ಜಾತ್ರೆಗೂ ಮುನ್ನ ಬೆಂಗಳೂರಿಗರ ಸಮಸ್ಯೆ ಬಗೆಹರಿಸಿ: ಪ್ರತಿಪಕ್ಷ ನಾಯಕ ಆರ್. ಅಶೋಕ ಆಗ್ರಹ
ಬೆಂಗಳೂರು, 24 ನವೆಂಬರ್ (ಹಿ.ಸ.): ಬೆಂಗಳೂರು ಜಾತ್ರೆ ಆಯೋಜಿಸುವುದಕ್ಕಿಂತ ಮೊದಲು ನಗರದ ಜನರು ಪ್ರತಿನಿತ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ಪ್ರಕಟಿಸಿರುವ ಅವರು, ಬೆಂ
ಅಶೋಕ್ ಫೈಲ್ ಪೋಟೋ


ಬೆಂಗಳೂರು, 24 ನವೆಂಬರ್ (ಹಿ.ಸ.):

ಬೆಂಗಳೂರು ಜಾತ್ರೆ ಆಯೋಜಿಸುವುದಕ್ಕಿಂತ ಮೊದಲು ನಗರದ ಜನರು ಪ್ರತಿನಿತ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ಪ್ರಕಟಿಸಿರುವ ಅವರು, ಬೆಂಗಳೂರು ಜಾತ್ರೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಅದ್ಧೂರಿ ಕಾರ್ಯಕ್ರಮ ಆಯೋಜಿಸುವ ಮೂಲಕ ನಗರದ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ನಗರದಲ್ಲಿ ಕಸದ ಸಮಸ್ಯೆ, ರಸ್ತೆಗಳಲ್ಲಿನ ಗುಂಡಿಗಳು, ಸಂಚಾರ ದಟ್ಟಣೆ, ಮಳೆಗಾಲದಲ್ಲಿ ಉಂಟಾಗುವ ಜಲಾವೃತ, ಕುಡಿಯುವ ನೀರಿನ ಕೊರತೆ ಹಾಗೂ ಕಾವೇರಿ ನೀರಿನ ಅಸಮರ್ಪಕ ಪೂರೈಕೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದರ ಜತೆಗೆ ಆಸ್ತಿ ತೆರಿಗೆ ಹೆಚ್ಚಳ, ಇ-ಖಾತಾ ಹೆಸರಿನಲ್ಲಿ ವಿಧಿಸಲಾಗುತ್ತಿರುವ ವಿವಿಧ ಶುಲ್ಕಗಳು, ಮೆಟ್ರೋ ಮತ್ತು ಬಸ್ ಪ್ರಯಾಣ ದರ ಏರಿಕೆಯಿಂದ ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.

ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ಒಳಚರಂಡಿ ವ್ಯವಸ್ಥೆ ಸುಧಾರಣೆ, ಕಳಪೆ ರಸ್ತೆ ಕಾಮಗಾರಿ, ಅಪೂರ್ಣ ಯೋಜನೆಗಳು, ಧೂಳು ಮತ್ತು ವಾಯುಮಾಲಿನ್ಯ ನಿಯಂತ್ರಣ ಸೇರಿದಂತೆ ಹಲವು ಮೂಲಸೌಕರ್ಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರಿಗರಿಗೆ ಜಾತ್ರೆಗಿಂತ ಸುಗಮ ಸಂಚಾರ, ಗುಂಡಿಮುಕ್ತ ರಸ್ತೆಗಳು, ಸ್ವಚ್ಛ ಪರಿಸರ, ನಿರಂತರ ಕುಡಿಯುವ ನೀರು, ಸಮರ್ಪಕ ಒಳಚರಂಡಿ ವ್ಯವಸ್ಥೆ ಮತ್ತು ಉತ್ತಮ ನಾಗರಿಕ ಸೌಲಭ್ಯಗಳು ಅಗತ್ಯವಾಗಿವೆ ಎಂದು ಹೇಳಿದ್ದಾರೆ.

ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳಿಗೆ ತಮ್ಮ ವಿರೋಧವಿಲ್ಲ. ಕಲಾವಿದರಿಗೆ ವೇದಿಕೆ ಕಲ್ಪಿಸುವುದು ಸ್ವಾಗತಾರ್ಹ. ಆದರೆ ಇಂತಹ ಕಾರ್ಯಕ್ರಮಗಳನ್ನು ಆಡಳಿತದ ವೈಫಲ್ಯಗಳನ್ನು ಮರೆಮಾಚುವ ರಾಜಕೀಯ ವೇದಿಕೆಯನ್ನಾಗಿ ಬಳಸಬಾರದು ಎಂದು ತಿಳಿಸಿದ್ದಾರೆ.

ಬೆಂಗಳೂರು ಜಾತ್ರೆ ಮುಗಿದ ಬಳಿಕ ನಗರದ ರಸ್ತೆಗಳು ಗುಂಡಿಮುಕ್ತವಾಗುತ್ತವೆಯೇ, ಕಸದ ಸಮಸ್ಯೆ ಬಗೆಹರಿಯುತ್ತದೆಯೇ, ಸಂಚಾರ ದಟ್ಟಣೆ ಕಡಿಮೆಯಾಗುತ್ತದೆಯೇ ಮತ್ತು ಜನರಿಗೆ ಸಮರ್ಪಕ ಕುಡಿಯುವ ನೀರು ದೊರೆಯುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

13 ದಿನಗಳ ಬೆಂಗಳೂರು ಜಾತ್ರೆಗೆ 20 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಆದರೆ ನಗರದ ಜನರು ವರ್ಷಪೂರ್ತಿ ಮೂಲಸೌಕರ್ಯ ಸಮಸ್ಯೆಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ ಅವರು ಜಾತ್ರೆ ಮತ್ತು ಪ್ರಚಾರ ಕಾರ್ಯಕ್ರಮಗಳಿಗೆ ತೋರುವ ಉತ್ಸಾಹವನ್ನು ನಗರದ ಅಭಿವೃದ್ಧಿ ಕಾರ್ಯಗಳಲ್ಲೂ ತೋರಿಸಬೇಕು. ಬೆಂಗಳೂರಿಗೆ ಜಾತ್ರೆಯ ಆಡಳಿತಕ್ಕಿಂತ ಜವಾಬ್ದಾರಿಯುತ ಆಡಳಿತದ ಅಗತ್ಯವಿದೆ. ರೀಲ್ಸ್, ಜಾತ್ರೆ ಮತ್ತು ಪ್ರಚಾರಗಳಿಂದ ನಗರದ ಅಭಿವೃದ್ಧಿ ಸಾಧ್ಯವಿಲ್ಲ. ಅದಕ್ಕೆ ಇಚ್ಛಾಶಕ್ತಿ, ದೂರದೃಷ್ಟಿ ಮತ್ತು ಜವಾಬ್ದಾರಿಯುತ ಆಡಳಿತ ಬೇಕು ಎಂದು ಆರ್. ಅಶೋಕ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande