ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನೆಗೆ ₹11 ಸಾವಿರ ಕೋಟಿ ಪ್ರೋತ್ಸಾಹಕ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ನವದೆಹಲಿ, 25 ನವೆಂಬರ್ (ಹಿ.ಸ.): ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಹಾಗೂ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ₹11 ಸಾವಿರ ಕೋಟಿ ಮೊತ್ತದ ಪ್ರೋತ್ಸಾಹಕ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಪ್ರಧಾನಮಂತ್
विनिर्माण सामग्री (प्रतिनिधि चित्र)


ನವದೆಹಲಿ, 25 ನವೆಂಬರ್ (ಹಿ.ಸ.):

ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಹಾಗೂ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ₹11 ಸಾವಿರ ಕೋಟಿ ಮೊತ್ತದ ಪ್ರೋತ್ಸಾಹಕ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನಾ ವ್ಯವಸ್ಥೆ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಲಾಯಿತು.

ಸಚಿವ ಸಂಪುಟದ ನಿರ್ಧಾರಗಳ ಕುರಿತು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದರು.

ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳು ಹಾಗೂ ಅವುಗಳ ಬಿಡಿಭಾಗಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. 2026-27ನೇ ಆರ್ಥಿಕ ವರ್ಷದಿಂದ 2033-34ನೇ ಆರ್ಥಿಕ ವರ್ಷದವರೆಗೆ ಒಟ್ಟು ಎಂಟು ವರ್ಷಗಳ ಅವಧಿಗೆ ಯೋಜನೆ ಜಾರಿಯಲ್ಲಿರಲಿದೆ.

ಯೋಜನೆಯಲ್ಲಿ ಮಾರಾಟ ಆಧಾರಿತ ಪ್ರೋತ್ಸಾಹಧನ ಮತ್ತು ಉಪಕರಣಗಳ ಪರೀಕ್ಷಾ ಸೌಲಭ್ಯ ಸ್ಥಾಪನೆ ಎಂಬ ಎರಡು ಪ್ರಮುಖ ಘಟಕಗಳನ್ನು ರೂಪಿಸಲಾಗಿದೆ.

ಮಾರಾಟ ಆಧಾರಿತ ಪ್ರೋತ್ಸಾಹಧನದಡಿ ಅರ್ಹ ಮೂಲ ಉಪಕರಣ ತಯಾರಕರು ಹಾಗೂ ಬಿಡಿಭಾಗಗಳ ಉತ್ಪಾದಕರಿಗೆ ಐದು ವರ್ಷಗಳ ಅವಧಿಯಲ್ಲಿ ಹೆಚ್ಚುವರಿಯಾಗಿ ಸಾಧಿಸುವ ಮಾರಾಟದ ಮೇಲೆ ಶೇಕಡಾ 13ರಿಂದ ಶೇಕಡಾ 8ರವರೆಗೆ ಹಂತವಾರು ಪ್ರೋತ್ಸಾಹಧನ ನೀಡಲಾಗುತ್ತದೆ.

ಇನ್ನು ಉಪಕರಣಗಳ ಪರೀಕ್ಷೆಗಾಗಿ ಪ್ರತ್ಯೇಕ ಪರೀಕ್ಷಾ ಸೌಲಭ್ಯ ಸ್ಥಾಪಿಸಲು ₹375 ಕೋಟಿವರೆಗೆ ಅನುದಾನ ಒದಗಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನಾ ವ್ಯವಸ್ಥೆಯನ್ನು ರೂಪಿಸುವುದರಿಂದ ದೇಶೀಯ ಉತ್ಪಾದನಾ ಸಾಮರ್ಥ್ಯ ಬಲಗೊಳ್ಳಲಿದೆ. ಪೂರೈಕೆ ಸರಪಳಿಯ ಭದ್ರತೆ ಸುಧಾರಿಸುವುದರ ಜತೆಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ. ಅಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪಾದನಾ ವಲಯದ ಸ್ಪರ್ಧಾತ್ಮಕತೆ ವೃದ್ಧಿಯಾಗಲಿದೆ ಎಂದು ಅವರು ವಿವರಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande