
ನವದೆಹಲಿ, 24 ನವೆಂಬರ್ (ಹಿ.ಸ.):
ಉತ್ತರ ಪ್ರದೇಶ ವಿಧಾನಸಭೆಯ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮೈತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಕಾಂಗ್ರೆಸ್ ನಡುವೆ ಕ್ಷೇತ್ರ ಹಂಚಿಕೆ ಮಾತುಕತೆ ಆರಂಭವಾಗಿದೆ. ಆರಂಭಿಕ ಹಂತದಲ್ಲಿ ಕಾಂಗ್ರೆಸ್ಗೆ 26 ವಿಧಾನಸಭಾ ಕ್ಷೇತ್ರಗಳನ್ನು ನೀಡಲು ಸಮಾಜವಾದಿ ಪಕ್ಷ ಪ್ರಸ್ತಾವನೆ ಸಲ್ಲಿಸಿದ್ದು, ಕಾಂಗ್ರೆಸ್ ಮಾತ್ರ 100ರಿಂದ 140 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬೇಡಿಕೆಗೆ ಪಟ್ಟು ಹಿಡಿದಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿವೆ. ಸಮಾಜವಾದಿ ಪಕ್ಷದ ಪ್ರಮುಖ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊ. ರಾಮ್ಗೋಪಾಲ್ ಯಾದವ್ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ಗೆ 26 ಕ್ಷೇತ್ರಗಳನ್ನು ನೀಡುವ ಪ್ರಸ್ತಾವನೆಯ ಹಿಂದಿನ ಲೆಕ್ಕಾಚಾರವನ್ನು ವಿವರಿಸಿದ್ದಾರೆ.
ಈ 26 ಕ್ಷೇತ್ರಗಳಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದ ಎರಡು ಕ್ಷೇತ್ರಗಳು ಹಾಗೂ ಎರಡನೇ ಸ್ಥಾನ ಪಡೆದಿದ್ದ ನಾಲ್ಕು ಕ್ಷೇತ್ರಗಳು ಸೇರಿವೆ. ಉಳಿದ 20 ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 60ರಿಂದ 70 ಸಾವಿರ ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಸುಮಾರು ಎರಡು ಸಾವಿರ ಮತಗಳಿಗೆ ಸೀಮಿತವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಕ್ಷೇತ್ರಗಳ ಆಯ್ಕೆಗೆ 2022ರ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಹಿಂದಿನ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಟ್ಟಿದ್ದ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪಕ್ಷಗಳು ಬಳಿಕ ಮೈತ್ರಿಯಿಂದ ಹೊರಬಂದ ಹಿನ್ನೆಲೆಯಲ್ಲಿ ಈ ಬಾರಿ ಕ್ಷೇತ್ರ ಹಂಚಿಕೆಯಲ್ಲಿ ಸಮಾಜವಾದಿ ಪಕ್ಷ ಎಚ್ಚರಿಕೆಯ ಹೆಜ್ಜೆಯಿಡುತ್ತಿದೆ.
ಕಾಂಗ್ರೆಸ್ಗೆ ನೀಡಿರುವ 26 ಕ್ಷೇತ್ರಗಳ ಪಟ್ಟಿಯಲ್ಲಿ ರಾಮ್ಪುರ ಖಾಸ್, ಫರೆಂಡಾ, ಮಥುರಾ, ಖೇರಾಗಢ, ಜಗದೀಶ್ಪುರ, ಕಿದ್ವಾಯಿ ನಗರ, ಬಾಗ್ಪತ್, ಮೋದಿನಗರ, ಹಾಪುರ್, ನಾನ್ಪಾರಾ, ಗೋರಖ್ಪುರ ನಗರ, ಖಜ್ನಿ, ಪಡ್ರೌನಾ, ಫಾಜಿಲ್ನಗರ, ಪಿಂಡ್ರಾ, ವಾರಾಣಸಿ ಕ್ಯಾಂಟ್, ಜೆವರ್, ಸಿಯಾನಾ, ಖುರ್ಜಾ, ಖೈರ್, ಇಗ್ಲಾಸ್, ಮಾಂಟ್, ಆಗ್ರಾ ಉತ್ತರ, ಫತೇಪುರ್ ಸಿಕ್ರಿ, ಬಿಲ್ಗ್ರಾಮ್-ಮಲ್ಲವಾನ್ ಮತ್ತು ಗೋವಿಂದ ನಗರ ಕ್ಷೇತ್ರಗಳು ಸೇರಿವೆ.
ಆರಂಭಿಕ ಪ್ರಸ್ತಾವನೆಯ ಹೊರತಾಗಿಯೂ ಚುನಾವಣಾ ಲೆಕ್ಕಾಚಾರ ಮತ್ತು ಅಭ್ಯರ್ಥಿಗಳ ಗೆಲುವಿನ ಸಾಧ್ಯತೆಗಳನ್ನು ಆಧರಿಸಿ ಇತರ ಕ್ಷೇತ್ರಗಳ ಬಗ್ಗೆಯೂ ಮಾತುಕತೆ ನಡೆಸಬಹುದು ಎಂದು ಸಮಾಜವಾದಿ ಪಕ್ಷ ತಿಳಿಸಿದೆ.
ಇನ್ನೊಂದೆಡೆ, ಕಾಂಗ್ರೆಸ್ನ ಬೇಡಿಕೆ ಸಮಾಜವಾದಿ ಪಕ್ಷದ ಪ್ರಸ್ತಾವನೆಗಿಂತ ಬಹಳ ಹೆಚ್ಚಾಗಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಆರಂಭದಲ್ಲಿ 181 ಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಬಳಿಕ ಅದನ್ನು 130 ಕ್ಷೇತ್ರಗಳಿಗೆ ಇಳಿಸಲಾಗಿದೆ. ಆದರೂ 100ರಿಂದ 140 ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕೆಂಬ ಬೇಡಿಕೆಗೆ ಪಕ್ಷ ಬದ್ಧವಾಗಿದೆ.
2017ರಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮಾಡಿಕೊಂಡಿದ್ದ ಮೈತ್ರಿಯಲ್ಲಿ ಕಾಂಗ್ರೆಸ್ 105ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದನ್ನು ಪಕ್ಷ ತನ್ನ ಬೇಡಿಕೆಗೆ ಆಧಾರವಾಗಿ ಮುಂದಿಟ್ಟಿದೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಕಡಿಮೆ ಕ್ಷೇತ್ರಗಳಿಗೆ ಒಪ್ಪಿಕೊಳ್ಳಲು ಕಾಂಗ್ರೆಸ್ ನಾಯಕತ್ವ ಸಿದ್ಧವಿಲ್ಲ ಎನ್ನಲಾಗಿದೆ.
ಇದೇ ವೇಳೆ, ಮಂಗಳವಾರ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಸುಮಾರು 130 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳು, ಸಂಭಾವ್ಯ ಅಭ್ಯರ್ಥಿಗಳು ಹಾಗೂ ಅವರ ಜಾತಿ ಮತ್ತು ಸ್ಥಳೀಯ ರಾಜಕೀಯ ಪ್ರಭಾವದ ಕುರಿತು ವಿವರಗಳನ್ನು ಕೇಳಲು ಸಮಾಜವಾದಿ ಪಕ್ಷ ಸಿದ್ಧತೆ ನಡೆಸಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಎದುರಿಸುವ ಉದ್ದೇಶದಿಂದ ಎರಡೂ ಪಕ್ಷಗಳ ನಡುವೆ ಕ್ಷೇತ್ರ ಹಂಚಿಕೆ ಕುರಿತ ಅಧಿಕೃತ ಮಾತುಕತೆ ಸೋಮವಾರ ನವದೆಹಲಿಯಲ್ಲಿ ಆರಂಭವಾಗಿತ್ತು. ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಪ್ರಮೋದ್ ತಿವಾರಿ ಅವರ ದೆಹಲಿಯ ನಿವಾಸದಲ್ಲಿ ಮೊದಲ ಸುತ್ತಿನ ಸಭೆ ನಡೆದಿತ್ತು.
ಸಮಾಜವಾದಿ ಪಕ್ಷದ ಪರವಾಗಿ ಪ್ರೊ. ರಾಮ್ಗೋಪಾಲ್ ಯಾದವ್, ಸಂಸದ ರಾಜೀವ್ ರೈ ಮತ್ತು ಇಕ್ರಾ ಹಸನ್ ಪಾಲ್ಗೊಂಡಿದ್ದರು. ಕಾಂಗ್ರೆಸ್ ಪರವಾಗಿ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಆರಾಧನಾ ಮಿಶ್ರಾ 'ಮೋನಾ', ರಾಜ್ಯ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಮತ್ತು ಸಂಸದ ಇಮ್ರಾನ್ ಮಸೂದ್ ಭಾಗವಹಿಸಿದ್ದರು.
ಸುಮಾರು ಒಂದು ಗಂಟೆ ನಡೆದ ಸಭೆಯಲ್ಲಿ ಎರಡೂ ಪಕ್ಷಗಳು ತಮಗೆ ಆದ್ಯತೆಯಿರುವ ಕ್ಷೇತ್ರಗಳು ಮತ್ತು ಸಂಭಾವ್ಯ ಅಭ್ಯರ್ಥಿಗಳ ಪ್ರಾಥಮಿಕ ಪಟ್ಟಿಗಳನ್ನು ವಿನಿಮಯ ಮಾಡಿಕೊಂಡಿದ್ದವು. ಸಭೆಯ ಬಳಿಕ ಪ್ರಮೋದ್ ತಿವಾರಿ ಮಾತುಕತೆ ಸೌಹಾರ್ದಯುತವಾಗಿ ಮುಂದುವರಿದಿದೆ ಎಂದು ತಿಳಿಸಿದ್ದರು.
ಆರಾಧನಾ ಮಿಶ್ರಾ ಕೂಡ ಪರಸ್ಪರ ವಿಶ್ವಾಸದೊಂದಿಗೆ ಚರ್ಚೆ ನಡೆಯುತ್ತಿದೆ. ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಅಂತಿಮ ರೂಪುರೇಷೆ ಸಿದ್ಧಪಡಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದರು. ಎರಡನೇ ಸುತ್ತಿನ ಮಾತುಕತೆಯ ಬಳಿಕ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಮತ್ತಷ್ಟು ಸ್ಪಷ್ಟತೆ ದೊರೆಯುವ ನಿರೀಕ್ಷೆಯಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.