


ಬಳ್ಳಾರಿ, 25 ನವೆಂಬರ್ (ಹಿ.ಸ.)
ರಕ್ತದ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮಹತ್ವದ ರಕ್ತದಾನ ಅಭಿಯಾನವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಯಾವುದೇ ಭಯವಿಲ್ಲದೆ ಸ್ವಯಂಪ್ರೇರಿತವಾಗಿ ರಕ್ತದಾನಕ್ಕೆ ಮುಂದೆ ಬರಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.
ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ತು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟಿಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ರಕ್ತದ ಕೊರತೆ ಇರುವುದರಿಂದ ಈ ಅಭಿಯಾನ ಕೈಗೊಳ್ಳಲಾಗಿದೆ. ಕೇವಲ ಅಧಿಕೃತ ವ್ಯವಸ್ಥೆಯಿಂದ ಮಾತ್ರ ಇದು ಸಾಧ್ಯವಿಲ್ಲ; ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರಕ್ತದಾನವೆಂದರೆ ದೊಡ್ಡ ಶಸ್ತಚಿಕಿತ್ಸೆಯೇನೋ ಎಂಬ0ತೆ ಹಲವರು ಭಯಪಡುತ್ತಾರೆ. 50–60 ವರ್ಷದ ದಷ್ಟಪುಷ್ಟ ಪೈಲ್ವಾನ್ ಗಳೂ ರಕ್ತದಾನದ ಮಾತು ಕೇಳಿದ ತಕ್ಷಣ ಹಿಂದೇಟು ಹಾಕುವುದನ್ನು ನೋಡಿದ್ದೇವೆ. ಆದರೆ ಅದರಲ್ಲಿ ಆತಂಕಪಡುವ0ತಹದ್ದೇನೂ ಇಲ್ಲ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗಿ, ದಾನಿಗಳ ಆರೋಗ್ಯವೂ ಇನ್ನಷ್ಟು ಉತ್ತಮವಾಗುತ್ತದೆ ಎಂದು ತಿಳಿಸಿದರು.
ಅಪಘಾತಗಳಂತಹ ತುರ್ತು ಸಂದರ್ಭಗಳಲ್ಲಿ ರಾತ್ರಿ ವೇಳೆ ನಿರ್ದಿಷ್ಟ ಗುಂಪಿನ ರಕ್ತ ಲಭ್ಯವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗುತ್ತದೆ; ಗರ್ಭಿಣಿಯರಿಗೂ ಕೆಲವೊಮ್ಮೆ ರಕ್ತದ ತುರ್ತು ಅವಶ್ಯವಿರುತ್ತದೆ. ಇಂತಹ ಸಂದರ್ಭಗಳಲ್ಲಿ ಎಲ್ಲರೂ ಒಟ್ಟಾಗಿ ಸಹಕರಿಸಿದರೆ ಸಂಕಷ್ಟದಲ್ಲಿರುವ ರೋಗಿಗಳಿಗೆ ನೆರವಾಗುವುದರ ಜೊತೆಗೆ ಜೀವದಾನ ಮಾಡಿದ ಪುಣ್ಯ ಸಿಗುತ್ತದೆ ಎಂದು ಶಾಸಕರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಲಕಾನಂದ ಡಿ.ಮಳಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಕ್ತದಾನವು ಶ್ರೇಷ್ಠವಾದ ದಾನವಾಗಿದ್ದು, ಆರೋಗ್ಯ ರಕ್ಷಣೆ ಹಾಗೂ ತುರ್ತು ವೈದ್ಯಕೀಯ ಅಗತ್ಯಗಳಿಗೆ ರಕ್ತ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಆರೋಗ್ಯವನ್ನು ಕಾಪಾಡಿಕೊಳ್ಳಲು ರಕ್ತದ ಅವಶ್ಯಕತೆ ಇದೆ. ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ಸುಮಾರು 5 ಲೀಟರ್ ನಷ್ಟು ರಕ್ತವಿರುತ್ತದೆ; ರಕ್ತದಾನ ಮಾಡಿದರೆ ದೇಹದಲ್ಲಿ ಮತ್ತೆ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಎಂದು ಹೇಳಿದರು.
ಗರ್ಭಿಣಿಯರು, ಹಿಮೋಫಿಲಿಯಾ, ಸಿಕಲ್ ಸೆಲ್ ಅನಿಮಿಯಾ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಕ್ತದ ಮಹತ್ವ ಹೆಚ್ಚಿದೆ. ಸುಮಾರು 36,000 ಗರ್ಭಿಣಿಯರ ಪೈಕಿ ಶೇ. 15ರಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವ ಸಾಧ್ಯತೆ ಇರುವುದರಿಂದ, ಅವರಿಗೆ ಸಕಾಲದಲ್ಲಿ ರಕ್ತ ದೊರೆಯುವುದು ಅತ್ಯಗತ್ಯವಾಗಿದೆ ಎಂದು ವಿವರಿಸಿದರು.
ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಮುಂದಿನ ದಿನಗಳಲ್ಲೂ ಎಲ್ಲಾ ಸಂಘ-ಸ0ಸ್ಥೆಗಳು ಮತ್ತು ನಾಗರಿಕರು ಕೈಜೋಡಿಸಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಶಿಬಿರದಲ್ಲಿ ರಕ್ತದಾನ ಮಾಡುವವರಿಗಾಗಿ ನೋಂದಣಿ ವ್ಯವಸ್ಥೆ ಮಾಡಲಾಗಿದ್ದು, ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್. ಮಂಜುನಾಥ್, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ- ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಭಾಗವಹಿಸಿ ರಕ್ತ ದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ಹಾಗೂ ಜ್ಯೂಸ್ ವಿತರಿಸಲಾಯಿತು.
ಬಳ್ಳಾರಿ ನಗರದ ಹೊಸ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಕೃಷಿ ಮಾರುಕಟ್ಟೆ, ಜಿಲ್ಲಾ ಆಸ್ಪತ್ರೆ, ಬಿಐಟಿಎಂ ಕಾಲೇಜು, ಶ್ರೀ ಕೃಷ್ಟದೇವರಾಯ ವಿಶ್ವವಿದ್ಯಾಲಯ, ಬಿಎಂಸಿಆರ್ಸಿ, ಕೌಲ್ ಬಜಾರ್, ಗಾಂಧಿನಗರ ಸುವರ್ಣ ಇಂಟರ್ ನ್ಯಾಷನಲ್ ಶಾಲೆ, ಕುಡತಿನಿಯ ಕೆಪಿಟಿಸಿಎಲ್. ಸಿರುಗುಪ್ಪದ ಕಿಷ್ಕಂದಾ ವಿಶ್ವವಿದ್ಯಾಲಯ, ಬಸ್ ನಿಲ್ದಾಣ. ಸಂಡೂರಿನ ಎನ್ ಎಮ್ ಡಿ ಸಿ, ಶ್ರೀ ಕುಮಾರಸ್ವಾಮಿ ದೇವಸ್ಥಾನ, ತೋರಣಗಲ್ಲು ಸಂಜೀವಿನಿ ಆಸ್ಪತ್ರೆ. ಕುರುಗೋಡು ಪಟ್ಟಣದ ಈಶ್ವರ್ ಪಾರ್ಕ್ ಹತ್ತಿರ ಹಳೆ ಬಸ್ ನಿಲ್ದಾಣ. ಕಂಪ್ಲಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಎಮ್ಮಿಗನೂರು ಸೇರಿದಂತೆ 20 ಸ್ಥಳಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎನ್ ಬಸರೆಡ್ಡಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ವೀರ ಕುಮಾರ್ ರೆಡ್ಡಿ, ಜಿಲ್ಲಾ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಡಾ.ಮಂಜುಳಾ, ಜಿಲ್ಲಾ ಆಸ್ಪತ್ರೆಯ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ.ಉದಯ್ ಶಂಕರ್ ಸೇರಿದಂತೆ ಇತರೆ ಅಧಿಕಾರಿ- ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್