ಭಾರತವನ್ನು ಜಾಗತಿಕ ಜ್ಞಾನ ಕೇಂದ್ರವನ್ನಾಗಿಸಲು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಒತ್ತು: ಪ್ರಹ್ಲಾದ ಜೋಶಿ
ವಿದೇಶಗಳಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ವಿಸ್ತರಣೆ, ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಸ್ಥಾಪನೆ ಕುರಿತು ಚರ್ಚೆ
ಸಂಸತ್ತಿನ ಶಿಕ್ಷಣ ಸಲಹಾ ಸಮಿತಿಯ ಮೊದಲ ಸಭೆ


ನವದೆಹಲಿ, 25 ನವೆಂಬರ್ (ಹಿ.ಸ.):

ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಿ, ಭಾರತವನ್ನು ವಿಶ್ವದ ಪ್ರಮುಖ ಜ್ಞಾನ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ 2026ನೇ ಸಾಲಿನ ಸಂಸತ್ತಿನ ಶಿಕ್ಷಣ ಸಲಹಾ ಸಮಿತಿಯ ಮೊದಲ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಹಿಸಿದ್ದರು.

'ಭಾರತೀಯ ಶಿಕ್ಷಣದ ಅಂತಾರಾಷ್ಟ್ರೀಕರಣ' ಎಂಬ ವಿಷಯದಡಿ ನಡೆದ ಸಭೆಯಲ್ಲಿ ಭಾರತೀಯ ವಿಶ್ವವಿದ್ಯಾಲಯಗಳನ್ನು ವಿದೇಶಗಳಲ್ಲಿ ವಿಸ್ತರಿಸುವುದು, ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಅನುಕೂಲ ಕಲ್ಪಿಸುವುದು, ಅಂತಾರಾಷ್ಟ್ರೀಯ ಸಂಶೋಧನಾ ಸಹಭಾಗಿತ್ವ ಬಲಪಡಿಸುವುದು ಹಾಗೂ ವಿದ್ಯಾರ್ಥಿ ಮತ್ತು ಬೋಧಕ ವರ್ಗದ ವಿನಿಮಯ ಕಾರ್ಯಕ್ರಮಗಳನ್ನು ಉತ್ತೇಜಿಸುವ ಕುರಿತು ಚರ್ಚಿಸಲಾಯಿತು.

ಇದರ ಜತೆಗೆ ವಿದೇಶಿ ವಿದ್ಯಾರ್ಥಿಗಳನ್ನು ಭಾರತದ ಶಿಕ್ಷಣ ಸಂಸ್ಥೆಗಳತ್ತ ಆಕರ್ಷಿಸುವ ಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ ಜಾಗತಿಕ ವಿಸ್ತರಣಾ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆಯ ವಿಸ್ತರಣೆ ಮೂಲಕ ಶಾಲಾ ಶಿಕ್ಷಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಿತಿ ಸದಸ್ಯರಿಗೆ ಮಾಹಿತಿ ನೀಡಲಾಯಿತು.

ಬಹುಭಾಷಾ ಕಲಿಕೆ, ಶಿಕ್ಷಕರ ಅಂತಾರಾಷ್ಟ್ರೀಯ ಚಲನವಲನಕ್ಕೆ ಅವಕಾಶ, ಪಠ್ಯಕ್ರಮ ಸುಧಾರಣೆ ಮತ್ತು ವಿವಿಧ ಸಂಸ್ಕೃತಿಗಳ ಪರಿಚಯದ ಮೂಲಕ ವಿದ್ಯಾರ್ಥಿಗಳಿಗೆ ಜಾಗತಿಕ ಅನುಭವ ಒದಗಿಸುವ ಪ್ರಯತ್ನಗಳ ಬಗ್ಗೆಯೂ ಸಭೆಯಲ್ಲಿ ವಿವರಿಸಲಾಯಿತು.

ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತ-2047ರ ದೂರದೃಷ್ಟಿಗೆ ಅನುಗುಣವಾಗಿ ಭಾರತೀಯ ಮೌಲ್ಯಗಳನ್ನು ಆಧರಿಸಿದ, ಜಾಗತಿಕ ಸಂಪರ್ಕ ಹೊಂದಿರುವ ಹಾಗೂ ಭವಿಷ್ಯದ ಅಗತ್ಯಗಳಿಗೆ ಸಿದ್ಧವಾಗಿರುವ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವುದು ಸರ್ಕಾರದ ಸಂಕಲ್ಪವಾಗಿದೆ ಎಂದು ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande