
ವಿಜಯಪುರ, 25 ನವೆಂಬರ್ (ಹಿ.ಸ.)
ಒಂದು ಕಾಲದಲ್ಲಿ ವಿಜಯಪುರ ನಗರದ ಪ್ರಮುಖ ಸಂಪರ್ಕ ಸಾಧನವಾಗಿದ್ದ ಹಾಗೂ ಪ್ರವಾಸಿಗರ ಅಚ್ಚುಮೆಚ್ಚಿನ ಸಾರಿಗೆ ವ್ಯವಸ್ಥೆಯಾಗಿದ್ದ ಕುದುರೆ ಟಾಂಗಾಗಳು ಆಧುನಿಕ ಸಾರಿಗೆ ವ್ಯವಸ್ಥೆಯ ಭರಾಟೆಯಲ್ಲಿ ಕ್ರಮೇಣ ನೇಪಥ್ಯಕ್ಕೆ ಸರಿದಿದ್ದವು. ಇದೀಗ ಐತಿಹಾಸಿಕ ಪರಂಪರೆಯ ಸಂಕೇತವಾಗಿರುವ ಕುದುರೆ ಟಾಂಗಾಗಳಿಗೆ ಮತ್ತೆ ಉತ್ತೇಜನ ನೀಡುವ ಮೂಲಕ ನಗರದ ಪ್ರವಾಸೋದ್ಯಮಕ್ಕೆ ಹೊಸ ಮೆರುಗು ನೀಡಲು ಜಿಲ್ಲಾಡಳಿತ ಮುಂದಾಗಿದೆ.
ನಗರದ ಜಿಲ್ಲಾಧಿಕಾರಿಗಳ ನಿವಾಸದ ಎದುರು ಇಂದು ಕುದುರೆ ಟಾಂಗಾಗಳು ಸಂಚರಿಸುವ ಮೂಲಕ ಸಾರ್ವಜನಿಕರ ಹಾಗೂ ಪ್ರವಾಸಿಗರ ಗಮನ ಸೆಳೆದವು.
ಸುಮಾರು ಎರಡು ದಶಕಗಳ ಹಿಂದೆ ವಿಜಯಪುರ ನಗರಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯರು ನಗರದ ವಿವಿಧ ಪ್ರದೇಶಗಳಿಗೆ ತೆರಳಲು ಕುದುರೆ ಟಾಂಗಾಗಳನ್ನೇ ಪ್ರಮುಖ ಸಾರಿಗೆ ಸಾಧನವಾಗಿ ಬಳಸುತ್ತಿದ್ದರು. ಆಟೋ ರಿಕ್ಷಾಗಳ ಬಳಕೆ ಹೆಚ್ಚಾಗುವ ಮುನ್ನ ಟಾಂಗಾಗಳು ನಗರದ ಸಂಚಾರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಕುದುರೆಗಳ ಹೆಜ್ಜೆಯ ಸದ್ದು, ಟಾಂಗಾಗಳ ಸಂಚಾರ ಹಾಗೂ ಅವುಗಳ ವಿಶಿಷ್ಟ ವಿನ್ಯಾಸ ನಗರದ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತಿದ್ದವು.
ಆದರೆ ಕಾಲ ಬದಲಾದಂತೆ ಆಧುನಿಕ ವಾಹನಗಳ ಬಳಕೆ ಹೆಚ್ಚಾಯಿತು. ಇದರ ಪರಿಣಾಮವಾಗಿ ಟಾಂಗಾಗಳ ಸಂಚಾರ ಕಡಿಮೆಯಾಗಿ, ಅವು ಕೇವಲ ಪ್ರವಾಸಿಗರ ಆಕರ್ಷಣೆಗೆ ಮಾತ್ರ ಸೀಮಿತವಾಗುವಂತಾಯಿತು.
ಈ ಹಿನ್ನೆಲೆಯಲ್ಲಿ ವಿಜಯಪುರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಕುದುರೆ ಟಾಂಗಾಗಳ ಬಳಕೆಗೆ ಪ್ರೋತ್ಸಾಹ ನೀಡುವ ಪ್ರಯತ್ನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಂಗಾಗಳ ಸಂಚಾರಕ್ಕೆ ಉತ್ತೇಜನ ನೀಡುವುದರ ಜೊತೆಗೆ ಪ್ರವಾಸಿಗರು ಈ ಸಾಂಪ್ರದಾಯಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವಂತೆ ಜಾಗೃತಿ ಮೂಡಿಸಲಾಯಿತು.
ವಿಜಯಪುರ ನಗರವು ಗೋಲಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದ್ದು, ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಪ್ರವಾಸಿಗರಿಗೆ ನಗರದ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಯ ಜೊತೆಗೆ ಹಳೆಯ ಕಾಲದ ಕುದುರೆ ಟಾಂಗಾ ಸವಾರಿಯ ಅನುಭವವನ್ನೂ ಒದಗಿಸುವುದು ಈ ಪ್ರಯತ್ನದ ಉದ್ದೇಶವಾಗಿದೆ.
ಈ ಕುರಿತು ಮಾತನಾಡಿದ ಟಾಂಗಾ ಚಾಲಕರ ಸಂಘದ ಅಧ್ಯಕ್ಷ ಚಿನ್ನು ಕಟ್ಟಿಮನಿ ಅವರು, ಒಂದು ಕಾಲದಲ್ಲಿ ನಗರದ ಜನಜೀವನದ ಅವಿಭಾಜ್ಯ ಅಂಗವಾಗಿದ್ದ ಟಾಂಗಾಗಳು ಇಂದು ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಿವೆ. ವಿಜಯಪುರಕ್ಕೆ ಆಗಮಿಸುವ ಪ್ರವಾಸಿಗರು ಕುದುರೆ ಟಾಂಗಾ ಸವಾರಿಯನ್ನು ಒಮ್ಮೆ ಅನುಭವಿಸಬೇಕು. ಇದರಿಂದ ನಗರದ ಹಳೆಯ ಸಂಸ್ಕೃತಿ ಮತ್ತು ಸಾರಿಗೆ ಪರಂಪರೆಯನ್ನು ಪರಿಚಯಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ನಗರಕ್ಕೆ ಭೇಟಿ ನೀಡುವ ಪ್ರವಾಸಿಗರು ಖಂಡಿತವಾಗಿಯೂ ಕುದುರೆ ಟಾಂಗಾ ಬಳಕೆ ಮಾಡಿ ಹೊಸ ಅನುಭವ ಪಡೆಯಬೇಕು. ಟಾಂಗಾ ಸಂಚಾರಕ್ಕೆ ಉತ್ತೇಜನ ದೊರೆತರೆ ಚಾಲಕರ ಜೀವನೋಪಾಯಕ್ಕೂ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಒಟ್ಟಾರೆ, ಆಧುನಿಕತೆಯ ನಡುವೆ ಮರೆಯಾಗುತ್ತಿರುವ ಹಳೆಯ ಸಾರಿಗೆ ಪರಂಪರೆಯನ್ನು ಮತ್ತೆ ಮುನ್ನೆಲೆಗೆ ತರುವ ಜಿಲ್ಲಾಡಳಿತದ ಈ ಪ್ರಯತ್ನವು ವಿಜಯಪುರದ ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆ ನೀಡುವ ನಿರೀಕ್ಷೆ ಮೂಡಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande