ಉಕ್ರೇನ್ ಯುದ್ಧ ಅಂತ್ಯಗೊಳಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಆಗ್ರಹ
ವಿಶ್ವಸಂಸ್ಥೆ, 24 ನವೆಂಬರ್ (ಹಿ.ಸ.): ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವಂತೆ ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಆಗ್ರಹಿಸಿದೆ. ಕಪ್ಪು ಸಮುದ್ರದಲ್ಲಿ ಹಡಗುಗಳ ಸಂಚಾರ ಮತ್ತು ಆಹಾರ ಧಾನ್ಯಗಳ ಪೂರೈಕೆಯ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದೆ. ವಿಶ್ವಸಂಸ
संयुक्त राष्ट्र सुरक्षा परिषद में भारत का दृष्टिकोण रखते संयुक्त राष्ट्र में भारत के स्थाई प्रतिनिधि पी हरीश। फोटो-  @पी हरीश


ವಿಶ್ವಸಂಸ್ಥೆ, 24 ನವೆಂಬರ್ (ಹಿ.ಸ.):

ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವಂತೆ ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಆಗ್ರಹಿಸಿದೆ. ಕಪ್ಪು ಸಮುದ್ರದಲ್ಲಿ ಹಡಗುಗಳ ಸಂಚಾರ ಮತ್ತು ಆಹಾರ ಧಾನ್ಯಗಳ ಪೂರೈಕೆಯ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದೆ.

ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಪಿ. ಹರೀಶ್ ಮಾತನಾಡಿ, ಉಕ್ರೇನ್ ಯುದ್ಧ ಐದನೇ ವರ್ಷಕ್ಕೆ ಕಾಲಿಟ್ಟಿದ್ದು, ಅದರ ಪರಿಣಾಮ ಇಡೀ ಜಗತ್ತಿನ ಮೇಲೆ ಉಂಟಾಗುತ್ತಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಜಗತ್ತು ಎಂದಿಗೂ ಮುಗಿಯದ ಯುದ್ಧದ ಸ್ಥಿತಿಯಿಂದ ಹೊರಬಂದು ಯುದ್ಧ ಅಂತ್ಯದತ್ತ ಸಾಗಬೇಕು ಎಂದು ತಿಳಿಸಿದರು.

ಭಾರತ ಮತ್ತು ಕಪ್ಪು ಸಮುದ್ರ ಪ್ರದೇಶಗಳು ಜಾಗತಿಕವಾಗಿ ಉತ್ಪಾದನೆಯಾಗುವ ಸುಮಾರು ಶೇ.20ರಷ್ಟು ಆಹಾರ ಧಾನ್ಯಗಳನ್ನು ಒದಗಿಸುತ್ತವೆ. ರಷ್ಯಾ ಮತ್ತು ಉಕ್ರೇನ್ ಜಾಗತಿಕ ಗೋಧಿ, ಮೆಕ್ಕೆಜೋಳ ಹಾಗೂ ಬಾರ್ಲಿ ರಫ್ತಿನಲ್ಲಿ ಸುಮಾರು ಶೇ.25ರಷ್ಟು ಪಾಲು ಹೊಂದಿವೆ ಎಂದು ವಿವರಿಸಿದರು.

ಯುದ್ಧದಿಂದ ಆಹಾರ, ಇಂಧನ ಮತ್ತು ರಸಗೊಬ್ಬರಗಳ ಬಿಕ್ಕಟ್ಟು ತೀವ್ರಗೊಂಡಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳು ಅದರಲ್ಲೂ ಜಾಗತಿಕ ದಕ್ಷಿಣದ ದೇಶಗಳು ಹೆಚ್ಚಿನ ಸಂಕಷ್ಟ ಎದುರಿಸುತ್ತಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ 1943ರಲ್ಲಿ ಸಂಭವಿಸಿದ ಬಂಗಾಳದ ಕ್ಷಾಮವನ್ನು ಪ್ರಸ್ತಾಪಿಸಿದ ಅವರು, ಆ ದುರಂತದಲ್ಲಿ 30 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು ಎಂದು ಸ್ಮರಿಸಿದರು.

ಕಪ್ಪು ಸಮುದ್ರದಲ್ಲಿ ಹಡಗುಗಳ ಮೇಲಿನ ದಾಳಿಗಳಿಂದ ಈವರೆಗೆ ನಾಲ್ವರು ಭಾರತೀಯ ನಾವಿಕರು ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ ಅವರು, ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲಿನ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಹಡಗುಗಳು ಮತ್ತು ನಾವಿಕರ ಸುರಕ್ಷತೆಗಾಗಿ ಭಾರತ ಹಾಗೂ ಲೈಬೀರಿಯಾ ವಿಶ್ವಸಂಸ್ಥೆಯಲ್ಲಿ 'ಗ್ರೂಪ್ ಆಫ್ ಫ್ರೆಂಡ್ಸ್' ಉಪಕ್ರಮವನ್ನು ಆರಂಭಿಸಿವೆ. ಕಪ್ಪು ಸಮುದ್ರದಲ್ಲಿ ಹಡಗುಗಳ ಸುರಕ್ಷತೆ ಹಾಗೂ ಆಹಾರ ಧಾನ್ಯಗಳ ರಫ್ತು ಸುಗಮಗೊಳಿಸುವ ಉದ್ದೇಶದಿಂದ ಯುದ್ಧದಲ್ಲಿ ತೊಡಗಿರುವ ಎರಡೂ ರಾಷ್ಟ್ರಗಳೊಂದಿಗೆ ಭಾರತ ನೇರ ಮಾತುಕತೆ ನಡೆಸುತ್ತಿದೆ ಎಂದು ಪಿ. ಹರೀಶ್ ತಿಳಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande