

ಓಸಾಕಾ,(ಜಪಾನ) 24 ನವೆಂಬರ್ (ಹಿ.ಸ.):
ಕರ್ನಾಟಕದ ನಗರಗಳಲ್ಲಿನ ತ್ಯಾಜ್ಯ ನಿರ್ವಹಣಾ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಹಾಗೂ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಜಾಗತಿಕ ನವೀನ ತಂತ್ರಜ್ಞಾನಗಳನ್ನು ಅಧ್ಯಯನ ಮಾಡುವುದು ತಮ್ಮ ಜಪಾನ್ ಭೇಟಿಯ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ನಿಯೋಗ ಮಂಗಳವಾರ ಓಸಾಕಾದ ಮೈಶಿಮಾ ತ್ಯಾಜ್ಯ ದಹನ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ನಗರ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಶೀಲಿಸಿತು.
ಮೈಶಿಮಾ ಘಟಕದಲ್ಲಿ ಪ್ರತಿದಿನ 900 ಟನ್ ಪುರಸಭೆಯ ಘನ ತ್ಯಾಜ್ಯವನ್ನು ಸಂಸ್ಕರಿಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ತಂತ್ರಜ್ಞಾನದ ಕಾರ್ಯವೈಖರಿ, ತ್ಯಾಜ್ಯ ಸಂಸ್ಕರಣಾ ವಿಧಾನ ಹಾಗೂ ವಿದ್ಯುತ್ ಉತ್ಪಾದನಾ ವ್ಯವಸ್ಥೆಯ ಕುರಿತು ನಿಯೋಗ ಮಾಹಿತಿ ಪಡೆದುಕೊಂಡಿತು.
32 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ
ಮೈಶಿಮಾ ದ್ವೀಪದಲ್ಲಿರುವ ಈ ಘಟಕ 2001ರಿಂದ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಎರಡು ತ್ಯಾಜ್ಯ ದಹನ ಘಟಕಗಳ ಮೂಲಕ ಪ್ರತಿದಿನ ಗರಿಷ್ಠ 900 ಟನ್ ಪುರಸಭೆಯ ಘನ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತದೆ. ಘಟಕವು 32 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.
ಉತ್ಪಾದನೆಯಾಗುವ ವಿದ್ಯುತ್ನಿಂದ ಘಟಕದ ಸ್ವಂತ ಅಗತ್ಯಗಳನ್ನು ಪೂರೈಸಿಕೊಳ್ಳಲಾಗುತ್ತಿದ್ದು, ಹೆಚ್ಚುವರಿ ವಿದ್ಯುತ್ ಅನ್ನು ವಿದ್ಯುತ್ ಜಾಲಕ್ಕೆ ಪೂರೈಸಲಾಗುತ್ತಿದೆ.
ತ್ಯಾಜ್ಯ ದಹನ ಪ್ರಕ್ರಿಯೆಯನ್ನು ನಿಯಂತ್ರಿಸುವ ಸುಧಾರಿತ ತಂತ್ರಜ್ಞಾನ, ನಿರಂತರ ಹೊರಸೂಸುವಿಕೆ ಮೇಲ್ವಿಚಾರಣೆ ಹಾಗೂ ಆಧುನಿಕ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳನ್ನು ಇಲ್ಲಿ ಅಳವಡಿಸಲಾಗಿದೆ. ಇದರಿಂದ ವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣೆ ನಡೆಸುವುದರ ಜತೆಗೆ ಪರಿಸರದ ಮೇಲಿನ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಸಾಧ್ಯವಾಗಿದೆ.
ವಿಶಿಷ್ಟ ವಿನ್ಯಾಸದ ಘಟಕ
ಮೈಶಿಮಾ ಘಟಕವು ತ್ಯಾಜ್ಯ ಸಂಸ್ಕರಣಾ ತಂತ್ರಜ್ಞಾನದ ಜತೆಗೆ ತನ್ನ ವಿಶಿಷ್ಟ ವಿನ್ಯಾಸದಿಂದಲೂ ಗಮನ ಸೆಳೆದಿದೆ. ಆಸ್ಟ್ರಿಯಾದ ಕಲಾವಿದ ಫ್ರೀಡೆನ್ಸ್ರೈಕ್ ಹಂಡರ್ಟ್ವಾಸರ್ ಈ ಘಟಕವನ್ನು ವಿನ್ಯಾಸಗೊಳಿಸಿದ್ದಾರೆ. ವರ್ಣರಂಜಿತ ಹೊರನೋಟ, ವಿಭಿನ್ನ ಆಕಾರಗಳು ಮತ್ತು ಹಸಿರು ಪರಿಸರದಿಂದ ಕೂಡಿರುವ ಈ ಘಟಕವು ಕಲೆ, ಪರಿಸರ ಸಂರಕ್ಷಣೆ ಹಾಗೂ ಕೈಗಾರಿಕಾ ಮೂಲಸೌಕರ್ಯದ ಸಮನ್ವಯಕ್ಕೆ ಉದಾಹರಣೆಯಾಗಿದೆ.
ನಗರಗಳ ಅಗತ್ಯ ಮೂಲಸೌಕರ್ಯಗಳನ್ನೂ ಪರಿಸರ ಜಾಗೃತಿ ಮೂಡಿಸುವ ತಾಣಗಳನ್ನಾಗಿ ರೂಪಿಸಬಹುದು ಎಂಬುದನ್ನು ಈ ಘಟಕ ತೋರಿಸಿಕೊಡುತ್ತದೆ.
ಕರ್ನಾಟಕದ ನಗರ ಮೂಲಸೌಕರ್ಯ ಬಲಪಡಿಸಲು ನೆರವು
ನಗರ ಯೋಜನೆ, ಮೂಲಸೌಕರ್ಯ ಮತ್ತು ಪರಿಸರ ನಿರ್ವಹಣೆಯಲ್ಲಿ ಜಾಗತಿಕ ಮನ್ನಣೆ ಪಡೆದ ಇಂತಹ ಮಾದರಿಗಳನ್ನು ಅರ್ಥಮಾಡಿಕೊಂಡು ರಾಜ್ಯದಲ್ಲಿ ಅಳವಡಿಸಿಕೊಳ್ಳುವುದು ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಇಂತಹ ಘಟಕಗಳ ಅಧ್ಯಯನದಿಂದ ಕರ್ನಾಟಕದ ನಗರಗಳ ಮೂಲಸೌಕರ್ಯವನ್ನು ಬಲಪಡಿಸುವುದರ ಜತೆಗೆ ವೈಜ್ಞಾನಿಕ ಮತ್ತು ಪರಿಣಾಮಕಾರಿ ತ್ಯಾಜ್ಯ ವಿಲೇವಾರಿಗೆ ಉತ್ತೇಜನ ನೀಡಬಹುದು. ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಪರಿಹಾರಗಳನ್ನು ಅನ್ವೇಷಿಸಲು ಹಾಗೂ ಸ್ವಚ್ಛ, ಸುಸ್ಥಿರ ಮತ್ತು ವಾಸಯೋಗ್ಯ ನಗರಗಳನ್ನು ನಿರ್ಮಿಸಲು ಈ ಅಧ್ಯಯನ ಸಹಕಾರಿಯಾಗಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.