ಸಾಹಿತ್ಯವು ಕೇವಲ ಮನರಂಜನೆಯ ಸಾಧನವಲ್ಲ. ಅದು ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸಿ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು ಸಮಾನತೆಯ ಕನಸುಗಳನ್ನು ಬಿತ್ತುವ ಪ್ರಬಲ ಅಭಿವ್ಯಕ್ತಿ ಮಾಧ್ಯಮವಾಗಿದೆ ಎಂದು ಲಕ್ಕುಂಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮೀರನಾಯಕ (ಕಲ್ಲಿಗನೂರ) ಹೇಳಿದರು.

ಕವಯತ್ರಿ ಮಂಜುಳಾ ವೆಂಕಟೇಶಯ್ಯ ಅವರ ಎರಡು ದಶಕಗಳ ಸಾಹಿತ್ಯ ತಪಸ್ಸಿನ ಫಲವಾಗಿ ಮೂಡಿಬಂದಿರುವ ‘ಮಹಾಪಯಣ’ ಕವನ ಸಂಕಲನದ ಕುರಿತು ಮಾತನಾಡಿದ ಅವರು, ಈ ಕೃತಿಯು ವೈಚಾರಿಕ ನಿಲುವು ಹಾಗೂ ಸಾಮಾಜಿಕ ಬದ್ಧತೆಯಿಂದ ಸಮಕಾಲೀನ ಕನ್ನಡ ಸಾಹಿತ್ಯ ಲೋಕದಲ್ಲಿ ಗಮನ ಸೆಳೆಯುತ್ತಿದೆ ಎಂದರು.

ಗೌತಮ ಬುದ್ಧನ ಕರುಣೆ, ಬಸವಣ್ಣನವರ ಸಮತೆಯ ಸಂದೇಶ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಸಮಾನತೆಯ ಚಿಂತನೆಗಳು ಕೃತಿಯ ಕಾವ್ಯಪ್ರಜ್ಞೆಗೆ ಭದ್ರ ಬುನಾದಿಯಾಗಿವೆ. ಜಾತಿ ಅಸಮಾನತೆ, ಶೋಷಣೆ, ದಮನ ಹಾಗೂ ಸಾಮಾಜಿಕ ಅನ್ಯಾಯಗಳ ವಿರುದ್ಧ ಕವಯತ್ರಿ ತಮ್ಮ ಕವಿತೆಗಳ ಮೂಲಕ ವೈಚಾರಿಕ ಧ್ವನಿ ಎತ್ತಿದ್ದಾರೆ ಎಂದು ತಿಳಿಸಿದರು.

ಗೃಹಿಣಿಯಾಗಿ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಮಂಜುಳಾ ಅವರ ಕವಿತೆಗಳಲ್ಲಿ ಮಹಿಳೆಯರ ಬದುಕಿನ ತಲ್ಲಣಗಳು, ನೋವು, ಆತ್ಮಸ್ಥೈರ್ಯ ಹಾಗೂ ಸ್ವಾಭಿಮಾನದ ಹಂಬಲಗಳು ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿವೆ. ಸಾವಿತ್ರಿಬಾಯಿ ಫುಲೆ ಮತ್ತು ರಮಾಬಾಯಿ ಅಂಬೇಡ್ಕರ್ ಅವರಂತಹ ಮಹನೀಯರ ಚಿಂತನೆಗಳ ಪ್ರಭಾವ ಕೃತಿಯಲ್ಲಿ ಕಾಣುತ್ತದೆ ಎಂದರು.

ಒಟ್ಟು 61 ಕವಿತೆಗಳನ್ನು ಒಳಗೊಂಡಿರುವ ಈ ಸಂಕಲನದಲ್ಲಿ ಕಂಬಾಲಪಲ್ಲಿಯ ದುರಂತ, ಹತ್ಯೆಯಾಗುತ್ತಿರುವ ಮಾನವೀಯ ಮೌಲ್ಯಗಳು, ಸಾಮಾಜಿಕ ಸೌಹಾರ್ದತೆ, ಕೊರೊನಾ ಕಾಲದ ಕರಾಳ ನೆನಪುಗಳು, ರೈತರ ಬದುಕು ಸೇರಿದಂತೆ ಹಲವು ವೈವಿಧ್ಯಮಯ ವಿಷಯಗಳನ್ನು ಕವಯತ್ರಿ ಕಾವ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ. ಚಂಪಾ, ಕುವೆಂಪು ಹಾಗೂ ಬೇಂದ್ರೆ ಅವರ ಸಾಹಿತ್ಯಿಕ ಪ್ರಭಾವವೂ ಕೃತಿಯಲ್ಲಿ ಗೋಚರಿಸುತ್ತದೆ ಎಂದು ಹೇಳಿದರು.

ಶಿಕ್ಷಣ, ಸಾಹಿತ್ಯ, ಧರ್ಮಸಮನ್ವಯ ಹಾಗೂ ತ್ರಿವಿಧ ದಾಸೋಹದ ಮೂಲಕ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಿದ ಗದುಗಿನ ಕನ್ನಡ ಜಗದ್ಗುರು ತೋಂಟದ ಸಿದ್ಧಲಿಂಗ ಶ್ರೀಗಳ ಸ್ಮರಣೆಗೆ ಈ ಕೃತಿಯನ್ನು ಅರ್ಪಿಸಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಡಾ.ಶ್ಯಾಮಸುಂದರ ಬಿದರಕುಂದಿ ಅವರ ಪ್ರೋತ್ಸಾಹದಿಂದ ಕವಯತ್ರಿಯ ಸಾಹಿತ್ಯ ಪಯಣ ಆರಂಭಗೊಂಡಿದ್ದು, ಹಿರಿಯ ವಿದ್ವಾಂಸರಿಂದಲೂ ಕೃತಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಡಾ.ಸತ್ಯಮಂಗಲ ಮಹಾದೇವ ಅವರು ಮುನ್ನುಡಿಯಲ್ಲಿ ಕವಿತೆಗಳ ಜೀವಪೋಷಕ ಗುಣವನ್ನು ವಿಶ್ಲೇಷಿಸಿದ್ದು, ಡಾ.ಲಕ್ಷ್ಮೀನಾರಾಯಣ ಸ್ವಾಮಿ ಅವರು ಆಶಯ ನುಡಿಯಲ್ಲಿ ಸಂವಿಧಾನದ ಆಶಯ ಮತ್ತು ಅಕ್ಷರದ ಮಹತ್ವವನ್ನು ಗುರುತಿಸಿದ್ದಾರೆ. ಸುಬ್ಬು ಹೊಲೆಯಾರ್ ಅವರು ಬೆನ್ನುಡಿಯಲ್ಲಿ ಮಹಿಳೆಯರು ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳ ಜಾಗೃತಿಗೆ ಈ ಕವಿತೆಗಳು ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ, ಮನುಷ್ಯನೊಳಗಿನ ಮಾನವೀಯತೆಯನ್ನು ಜಾಗೃತಗೊಳಿಸಿ ಸಮಾನತೆಯ ಬೆಳಕಿನೆಡೆಗೆ ಸಮಾಜವನ್ನು ಮುನ್ನಡೆಸುವ ಆಶಯವನ್ನು ‘ಮಹಾಪಯಣ’ ಕವನ ಸಂಕಲನ ಹೊಂದಿದೆ. ಓದುಗರಲ್ಲಿ ಚಿಂತನೆ, ಸಂವಾದ ಹಾಗೂ ಸಾಮಾಜಿಕ ಪ್ರಜ್ಞೆ ಬೆಳೆಸುವ ಮಹತ್ವದ ಕೃತಿಯಾಗಿದೆ ಎಂದು ಅಮೀರನಾಯಕ (ಕಲ್ಲಿಗನೂರ) ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande