
ನವದೆಹಲಿ, 24 ನವೆಂಬರ್ (ಹಿ.ಸ.):
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುನಾನಕ್ ದೇವ್ ಅವರ 557ನೇ ಪ್ರಕಾಶ ಪರ್ವದ ಅಂಗವಾಗಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಅಸ್ಸಾಂನ ಮಹಾನ್ ವೀರ ಲಚಿತ್ ಬೋರ್ಫುಕನ್ ಅವರನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದ್ದಾರೆ.
ಗುರುನಾನಕ್ ದೇವ್ ಅವರ ಪ್ರಕಾಶ ಪರ್ವದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಶುಭಾಶಯ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಅವರ ಶಾಶ್ವತ ಬೋಧನೆಗಳು ಇಂದಿಗೂ ಮಾನವಕುಲಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ತಿಳಿಸಿದ್ದಾರೆ.
ದಯೆ, ಒಗ್ಗಟ್ಟು ಮತ್ತು ಸರ್ವರ ಕಲ್ಯಾಣದ ತಳಹದಿಯ ಮೇಲೆ ನಿಂತಿರುವ ಸಮಾಜ ನಿರ್ಮಾಣಕ್ಕೆ ಗುರುನಾನಕ್ ದೇವ್ ಅವರ ಸಂದೇಶಗಳು ಪ್ರೇರಣೆ ನೀಡಲಿ ಎಂದು ಆಶಿಸಿದ್ದಾರೆ.
ಸಿಖ್ ಧರ್ಮದ ಸಂಸ್ಥಾಪಕರಾದ ಗುರುನಾನಕ್ ದೇವ್ ಅವರ ಜನ್ಮದಿನವನ್ನು ದೇಶಾದ್ಯಂತ ಪ್ರಕಾಶ ಪರ್ವವಾಗಿ ಆಚರಿಸಲಾಗುತ್ತದೆ.
ಇದೇ ವೇಳೆ ಲಚಿತ್ ದಿನದ ಅಂಗವಾಗಿ ಅಸ್ಸಾಂನ ಮಹಾನ್ ವೀರ ಲಚಿತ್ ಬೋರ್ಫುಕನ್ ಅವರಿಗೆ ಪ್ರಧಾನಿ ಗೌರವ ನಮನ ಸಲ್ಲಿಸಿದ್ದಾರೆ.
ಅಸ್ಸಾಂನ ರಕ್ಷಣೆಗಾಗಿ ತಮ್ಮ ಸಾಹಸ ಮತ್ತು ದೃಢಸಂಕಲ್ಪದಿಂದ ಮಹತ್ವದ ಪಾತ್ರ ವಹಿಸಿದ ಲಚಿತ್ ಬೋರ್ಫುಕನ್ ಅವರ ಅಪ್ರತಿಮ ನಾಯಕತ್ವ ಹಾಗೂ ಜನರ ಮೇಲಿನ ಸಮರ್ಪಣಾ ಮನೋಭಾವ ಇಂದಿಗೂ ತಲೆಮಾರುಗಳಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.
ಅವರ ಜೀವನದ ಆದರ್ಶಗಳು ಅಸ್ಸಾಂನ ಶಕ್ತಿ, ಧೈರ್ಯ ಮತ್ತು ಸ್ವಾಭಿಮಾನವನ್ನು ನೆನಪಿಸುತ್ತವೆ. ಅವರ ನಿಸ್ವಾರ್ಥ ಸೇವೆ ಹಾಗೂ ಅಸಾಧಾರಣ ನಾಯಕತ್ವ ಸದಾ ಸ್ಮರಣೀಯ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.