
ಬಾಗಲಕೋಟೆ, 24 ನವೆಂಬರ್ (ಹಿ.ಸ.)
2028ರ ವಿಧಾನಸಭೆ ಚುನಾವಣೆಗೆ ಇನ್ನೂ ಸಮಯವಿದ್ದರೂ ಬಾಗಲಕೋಟೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಈಗಿನಿಂದಲೇ ಚುನಾವಣಾ ಲೆಕ್ಕಾಚಾರಗಳು ಗರಿಗೆದರಿವೆ. ಒಂದೆಡೆ ಕ್ಷೇತ್ರ ಪುನರ್ವಿಂಗಡಣೆಯ ಸಾಧ್ಯತೆ ರಾಜಕೀಯ ಪಕ್ಷಗಳು ಹಾಗೂ ಆಕಾಂಕ್ಷಿಗಳಲ್ಲಿ ಕುತೂಹಲ ಮೂಡಿಸಿದ್ದರೆ, ಮತ್ತೊಂದೆಡೆ ವಲಸೆ ರಾಜಕಾರಣದ ಚರ್ಚೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ವ್ಯಾಪಿಸುತ್ತಿದೆ.
ಇದುವರೆಗೆ ಮುಖ್ಯವಾಗಿ ಹುನಗುಂದ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿದ್ದ ವಲಸೆ ಅಭ್ಯರ್ಥಿಗಳ ಕುರಿತ ಸಂಘರ್ಷ ಇದೀಗ ಜಮಖಂಡಿ, ಬಾಗಲಕೋಟೆ, ಬೀಳಗಿ ಹಾಗೂ ತೇರದಾಳ ಕ್ಷೇತ್ರಗಳಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಸ್ಥಳೀಯರು ಮತ್ತು ಹೊರಗಿನ ಅಭ್ಯರ್ಥಿಗಳ ನಡುವಿನ ರಾಜಕೀಯ ಪೈಪೋಟಿ ಮುಂದಿನ ಚುನಾವಣೆಯಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ ಎಂದು ರಾಜಕೀಯ ವಿಶ್ಲೇಷಕ ಸಂಗಮೇಶ ಕುಂಬಾರ ಅಭಿಪ್ರಾಯಪಟ್ಟಿದ್ದಾರೆ.
ಹುನಗುಂದದ ವಲಸೆ ರಾಜಕಾರಣ
ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕಗಳಿಂದ ವಲಸೆ ರಾಜಕಾರಣದ ಚರ್ಚೆ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಕ್ಷೇತ್ರದ ಮತದಾರರು ಮೂರು ಬಾರಿ ವಲಸೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದರೂ ವಲಸೆ ರಾಜಕಾರಣದ ಕುರಿತ ಚರ್ಚೆ ಮಾತ್ರ ಅಂತ್ಯಗೊಂಡಿಲ್ಲ.
ಸ್ಥಳೀಯರಿಗೆ ಆದ್ಯತೆ ನೀಡಬೇಕೆಂಬ ಅಭಿಪ್ರಾಯ ಒಂದು ಕಡೆಯಾದರೆ, ಪಕ್ಷದ ವರ್ಚಸ್ಸು, ಅಭ್ಯರ್ಥಿಯ ಪ್ರಭಾವ ಹಾಗೂ ಗೆಲ್ಲುವ ಸಾಮರ್ಥ್ಯಕ್ಕೆ ಆದ್ಯತೆ ನೀಡಬೇಕೆಂಬ ವಾದ ಮತ್ತೊಂದು ಕಡೆಯಿದೆ. ಹೀಗಾಗಿ ಹುನಗುಂದದಲ್ಲಿ ವಲಸೆ ರಾಜಕಾರಣ ಚುನಾವಣೆಯಿಂದ ಚುನಾವಣೆಗೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ.
ಜಮಖಂಡಿಗೂ ವ್ಯಾಪಿಸಿದ ವಲಸೆ ಮಾತು
ಪಟವರ್ಧನ ಮಹಾರಾಜರ ಸಂಸ್ಥಾನದ ಹಿನ್ನೆಲೆಯುಳ್ಳ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿಯೂ ಇದೀಗ ವಲಸೆ ಹಾಗೂ ಸ್ಥಳೀಯ ಅಭ್ಯರ್ಥಿಗಳ ವಿಚಾರ ಚರ್ಚೆಯಾಗುತ್ತಿದೆ.
ಕಾಂಗ್ರೆಸ್ ಟಿಕೆಟ್ ಪಡೆಯಲು ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ನಿರಂತರವಾಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಮಾಜಿ ಶಾಸಕ ದಿವಂಗತ ರಾಮಣ್ಣ ಕಲೂತಿ ಅವರ ಮೊಮ್ಮಗ ರಾಹುಲ್ ಕಲೂತಿ ಹಾಗೂ ಹಂಗಾಮಿ ರಾಷ್ಟ್ರಪತಿಯಾಗಿದ್ದ ಬಿ.ಡಿ. ಜತ್ತಿ ಅವರ ಮೊಮ್ಮಗ ಧೃವ ಜತ್ತಿ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.
ಈ ಮೂವರ ರಾಜಕೀಯ ಚಟುವಟಿಕೆಗಳು ಮುಂದಿನ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆಗೆ ಕಾರಣವಾಗಿವೆ.
ಸಚಿವ ಸವದಿ ಪುತ್ರನ ಹೆಸರೂ ಚರ್ಚೆಯಲ್ಲಿ
ಇಷ್ಟೆಲ್ಲ ಬೆಳವಣಿಗೆಗಳ ನಡುವೆ ರಾಜ್ಯದ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ ಅವರ ಹೆಸರೂ ಜಮಖಂಡಿ ಕ್ಷೇತ್ರದ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಜಮಖಂಡಿ ಕ್ಷೇತ್ರದಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ಹೊಂದಿರುವ ರಾಜಕೀಯ ಪ್ರಭಾವ ಮತ್ತು ಸಂಪರ್ಕವನ್ನು ಅಲ್ಲಗಳೆಯುವಂತಿಲ್ಲ. ಅಥಣಿ ಹಾಗೂ ಜಮಖಂಡಿ ಅಕ್ಕಪಕ್ಕದ ಕ್ಷೇತ್ರಗಳಾಗಿದ್ದು, ಎರಡೂ ಕಡೆ ಸಚಿವ ಸವದಿ ಅವರಿಗೆ ರಾಜಕೀಯ ಒಡನಾಟವಿದೆ.
ಆದರೆ ಆನಂದ ನ್ಯಾಮಗೌಡ, ರಾಹುಲ್ ಕಲೂತಿ ಸೇರಿದಂತೆ ಸ್ಥಳೀಯ ಆಕಾಂಕ್ಷಿಗಳ ನಡುವೆ ತಮ್ಮ ಪುತ್ರ ಚಿದಾನಂದ ಸವದಿ ಅವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಚಿವರು ಯಾವ ರೀತಿಯ ನಿಲುವು ತಳೆಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಪುತ್ರನನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ಸಾಧ್ಯತೆಗಳ ಕುರಿತು ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ.
ಜಮಖಂಡಿ ಕ್ಷೇತ್ರದ ಮೇಲೆ ಆನಂದ ನ್ಯಾಮಗೌಡ ಹಾಗೂ ರಾಹುಲ್ ಕಲೂತಿ ಕುಟುಂಬಗಳು ಹೊಂದಿರುವ ರಾಜಕೀಯ ಹಿಡಿತವೂ ಈ ಪೈಪೋಟಿಯಲ್ಲಿ ಪ್ರಮುಖವಾಗಲಿದೆ. ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸ್ಪಷ್ಟನೆ ನೀಡಿದರೂ ಮುರುಗೇಶ ನಿರಾಣಿ ಹೆಸರು ಚರ್ಚೆಯಲ್ಲಿ!
ಇದೇ ಕ್ಷೇತ್ರದಿಂದ ಮಾಜಿ ಸಚಿವ ಮುರುಗೇಶ ನಿರಾಣಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಆಗಾಗ ಕೇಳಿಬರುತ್ತಿವೆ. ಆದರೆ ಈ ಕುರಿತು ಹಲವು ಬಾರಿ ಸ್ಪಷ್ಟನೆ ನೀಡಿರುವ ನಿರಾಣಿ ಅವರು ತಾವು ಬೀಳಗಿ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಆದರೂ ಜಮಖಂಡಿಯಿಂದ ಸ್ಪರ್ಧಿಸುವ ಸಾಧ್ಯತೆಗಳ ಕುರಿತ ಚರ್ಚೆ ಮಾತ್ರ ನಿಂತಿಲ್ಲ. ಅವರ ಸ್ಪಷ್ಟನೆಯ ನಡುವೆಯೂ ಈ ವಿಚಾರ ರಾಜಕೀಯ ವಲಯದಲ್ಲಿ ಕುತೂಹಲದ ವಿಷಯವಾಗಿ ಉಳಿದಿದೆ.
ಬಾಗಲಕೋಟೆ, ಬೀಳಗಿ ಕ್ಷೇತ್ರಗಳ ಹೊಂದಾಣಿಕೆಯ ಲೆಕ್ಕಾಚಾರ
ಇನ್ನೊಂದೆಡೆ ವಿಧಾನಪರಿಷತ್ ಸದಸ್ಯ ಪಿ.ಎಚ್. ಪೂಜಾರ್ ಅವರು ಮುಂದಿನ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತು ಅವರ ಬೆಂಬಲಿಗರ ವಲಯದಲ್ಲಿ ಕೇಳಿಬರುತ್ತಿದೆ.
ಆದರೆ ಬಾಗಲಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತ ಎರಡು ಬಾರಿ ಸೋಲು ಕಂಡಿರುವ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಮತ್ತೊಂದು ಅವಕಾಶ ನೀಡಬೇಕೆಂಬ ಒತ್ತಡವೂ ಪಕ್ಷದೊಳಗಿದೆ.
ಈ ಇಬ್ಬರ ರಾಜಕೀಯ ಆಕಾಂಕ್ಷೆಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಬಿಜೆಪಿ ವಲಯದಲ್ಲಿ ಕ್ಷೇತ್ರ ಹೊಂದಾಣಿಕೆಯ ಲೆಕ್ಕಾಚಾರಗಳು ನಡೆಯುತ್ತಿವೆ ಎನ್ನಲಾಗಿದೆ.
ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಗೆ ಜಮಖಂಡಿಯಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿ, ಬೀಳಗಿ ಕ್ಷೇತ್ರದಿಂದ ಪಿ.ಎಚ್. ಪೂಜಾರ್ ಅವರಿಗೆ ಅವಕಾಶ ನೀಡಿದರೆ, ಬಾಗಲಕೋಟೆ ಕ್ಷೇತ್ರದಲ್ಲಿ ವೀರಣ್ಣ ಚರಂತಿಮಠ ಅವರಿಗೆ ಮತ್ತೊಂದು ಅವಕಾಶ ಕಲ್ಪಿಸಲು ಅನುಕೂಲವಾಗಬಹುದು ಎಂಬ ರಾಜಕೀಯ ಲೆಕ್ಕಾಚಾರವೂ ಚರ್ಚೆಯಲ್ಲಿದೆ.
ಈ ಲೆಕ್ಕಾಚಾರದ ಹಿಂದೆ 2008ರ ಕ್ಷೇತ್ರ ಪುನರ್ವಿಂಗಡಣೆಯ ಭೌಗೋಳಿಕ ಬದಲಾವಣೆಗಳೂ ಪ್ರಮುಖವಾಗಿವೆ.
2008ಕ್ಕೂ ಮೊದಲು ಬೀಳಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಜಮಖಂಡಿ ತಾಲೂಕಿನ ಕೆಲವು ಗ್ರಾಮಗಳು ಈಗ ಜಮಖಂಡಿ ಕ್ಷೇತ್ರದ ವ್ಯಾಪ್ತಿಗೆ ಬಂದಿವೆ. ಅದೇ ರೀತಿ ಬಾಗಲಕೋಟೆ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಕೆಲವು ಗ್ರಾಮಗಳು, ಪಿ.ಎಚ್. ಪೂಜಾರ್ ಅವರ ಸ್ವಗ್ರಾಮ ತುಳಸಿಗಿರಿ ಸೇರಿದಂತೆ ಹಲವು ಹಳ್ಳಿಗಳು ಈಗ ಬೀಳಗಿ ಕ್ಷೇತ್ರದ ವ್ಯಾಪ್ತಿಯಲ್ಲಿವೆ.
ಹೀಗಾಗಿ ಈ ಹಿಂದಿನ ರಾಜಕೀಯ ಹಾಗೂ ಭೌಗೋಳಿಕ ಸಂಪರ್ಕಗಳನ್ನು ಆಧರಿಸಿ ನಡೆಯುತ್ತಿರುವ ಕ್ಷೇತ್ರ ಹೊಂದಾಣಿಕೆಯ ಚರ್ಚೆಗಳು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರಲಿವೆ ಎಂಬುದು ಕುತೂಹಲದ ಸಂಗತಿಯಾಗಿದೆ.
ತೇರದಾಳ ಕ್ಷೇತ್ರಕ್ಕೂ ವಲಸೆ ರಾಜಕಾರಣದ ಬಿಸಿ
ಕ್ಷೇತ್ರ ಪುನರ್ವಿಂಗಡಣೆಯ ನಂತರ ನಡೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಮೂರು ಬಾರಿ ಬಿಜೆಪಿ ಗೆಲುವು ದಾಖಲಿಸಿರುವ ತೇರದಾಳ ಕ್ಷೇತ್ರದಲ್ಲಿಯೂ ಮುಂದಿನ ಚುನಾವಣೆಯ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಪ್ರಸ್ತುತ ಶಾಸಕ ಸಿದ್ದು ಸವದಿ ಅವರು 2013ರ ಚುನಾವಣೆಯಲ್ಲಿ ಸೋಲು ಕಂಡಿದ್ದನ್ನು ಹೊರತುಪಡಿಸಿದರೆ ಉಳಿದ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಉಮಾಶ್ರೀ ಅವರು ಗೆಲುವು ಸಾಧಿಸಿ ಸಚಿವರಾಗಿದ್ದರು. 2008 ಹಾಗೂ 2018ರ ಚುನಾವಣೆಗಳಲ್ಲಿ ಉಮಾಶ್ರೀ ಸೋಲು ಕಂಡಿದ್ದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸಿದ್ದು ಕೊಣ್ಣೂರ ಅವರಿಗೆ ಟಿಕೆಟ್ ನೀಡಿದರೂ ಕ್ಷೇತ್ರದ ಮತದಾರರು ಸಿದ್ದು ಸವದಿ ಅವರನ್ನು ಆಯ್ಕೆ ಮಾಡಿದ್ದರು.
ಇದೀಗ 2023ರ ಚುನಾವಣೆಯಲ್ಲಿ ಸೋಲು ಕಂಡಿರುವ ಸಿದ್ದು ಕೊಣ್ಣೂರ ಅವರು ಕ್ಷೇತ್ರದಲ್ಲಿ ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ 2023ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪದ್ಮಜೀತ ನಾಡಗೌಡ ಅವರು 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಇವರ ಜೊತೆಗೆ ಇನ್ನೂ ಹಲವು ನಾಯಕರು ಕಾಂಗ್ರೆಸ್ ಟಿಕೆಟ್ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಹೊರಗಿನ ಅಭ್ಯರ್ಥಿ ಎನ್ನಲಾಗುತ್ತಿರುವ ಗಣೇಶ ಅವರ ಹೆಸರೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದ್ದು, ಕ್ಷೇತ್ರದಲ್ಲಿ ಅವರ ಚಟುವಟಿಕೆಗಳು ಚರ್ಚೆಗೆ ಕಾರಣವಾಗಿವೆ.
ಹೀಗಾಗಿ ತೇರದಾಳದಲ್ಲಿಯೂ ಸ್ಥಳೀಯ ಮತ್ತು ಹೊರಗಿನ ಅಭ್ಯರ್ಥಿಗಳ ನಡುವಿನ ರಾಜಕೀಯ ಪೈಪೋಟಿ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕ್ಷೇತ್ರ ಪುನರ್ವಿಂಗಡಣೆಯೇ ರಾಜಕೀಯ ಲೆಕ್ಕಾಚಾರಕ್ಕೆ ತಿರುವು?
ಬಾಗಲಕೋಟೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ವಲಸೆ ರಾಜಕಾರಣದ ಚರ್ಚೆ ಜೋರಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಮಟ್ಟದಲ್ಲಿ ಕ್ಷೇತ್ರ ಪುನರ್ವಿಂಗಡಣೆ ವಿಚಾರವೂ ಮಹತ್ವ ಪಡೆದುಕೊಂಡಿದೆ.
ಕ್ಷೇತ್ರಗಳ ಪುನರ್ವಿಂಗಡಣೆಗೆ ಸಂಬಂಧಿಸಿದ ಪ್ರಕ್ರಿಯೆ ಹಾಗೂ ಅದಕ್ಕೆ ಅಗತ್ಯವಿರುವ ರಾಜಕೀಯ ಮತ್ತು ಸಾಂವಿಧಾನಿಕ ಒಪ್ಪಿಗೆಗಳ ಕುರಿತು ದೇಶದ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ಪ್ರಕ್ರಿಯೆ ಯಾವಾಗ ಮತ್ತು ಯಾವ ಸ್ವರೂಪದಲ್ಲಿ ಮುಂದುವರಿಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕ್ಷೇತ್ರ ಪುನರ್ವಿಂಗಡಣೆ ಜಾರಿಯಾದರೆ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ವ್ಯಾಪ್ತಿ, ಮತದಾರರ ಸಂಖ್ಯೆ ಹಾಗೂ ರಾಜಕೀಯ ಸಮೀಕರಣಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಈಗಾಗಲೇ ನಡೆಯುತ್ತಿರುವ ವಲಸೆ ರಾಜಕಾರಣದ ಚರ್ಚೆ ಮತ್ತಷ್ಟು ತೀವ್ರಗೊಳ್ಳಬಹುದು.
ಯಾವ ನಾಯಕರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ? ಸ್ಥಳೀಯರಿಗೆ ಆದ್ಯತೆ ಸಿಗಲಿದೆಯೇ ಅಥವಾ ಪಕ್ಷಗಳು ಗೆಲುವಿನ ಲೆಕ್ಕಾಚಾರಕ್ಕೆ ಮಣೆ ಹಾಕಲಿವೆಯೇ? ಕ್ಷೇತ್ರಗಳ ಗಡಿ ಬದಲಾವಣೆಯಿಂದ ಯಾರ ರಾಜಕೀಯ ಭವಿಷ್ಯಕ್ಕೆ ಅನುಕೂಲವಾಗಲಿದೆ? ಎಂಬ ಪ್ರಶ್ನೆಗಳು ಈಗಿನಿಂದಲೇ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.
ಒಟ್ಟಾರೆ, 2028ರ ವಿಧಾನಸಭಾ ಚುನಾವಣೆಗೆ ಮುನ್ನವೇ ಬಾಗಲಕೋಟೆ ಜಿಲ್ಲೆಯ ರಾಜಕೀಯ ಚಿತ್ರಣ ಕುತೂಹಲಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆದರೆ ಕ್ಷೇತ್ರ ಪುನರ್ವಿಂಗಡಣೆ ಮತ್ತು ಪಕ್ಷಗಳ ಅಧಿಕೃತ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಸ್ಪಷ್ಟವಾಗು
ವವರೆಗೂ ಈ ಎಲ್ಲ ಚರ್ಚೆಗಳು ರಾಜಕೀಯ ಲೆಕ್ಕಾಚಾರ ಹಾಗೂ ನಿರೀಕ್ಷೆಗಳಾಗಿಯೇ ಉಳಿಯಲಿವೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande