
ಬೆಂಗಳೂರು, 24 ನವೆಂಬರ್ (ಹಿ.ಸ.):
ರಾಜಧಾನಿ ಬೆಂಗಳೂರಿನ ಐತಿಹಾಸಿಕ ಕಬ್ಬನ್ ಪಾರ್ಕ್ನಲ್ಲಿ ಮತ್ತೊಮ್ಮೆ ಹೂವಿನ ಲೋಕ ಅನಾವರಣಗೊಳ್ಳಲು ಸಜ್ಜಾಗಿದೆ.
ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆಯ ವತಿಯಿಂದ ಆಯೋಜಿಸಿರುವ 'ಹೂಗಳ ಹಬ್ಬ-2026' ಪುಷ್ಪ ಪ್ರದರ್ಶನಕ್ಕೆ ನಾಳೆ (ನವೆಂಬರ್ 25) ಚಾಲನೆ ದೊರೆಯಲಿದೆ.
'ಫ್ಲವರ್ ಫೆಸ್ಟಿವಲ್-2026: ಎ ಫ್ಯೂಷನ್ ಆಫ್ ಆರ್ಟ್ ಅಂಡ್ ಕಲ್ಚರ್' ಎಂಬ ಶೀರ್ಷಿಕೆಯಡಿ ನಡೆಯಲಿರುವ ಈ ಪ್ರದರ್ಶನದಲ್ಲಿ 15 ಲಕ್ಷಕ್ಕೂ ಅಧಿಕ ಕಟ್ ಫ್ಲವರ್ಸ್ ಹಾಗೂ ಸುಮಾರು 1.2 ಲಕ್ಷ ಹೂವಿನ ಮತ್ತು ಅಲಂಕಾರಿಕ ಗಿಡಗಳ ಕುಂಡಗಳನ್ನು ಪ್ರದರ್ಶನಕ್ಕಿಡಲಾಗುತ್ತಿದೆ. ಡಿಸೆಂಬರ್ 7ರವರೆಗೆ ಒಟ್ಟು 13 ದಿನಗಳ ಕಾಲ ಈ ಪುಷ್ಪ ಪ್ರದರ್ಶನ ನಡೆಯಲಿದೆ.
ಹೂವುಗಳಲ್ಲಿ ಅರಳಲಿದೆ ನಾಡಿನ ಇತಿಹಾಸ:
ಈ ಬಾರಿಯ ಫ್ಲವರ್ ಶೋನಲ್ಲಿ ಕರ್ನಾಟಕದ ಸಂಸ್ಕೃತಿ, ಪರಂಪರೆ ಹಾಗೂ ಐತಿಹಾಸಿಕ ವೈಭವವನ್ನು ಬಿಂಬಿಸುವ ವಿಶೇಷ ಕಲಾಕೃತಿಗಳು ಪ್ರಮುಖ ಆಕರ್ಷಣೆಯಾಗಲಿವೆ. ತಾಯಿ ಭುವನೇಶ್ವರಿ ದೇವಿಯ ಪ್ರತಿಕೃತಿ, ಕರ್ನಾಟಕದ ನಕ್ಷೆ, ಹೊಯ್ಸಳ ಶಿಲ್ಪಕಲೆ, ಗಂಡಭೇರುಂಡ ಲಾಂಛನ, ನವದೆಹಲಿಯ ಇಂಡಿಯಾ ಗೇಟ್ ಹಾಗೂ ನಮ್ಮ ಮೆಟ್ರೋ ರೈಲಿನ ಮಾದರಿಯನ್ನು ಹೂವುಗಳಿಂದ ಸಿದ್ಧಪಡಿಸಲಾಗುತ್ತಿದೆ.
ಇದರ ಜತೆಗೆ ಕರ್ನಾಟಕದ ವೀರ ಮಹಿಳೆಯರ ಸಾಹಸ ಮತ್ತು ಸಾಧನೆಗಳನ್ನು ಪರಿಚಯಿಸುವ ವರ್ಟಿಕಲ್ ಗಾರ್ಡನ್ ಕೂಡ ವಿಶೇಷ ಗಮನ ಸೆಳೆಯಲಿದೆ. ಮಕ್ಕಳನ್ನು ಆಕರ್ಷಿಸಲು ನರ್ತಿಸುವ ನವಿಲುಗಳು, ಪಾಂಡಾ, ಸ್ಟಾರ್ಫಿಶ್, ಕಾರ್ಟೂನ್ ಪಾತ್ರಗಳು ಸೇರಿದಂತೆ ವಿವಿಧ ಕಲಾಕೃತಿಗಳನ್ನು ರೂಪಿಸಲಾಗಿದೆ. ಹೂವು ಮತ್ತು ವರ್ಣರಂಜಿತ ತರಕಾರಿಗಳಿಂದ ಸಿದ್ಧಪಡಿಸುವ ಆನೆ, ಚಿಟ್ಟೆ ಹಾಗೂ ಪುಷ್ಪ ರಂಗೋಲಿ ಪ್ರದರ್ಶನದ ಮೆರುಗು ಹೆಚ್ಚಿಸಲಿವೆ.
1.25 ಲಕ್ಷ ಅಲಂಕಾರಿಕ ಹೂವಿನ ಕುಂಡಗಳ ಪ್ರದರ್ಶನ:
ಕಬ್ಬನ್ ಪಾರ್ಕ್ನ ಫೌಂಟೇನ್ ವೃತ್ತದಿಂದ ಬ್ಯಾಂಡ್ಸ್ಟ್ಯಾಂಡ್ ಮಾರ್ಗವಾಗಿ ಬಾಲಭವನದವರೆಗೆ ಪ್ರದರ್ಶನ ವಿಸ್ತರಿಸಲಿದೆ. ಈ ಮಾರ್ಗದುದ್ದಕ್ಕೂ ಪೆಟೂನಿಯಾ, ಸೇವಂತಿಗೆ, ಚೆಂಡುಹೂವು, ಸ್ನಾಪ್ಡ್ರಾಗನ್, ಸಾಲ್ವಿಯಾ, ಸೂರ್ಯಕಾಂತಿ, ಡೇಲಿಯಾ, ಬೋನ್ಸಾಯ್ ಹಾಗೂ ಆರ್ಕಿಡ್ ಸೇರಿದಂತೆ ವಿವಿಧ ಬಗೆಯ ಹೂವು ಮತ್ತು ಅಲಂಕಾರಿಕ ಗಿಡಗಳನ್ನು ಪ್ರದರ್ಶಿಸಲಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ:
ಪುಷ್ಪ ಪ್ರದರ್ಶನದ ಜತೆಗೆ ಪ್ರತಿದಿನ ಬ್ಯಾಂಡ್ಸ್ಟ್ಯಾಂಡ್ನಲ್ಲಿ ನೃತ್ಯ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಬ್ಯಾಂಡ್ ವಾದನ, ಭಾರತೀಯ ಸೇನೆಯ ರಕ್ಷಣಾ ಸಲಕರಣೆಗಳ ಪ್ರದರ್ಶನ ಹಾಗೂ ಜಾಗೃತಿ ಕಾರ್ಯಾಗಾರಗಳು ನಡೆಯಲಿವೆ.
ಇಕೆಬಾನ, ಥಾಯ್ ಕಲೆ, ತರಕಾರಿ ಮತ್ತು ಹಣ್ಣುಗಳ ಕೆತ್ತನೆ, ರಂಗೋಲಿ, ಚಿತ್ರಕಲೆ ಹಾಗೂ ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳೂ ಆಯೋಜನೆಯಾಗಿವೆ. ಬೋನ್ಸಾಯ್, ಕಳ್ಳಿ ಗಿಡಗಳು, ಸಕ್ಯುಲೆಂಟ್ಸ್ ಮತ್ತು ವಿವಿಧ ಅಲಂಕಾರಿಕ ಸಸ್ಯಗಳ ವಿಶೇಷ ಪ್ರದರ್ಶನವೂ ಇರಲಿದೆ.
ವಾರದ ದಿನಗಳಲ್ಲಿ ವಯಸ್ಕರಿಗೆ 50 ರೂ. ಹಾಗೂ 12 ವರ್ಷದೊಳಗಿನ ಮಕ್ಕಳಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾದಿನಗಳಲ್ಲಿ ವಯಸ್ಕರಿಗೆ 80 ರೂ. ಮತ್ತು ಮಕ್ಕಳಿಗೆ 20 ರೂ. ಶುಲ್ಕ ಇರಲಿದೆ.
ವಾಹನಗಳಲ್ಲಿ ಬರುವ ಸಾರ್ವಜನಿಕರಿಗಾಗಿ ಎನ್ಜಿಒ ಹಾಲ್ ವೃತ್ತ, ಕ್ವೀನ್ಸ್ ಪಾರ್ಕ್, ಹೈಕೋರ್ಟ್ ಪಾರ್ಕಿಂಗ್ ಆವರಣ, ಶ್ರೀ ಕಂಠೀರವ ಕ್ರೀಡಾಂಗಣ ಹಾಗೂ ಸೇಂಟ್ ಜೋಸೆಫ್ ಶಾಲೆಯ ಆವರಣದಲ್ಲಿ ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆ ಕಲ್ಪಿಸಲಾಗಿದೆ.
ಒಟ್ಟಿನಲ್ಲಿ, ಹೂವುಗಳ ಸೊಬಗಿನೊಂದಿಗೆ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ಬಾರಿಯ ಕಬ್ಬನ್ ಪಾರ್ಕ್ ಫ್ಲವರ್ ಶೋ ಬೆಂಗಳೂರಿನ ಜನರಿಗೆ ವಿಶೇಷ ಅನುಭವ ನೀಡುವ ನಿರೀಕ್ಷೆಯಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R