
ಬೆಂಗಳೂರು, 24 ನವೆಂಬರ್ (ಹಿ.ಸ.):
ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ನಮ್ಮ ಮೆಟ್ರೋ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದೆ. ಪಿಂಕ್ ಲೈನ್ ಮೆಟ್ರೋ ಲೋಕಾರ್ಪಣೆಯ ಬೆನ್ನಲ್ಲೇ ಇದೀಗ ಬ್ಲೂ ಲೈನ್ ಮೆಟ್ರೋ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಆರಂಭವಾಗಿದೆ.
ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿವರೆಗೆ ಸುಮಾರು 6 ಕಿ.ಮೀ. ಉದ್ದದ ಮಾರ್ಗದಲ್ಲಿ ಟ್ರಯಲ್ ರನ್ ನಡೆಯುತ್ತಿದ್ದು, ಮುಂದಿನ ವರ್ಷ ಈ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿಯನ್ನು ಹೊಂದಲಾಗಿದೆ.
ನವೆಂಬರ್ 10ರಿಂದ ಬ್ಲೂ ಲೈನ್ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲಾಗಿದೆ. ಬೈಯಪ್ಪನಹಳ್ಳಿ ಡಿಪೋದಿಂದ ಹೊರಡುವ ರೈಲು ಕೆ.ಆರ್. ಪುರಂ ಮಾರ್ಗವಾಗಿ ದೊಡ್ಡನೆಕ್ಕುಂದಿ ಮೆಟ್ರೋ ನಿಲ್ದಾಣದವರೆಗೆ ಸಂಚರಿಸುತ್ತಿದೆ.
ಸದ್ಯ ನಾಲ್ಕು ನಿಲ್ದಾಣಗಳ ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕೆ.ಆರ್. ಪುರಂನಿಂದ ಮಾರತ್ತಹಳ್ಳಿವರೆಗೂ ಟ್ರಯಲ್ ರನ್ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಯೋಜನೆ ರೂಪಿಸಿದೆ.
ಈ ಹಿನ್ನೆಲೆಯಲ್ಲಿ ಇಂದು ದೊಡ್ಡನೆಕ್ಕುಂದಿ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದ ಸಚಿವ ಕೃಷ್ಣಬೈರೇಗೌಡ ಅವರು ಪರೀಕ್ಷಾರ್ಥ ಸಂಚಾರದ ರೈಲನ್ನು ಸ್ವಾಗತಿಸಿ, ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ. ಈ ಭಾಗಕ್ಕೆ ಉದ್ಯೋಗಕ್ಕಾಗಿ ಪ್ರತಿದಿನ 11ರಿಂದ 12 ಲಕ್ಷ ಜನರು ಬರುತ್ತಾರೆ. ಜನರ ಜೀವನ ಹಾಗೂ ಉದ್ಯೋಗದ ದೃಷ್ಟಿಯಿಂದ ಮೆಟ್ರೋ ಅತ್ಯಂತ ಮುಖ್ಯವಾಗಿದೆ. ರಾಜ್ಯದ ಅಭಿವೃದ್ಧಿ ಹಾಗೂ ದೇಶದ ಅಭಿವೃದ್ಧಿಯಲ್ಲೂ ಮೆಟ್ರೋ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಮುಂದಿನ ವರ್ಷ ಮಧ್ಯಭಾಗದಲ್ಲಿ ಸಂಚಾರ ಆರಂಭಿಸುವ ಗುರಿ
ಮುಂದಿನ ಒಂದು ತಿಂಗಳ ಅವಧಿಯಲ್ಲಿ ಇನ್ನೂ ನಾಲ್ಕು ನಿಲ್ದಾಣಗಳ ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು. ಜನವರಿ ವೇಳೆಗೆ ಸಿಗ್ನಲಿಂಗ್ ವ್ಯವಸ್ಥೆಯ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಸುರಕ್ಷತೆಗೆ ಸಂಬಂಧಿಸಿದ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು, ಅಗತ್ಯ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಬಳಿಕ ಮುಂದಿನ ವರ್ಷದ ಮಧ್ಯಭಾಗದಲ್ಲಿ ಫೇಸ್-2ಎ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
20 ಸಾವಿರ ಕೋಟಿ ರೂ. ವೆಚ್ಚದ ಯೋಜನೆ
ಬ್ಲೂ ಲೈನ್ ಮೆಟ್ರೋ ಯೋಜನೆಗೆ ಸುಮಾರು 20 ಸಾವಿರ ಕೋಟಿ ರೂ. ಅನುದಾನ ವ್ಯಯಿಸಲಾಗುತ್ತಿದೆ. ಮೆಟ್ರೋ ಸಂಸ್ಥೆಗೆ ಸಾಲದ ಹೊರೆಯನ್ನು ಸ್ವತಃ ಭರಿಸುವ ಸಾಮರ್ಥ್ಯ ಇಲ್ಲದಿರುವುದರಿಂದ ರಾಜ್ಯ ಸರ್ಕಾರವೇ ಸಾಲದ ಜವಾಬ್ದಾರಿಯನ್ನು ಹೊರುತ್ತಿದೆ. ನಮ್ಮ ಮೇಲೆ ಆರ್ಥಿಕ ಹೊರೆ ಇದ್ದರೂ ಮೆಟ್ರೋ ನಿಗಮ ಅಗತ್ಯ ನೆರವು ಕೇಳಿದಾಗ ಸರ್ಕಾರ ಸಹಕಾರ ನೀಡುತ್ತಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
58.19 ಕಿ.ಮೀ. ಉದ್ದದ ಬ್ಲೂ ಲೈನ್
ದಕ್ಷಿಣ ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಬ್ಲೂ ಲೈನ್ ಒಟ್ಟು 58.19 ಕಿ.ಮೀ. ಉದ್ದವನ್ನು ಹೊಂದಿದೆ.
* ಹಂತ-2ಎ: ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆ.ಆರ್. ಪುರಂವರೆಗೆ 19.75 ಕಿ.ಮೀ.
* ಹಂತ-2ಬಿ: ಕೆ.ಆರ್. ಪುರಂನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 38.44 ಕಿ.ಮೀ.
ಹಂತ-2ಎ ಮಾರ್ಗವು ಔಟರ್ ರಿಂಗ್ ರೋಡ್ ಮೂಲಕ ಬೆಳ್ಳಂದೂರು, ಮಾರತ್ತಹಳ್ಳಿ ಹಾಗೂ ಕೆ.ಆರ್. ಪುರಂ ಪ್ರದೇಶಗಳನ್ನು ಸಂಪರ್ಕಿಸಲಿದೆ. ಇನ್ನು ಹಂತ-2ಬಿ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಕೆ.ಆರ್. ಪುರಂನಿಂದ ಹೆಬ್ಬಾಳ ಹಾಗೂ ವಿಮಾನ ನಿಲ್ದಾಣದವರೆಗಿನ ಕಾಮಗಾರಿಗೆ ಮತ್ತಷ್ಟು ವೇಗ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಬ್ಲೂ ಲೈನ್ ಮೆಟ್ರೋ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದರೆ ಔಟರ್ ರಿಂಗ್ ರೋಡ್ ಹಾಗೂ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿರೀಕ್ಷೆಯಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R