ಮೆಟಾ ವಿರುದ್ಧ ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಬ್ಯಾನರ್ ಅಭಿಯಾನ
ಮೆಟಾ ಸಂಸ್ಥೆ ರಾಜಕೀಯ ಪಕ್ಷಪಾತದ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಯುವ ಕಾಂಗ್ರೆಸ್, ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ನೇತೃತ್ವದಲ್ಲಿ ಬೆಂಗಳೂರಿನ ಸಾದಹಳ್ಳಿ ಗೇಟ್, ಏರ್ಪೋರ್ಟ್ ರಸ್ತೆ ಸೇರಿದಂತೆ ವಿವಿಧೆಡೆ ‘ಮೆಟಾ ಬಿಜೆಪಿ ಕಾ ಬೇಟಾ’ ಘೋಷಣೆಯ ಬ್ಯಾನರ್ ಅಳವಡಿಸಿ ಪ್ರತಿಭಟನೆ ನಡೆಸಿದೆ.
Youth-Congress-Meta-BJP-Ka-Beta-Banner-Campaign-Bengaluru


ಬೆಂಗಳೂರು, 24 ನವೆಂಬರ್ (ಹಿ.ಸ.):

ಸಾಮಾಜಿಕ ಜಾಲತಾಣ ಸಂಸ್ಥೆ ಮೆಟಾ ರಾಜಕೀಯ ಪಕ್ಷಪಾತದ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಬೆಂಗಳೂರಿನಾದ್ಯಂತ ವಿನೂತನ ಬ್ಯಾನರ್ ಅಭಿಯಾನ ಆರಂಭಿಸಿದೆ.

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ನೇತೃತ್ವದಲ್ಲಿ ನಗರದ ಸಾದಹಳ್ಳಿ ಗೇಟ್, ನ್ಯೂ ಏರ್ಪೋರ್ಟ್ ರಸ್ತೆಯ ಟೋಲ್ ಪ್ಲಾಜಾ ಸಮೀಪ, ಚಿಕ್ಕಜಾಲ ಸೇರಿದಂತೆ ವಿವಿಧೆಡೆ ‘ಮೆಟಾ ಬಿಜೆಪಿ ಕಾ ಬೇಟಾ’ ಎಂಬ ಘೋಷಣೆಯ ಬೃಹತ್ ಬ್ಯಾನರ್ಗಳನ್ನು ಅಳವಡಿಸಲಾಗಿದೆ.

ಈ ಬ್ಯಾನರ್ಗಳಲ್ಲಿ ಮೆಟಾ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ಅವರನ್ನು ವ್ಯಂಗ್ಯವಾಗಿ ‘ಮಾರ್ಕ್ ಬಿಜೆಪಿಬರ್ಗ್’ ಎಂದು ಉಲ್ಲೇಖಿಸಲಾಗಿದೆ.

ಮೆಟಾ ವಿರುದ್ಧ ಯುವ ಕಾಂಗ್ರೆಸ್ ಆರೋಪ:

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಭಾಷಣಗಳಿಗೆ ಕಡಿವಾಣ ಹಾಕುವ ವಿಚಾರದಲ್ಲಿ ಮೆಟಾ ಸಂಸ್ಥೆ ತಾರತಮ್ಯ ಮಾಡುತ್ತಿದೆ.

ಸುಳ್ಳು ಸುದ್ದಿಗಳ ಪ್ರಸಾರಕ್ಕೆ ಅವಕಾಶ ನೀಡುವ ಮೂಲಕ ರಾಜಕೀಯ ಪ್ರಭಾವಕ್ಕೆ ಮಣಿಯುವ ಧೋರಣೆ ಅನುಸರಿಸುತ್ತಿದೆ ಎಂಬುದು ಯುವ ಕಾಂಗ್ರೆಸ್ ನಾಯಕರ ಪ್ರಮುಖ ಆರೋಪವಾಗಿದೆ.

ಅಲ್ಲದೆ, ಬಳಕೆದಾರರ ವೈಯಕ್ತಿಕ ಮಾಹಿತಿಯ ಗೌಪ್ಯತೆ ಕಾಪಾಡುವ ವಿಚಾರದಲ್ಲೂ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ಯಾವುದೇ ರಾಜಕೀಯ ಪಕ್ಷದ ಪರವಾಗಿ ಕಾರ್ಯನಿರ್ವಹಿಸದೆ, ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪಕ್ಷಪಾತದ ಧೋರಣೆ ಕೈಬಿಡಲು ಆಗ್ರಹ:

ಮೆಟಾ ಸಂಸ್ಥೆಯು ತನ್ನ ಪಕ್ಷಪಾತದ ಧೋರಣೆಯನ್ನು ಕೈಬಿಟ್ಟು, ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯನ್ನು ಅರಿತು ಹೆಚ್ಚು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಯುವ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.

ಮೆಟಾ ಸಂಸ್ಥೆಯ ವಿರುದ್ಧ ಯುವ ಕಾಂಗ್ರೆಸ್ ಹಮ್ಮಿಕೊಂಡಿರುವ ಈ ಬ್ಯಾನರ್ ಅಭಿಯಾನ ರಾಜಧಾನಿ ಬೆಂಗಳೂರಿನಲ್ಲಿ ಗಮನ ಸೆಳೆದಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande