ಕೆಆರ್ಎಸ್ನಲ್ಲಿ ನೀರಿನ ಸಂಗ್ರಹ ಕುಸಿತ: ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ: ಅಶೋಕ ಆಗ್ರಹ
ಬೆಂಗಳೂರು, 24 ನವೆಂಬರ್ (ಹಿ.ಸ.): ರಾಜ್ಯದ ರೈತರ ಹಿತಾಸಕ್ತಿ ಮತ್ತು ಜನರ ಕುಡಿಯುವ ನೀರಿನ ಅಗತ್ಯವನ್ನು ಕಡೆಗಣಿಸಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ ಖಂಡಿಸಿದ್ದಾರೆ. ಮಂಡ್ಯದ ಕೆಆರ್‌ಎಸ್ ಜಲಾಶಯದ ನ
ಅಶೋಕ್ ಫೈಲ್ ಪೋಟೋ


ಬೆಂಗಳೂರು, 24 ನವೆಂಬರ್ (ಹಿ.ಸ.):

ರಾಜ್ಯದ ರೈತರ ಹಿತಾಸಕ್ತಿ ಮತ್ತು ಜನರ ಕುಡಿಯುವ ನೀರಿನ ಅಗತ್ಯವನ್ನು ಕಡೆಗಣಿಸಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ ಖಂಡಿಸಿದ್ದಾರೆ.

ಮಂಡ್ಯದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 124.80 ಅಡಿಯಿಂದ 96.84 ಅಡಿಗೆ ಕುಸಿದಿದೆ. ಜಲಾಶಯದಲ್ಲಿ ಕೃಷಿ ಬಳಕೆಗೆ 20.434 ಟಿಎಂಸಿ ಅಡಿ ಹಾಗೂ ಕುಡಿಯುವ ನೀರಿಗೆ ಮೀಸಲಾದ 3.979 ಟಿಎಂಸಿ ಅಡಿ ಸೇರಿದಂತೆ ಒಟ್ಟು 24.413 ಟಿಎಂಸಿ ಅಡಿ ನೀರು ಮಾತ್ರ ಬಳಕೆಗೆ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 2,000 ಕ್ಯುಸೆಕ್‌ನಂತೆ 16 ದಿನಗಳ ಕಾಲ ಸುಮಾರು ಒಂದೂವರೆ ಟಿಎಂಸಿ ಅಡಿ ನೀರು ಹರಿಸಲಾಗುತ್ತಿದೆ. ಇದರಿಂದ ಮಂಡ್ಯ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಶೋಕ ಆರೋಪಿಸಿದ್ದಾರೆ.

ತಮಿಳುನಾಡಿಗೆ ನೀರು ಹರಿಸಿದ ಬಳಿಕ ಜಲಾಶಯದಲ್ಲಿ ಸುಮಾರು 23 ಟಿಎಂಸಿ ಅಡಿ ನೀರು ಮಾತ್ರ ಉಳಿಯಲಿದೆ. ಜನವರಿ ನಂತರ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗಾಗಿ ಬೇಸಿಗೆ ಹಂಗಾಮಿನಲ್ಲಿಯೂ ನಾಲೆಗಳಿಗೆ ನೀರು ಹರಿಸುವ ಅಗತ್ಯವಿದೆ. ಆದರೆ, ಕುಡಿಯುವ ನೀರಿನ ಬೇಡಿಕೆಯನ್ನು ಗಮನಿಸಿದರೆ ಬೇಸಿಗೆಯಲ್ಲಿ ನಾಲೆಗಳಿಗೆ ನೀರು ಒದಗಿಸುವುದು ಅನುಮಾನವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದಿನ ವರ್ಷವೂ ಬರಗಾಲ ಮುಂದುವರಿಯುವ ಸಾಧ್ಯತೆಯಿದೆ ಎಂಬ ಹವಾಮಾನ ತಜ್ಞರ ಮುನ್ಸೂಚನೆಯನ್ನು ಉಲ್ಲೇಖಿಸಿರುವ ಅವರು, 16 ದಿನಗಳ ನೀರು ಹರಿಸುವ ಅವಧಿ ಮುಗಿದ ಬಳಿಕ ತಮಿಳುನಾಡು ಮತ್ತೆ ಬೇಡಿಕೆ ಸಲ್ಲಿಸಿ ಸಮಿತಿ ಮತ್ತೊಮ್ಮೆ ನೀರು ಬಿಡುವಂತೆ ಆದೇಶಿಸಿದರೆ ಮಂಡ್ಯ, ಮೈಸೂರು, ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ. ಈ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಪ್ರತಿ ತಿಂಗಳು 2 ಟಿಎಂಸಿ ಅಡಿ ನೀರಿನ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಪ್ರಶ್ನಿಸಿರುವ ಅಶೋಕ, ರಾಜ್ಯದ ರೈತರ ಬೆಳೆಗಳು ಒಣಗುತ್ತಿರುವ ಮತ್ತು ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಮುನ್ಸೂಚನೆ ಇರುವ ಸಂದರ್ಭದಲ್ಲಿ ಕಾವೇರಿ ನೀರು ನಿರ್ವಹಣಾ ಸಮಿತಿಯ ಮುಂದೆ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಸಮರ್ಥವಾಗಿ ಮಂಡಿಸಲು ಸರ್ಕಾರ ಏಕೆ ವಿಫಲವಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ನೆರೆಯ ರಾಜ್ಯದ ಮೈತ್ರಿ ರಾಜಕಾರಣದ ಹಿತಾಸಕ್ತಿಗಾಗಿ ಕರ್ನಾಟಕದ ರೈತರ ಹಿತವನ್ನು ಬಲಿಕೊಡುವುದು ರಾಜ್ಯದ ಜನರಿಗೆ ಮಾಡುವ ದ್ರೋಹವಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕೆಆರ್‌ಎಸ್ ಜಲಾಶಯದ ವಾಸ್ತವ ಸ್ಥಿತಿಗತಿ ಹಾಗೂ ಬರಗಾಲದ ಮುನ್ಸೂಚನೆಯನ್ನು ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಉಚ್ಚತಮ ನ್ಯಾಯಾಲಯದ ಮುಂದೆ ಮಂಡಿಸಬೇಕು. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣವೇ ಸ್ಥಗಿತಗೊಳಿಸಿ, ರಾಜ್ಯದ ರೈತರ ಬೆಳೆಗಳ ರಕ್ಷಣೆ ಮತ್ತು ಜನರ ಕುಡಿಯುವ ನೀರಿನ ಅಗತ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅಶೋಕ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande