ಆರು ವರ್ಷಗಳ ಬಳಿಕ ಮತ್ತೆ ಒಂದಾದ ಬಿಜೆಪಿ–ಅಕಾಲಿದಳ; ಪಂಜಾಬ್ನ 117 ಕ್ಷೇತ್ರಗಳಲ್ಲೂ ಮೈತ್ರಿ ಸ್ಪರ್ಧೆ
ನವದೆಹಲಿ, 24 ನವೆಂಬರ್ (ಹಿ.ಸ.): ಆರು ವರ್ಷಗಳ ಬಳಿಕ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿರೋಮಣಿ ಅಕಾಲಿದಳ ಮತ್ತೆ ಒಂದಾಗಿವೆ. ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ರಾಜ್ಯದ ಎಲ್ಲ 117 ಕ್ಷೇತ್ರಗಳಲ್ಲೂ ಮೈತ್ರಿಯೊಂದಿಗೆ ಸ್ಪರ್ಧಿಸಲು ನಿರ್ಧರಿಸಿವೆ. ದೆಹಲಿಯ ಬಿಜೆಪಿ ಕೇಂದ
भाजपा और शिरोमणि अकाली दल के गठबंधन की घोषणा के दौरान मंगलवार को नई दिल्ली स्थित भाजपा मुख्यालय में केंद्रीय गृह मंत्री अमित शाह, भाजपा अध्यक्ष नितिन नवीन और अकाली दल अध्यक्ष सुखबीर सिंह बादल।


ನವದೆಹಲಿ, 24 ನವೆಂಬರ್ (ಹಿ.ಸ.):

ಆರು ವರ್ಷಗಳ ಬಳಿಕ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿರೋಮಣಿ ಅಕಾಲಿದಳ ಮತ್ತೆ ಒಂದಾಗಿವೆ. ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ರಾಜ್ಯದ ಎಲ್ಲ 117 ಕ್ಷೇತ್ರಗಳಲ್ಲೂ ಮೈತ್ರಿಯೊಂದಿಗೆ ಸ್ಪರ್ಧಿಸಲು ನಿರ್ಧರಿಸಿವೆ.

ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಹಾಗೂ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರ ಸಮ್ಮುಖದಲ್ಲಿ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, 2029ರ ಡಿಸೆಂಬರ್ 31ರೊಳಗೆ ಪಂಜಾಬ್‌ನ್ನು ಸಂಪೂರ್ಣವಾಗಿ ಮಾದಕವಸ್ತು ಮುಕ್ತ ರಾಜ್ಯವನ್ನಾಗಿಸುವುದು ಮೈತ್ರಿಕೂಟದ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಮತ್ತು ದೇಶವಿರೋಧಿ ಶಕ್ತಿಗಳನ್ನು ಬೇರುಸಹಿತ ಕಿತ್ತೊಗೆಯುವುದು ಮೈತ್ರಿಯ ಪ್ರಮುಖ ಆದ್ಯತೆಗಳಾಗಿವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ವಿಸ್ತರಣೆ ಕುರಿತು ಚರ್ಚೆ ನಡೆಸಲಾಗಿತ್ತು. ಬಳಿಕ ಪ್ರಧಾನಿ ಮೋದಿ ಅವರು ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಇದೀಗ ಅಕಾಲಿದಳ ಮತ್ತೆ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವುದರೊಂದಿಗೆ ಮೈತ್ರಿ ಪೂರ್ಣಗೊಂಡಿದೆ ಎಂದು ಅಮಿತ್ ಶಾ ಹೇಳಿದರು.

ಬಿಜೆಪಿ ಮತ್ತು ಅಕಾಲಿದಳ ಪಂಜಾಬ್‌ನ ಎಲ್ಲ 117 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾಗಿ ಸ್ಪರ್ಧಿಸಲಿವೆ. ಎರಡೂ ಪಕ್ಷಗಳು ಜಂಟಿಯಾಗಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಿವೆ. ಮೈತ್ರಿಯಲ್ಲಿ ಅಕಾಲಿದಳ ದೊಡ್ಡಣ್ಣನ ಪಾತ್ರ ನಿರ್ವಹಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿ ಮತ್ತು ಅಕಾಲಿದಳದ ನಡುವಿನ ಸಂಬಂಧ ಬಹಳ ಹಳೆಯದು. ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರ ಕಾಲದಿಂದಲೂ ಎರಡೂ ಪಕ್ಷಗಳ ನಡುವೆ ಉತ್ತಮ ಬಾಂಧವ್ಯವಿದೆ. ಹಲವು ಚುನಾವಣೆಗಳಲ್ಲಿ ಒಟ್ಟಾಗಿ ಸ್ಪರ್ಧಿಸಿ ಸೋಲು-ಗೆಲುವುಗಳನ್ನು ಕಂಡಿದ್ದರೂ ಮೈತ್ರಿಯ ಸಂಬಂಧ ಮುಂದುವರಿದಿದೆ. ಈ ಮೈತ್ರಿ ಪಂಜಾಬ್ ಮಾತ್ರವಲ್ಲದೆ ಇಡೀ ದೇಶದಲ್ಲಿ ಹಿಂದೂ-ಸಿಖ್ ಬಾಂಧವ್ಯಕ್ಕೆ ಮಾದರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾದಕವಸ್ತು ಮುಕ್ತ ಪಂಜಾಬ್‌ಗೆ ಆದ್ಯತೆ

ಪಂಜಾಬ್‌ನಲ್ಲಿ ಮಾದಕವಸ್ತುಗಳ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಮೈತ್ರಿಕೂಟದ ಪ್ರಮುಖ ಗುರಿಯಾಗಿದೆ ಎಂದು ಅಮಿತ್ ಶಾ ಹೇಳಿದರು.

ಹಿಂದಿನ ಸರ್ಕಾರಗಳು ಮಾದಕವಸ್ತು ಸಮಸ್ಯೆ ನಿವಾರಣೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಮೂರು ತಿಂಗಳಲ್ಲಿ ಪಂಜಾಬ್‌ನ್ನು ಮಾದಕವಸ್ತು ಮುಕ್ತಗೊಳಿಸುವ ಭರವಸೆ ನೀಡಿದ್ದರು. ಆದರೆ, ಸಮಸ್ಯೆ ನಿವಾರಣೆಯಾಗುವ ಬದಲು ಮತ್ತಷ್ಟು ಹೆಚ್ಚಾಗಿದೆ ಎಂದು ಟೀಕಿಸಿದರು.

2017ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪಂಜಾಬ್‌ನಿಂದ ಮಾದಕವಸ್ತು ಸಮಸ್ಯೆಯನ್ನು ಸಂಪೂರ್ಣವಾಗಿ ತೊಡೆದುಹಾಕುವುದಾಗಿ ಭರವಸೆ ನೀಡಿದ್ದರು. ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಸಮಸ್ಯೆ ಬಗೆಹರಿಸಲಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕೂಡ ಯಾವುದೇ ಪರಿಣಾಮಕಾರಿ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಮತ್ತು ಅಕಾಲಿದಳದ ಸರ್ಕಾರ ಅಧಿಕಾರಕ್ಕೆ ಬಂದರೆ 2029ರ ಡಿಸೆಂಬರ್ 31ರೊಳಗೆ ಪಂಜಾಬ್‌ನ್ನು ಸಂಪೂರ್ಣ ಮಾದಕವಸ್ತು ಮುಕ್ತ ರಾಜ್ಯವನ್ನಾಗಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.

ರೈತರ ಸಮಸ್ಯೆಗಳು, ಉದ್ಯೋಗ ಸೃಷ್ಟಿ ಹಾಗೂ ರಾಜ್ಯದ ಇತರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೂ ಮೈತ್ರಿಕೂಟ ಕಾರ್ಯಯೋಜನೆ ರೂಪಿಸಿದೆ. ಮುಂದಿನ ಮೂರು ತಿಂಗಳಲ್ಲಿ ಈ ವಿಚಾರಗಳಲ್ಲಿ ಪ್ರಗತಿ ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಪ್ರಸ್ತುತ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಸರ್ಕಾರವನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ಪಂಜಾಬ್ ಜನರೇ ನಿರ್ಧರಿಸಲಿದ್ದಾರೆ. ಬಿಜೆಪಿ ಮತ್ತು ಅಕಾಲಿದಳ ಒಟ್ಟಾಗಿ ರಾಜ್ಯವನ್ನು ಮತ್ತೆ ಸಮೃದ್ಧಿಯತ್ತ ಕೊಂಡೊಯ್ಯಲಿವೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಭಾವನಾತ್ಮಕ ಮೈತ್ರಿ ಎಂದ ಸುಖಬೀರ್ ಬಾದಲ್

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಮೈತ್ರಿ ಘೋಷಣೆಯನ್ನು ಸ್ವಾಗತಿಸಿದರು. ಗುರುಪೂರ್ಣಿಮೆ ಮತ್ತು ದೇವ ದೀಪಾವಳಿಯ ಪವಿತ್ರ ಸಂದರ್ಭದಲ್ಲಿ ಎರಡೂ ಪಕ್ಷಗಳು ಮತ್ತೆ ಒಂದಾಗಿರುವುದು ಸಂತಸದ ಸಂಗತಿ. ಈ ಮೈತ್ರಿಯಿಂದ ಪಂಜಾಬ್‌ನಲ್ಲಿ ಬೆಳಕು ಮತ್ತು ಅಭಿವೃದ್ಧಿಯ ವಿಸ್ತರಣೆಯಾಗಲಿದೆ. ಅಕಾಲಿದಳ ಎನ್‌ಡಿಎಗೆ ಸೇರ್ಪಡೆಯಾಗಿರುವುದರಿಂದ ಮೈತ್ರಿಕೂಟದ ಶಕ್ತಿ ಹೆಚ್ಚಾಗಿದೆ ಎಂದರು.

ಬಿಜೆಪಿ ಮತ್ತು ಅಕಾಲಿದಳದ ಸಂಬಂಧ ಸಹಜ ಮೈತ್ರಿಯಾಗಿದೆ. ಇದು ಜನರು ಮತ್ತು ನಾಯಕರ ನಡುವಿನ ಸ್ವಾಭಾವಿಕ ಬಾಂಧವ್ಯವಾಗಿದ್ದು, ಪಂಜಾಬ್‌ನ ಪ್ರಗತಿಗೆ ನೆರವಾಗಲಿದೆ ಎಂದು ಹೇಳಿದರು.

ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಮಾತನಾಡಿ, ಬಿಜೆಪಿ ಮತ್ತು ಅಕಾಲಿದಳದ ಮೈತ್ರಿ ಕೇವಲ ರಾಜಕೀಯ ಒಪ್ಪಂದವಲ್ಲ. ಇದು ಪಂಜಾಬ್ ಮತ್ತು ದೇಶದ ಹಿತದೃಷ್ಟಿಯಿಂದ ರೂಪುಗೊಂಡ ಭಾವನಾತ್ಮಕ ಮೈತ್ರಿಯಾಗಿದೆ ಎಂದರು.

ತಮ್ಮ ತಂದೆ ಬಿಜೆಪಿ ಮತ್ತು ಅಕಾಲಿದಳದ ಸಂಬಂಧವನ್ನು ಒಂಬತ್ತು ತಿಂಗಳ ಸಂಬಂಧ ಎಂದು ಕರೆಯುತ್ತಿದ್ದರು ಎಂದು ಸ್ಮರಿಸಿದ ಅವರು, ದೇಶ, ಪಂಜಾಬ್ ಮತ್ತು ಸಿಖ್ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡುವುದು ಈ ಮೈತ್ರಿಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಎರಡೂ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸಿದ ಸಂದರ್ಭಗಳಲ್ಲಿ ಪಂಜಾಬ್ ಅಭಿವೃದ್ಧಿ ಕಂಡಿದೆ. ಅಕಾಲಿದಳ ದೇಶದ ಇತಿಹಾಸದಲ್ಲಿನ ಎರಡನೇ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿದ್ದು, 106 ವರ್ಷಗಳ ಇತಿಹಾಸ ಹೊಂದಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಪಕ್ಷ ಮಹತ್ವದ ಪಾತ್ರ ವಹಿಸಿದೆ. ದೇಶದ ಪ್ರತಿಯೊಂದು ಸಂಕಷ್ಟದ ಸಂದರ್ಭದಲ್ಲೂ ಹೋರಾಟ ನಡೆಸಿದೆ ಎಂದು ಹೇಳಿದರು.

ಎರಡೂ ಪಕ್ಷಗಳು ಮತ್ತೆ ಒಂದಾಗಿರುವುದು ಪಂಜಾಬ್‌ನ ಹಿತದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ಮತ್ತು ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಮೈತ್ರಿಯ ಉದ್ದೇಶವಾಗಿದೆ ಎಂದರು.

2020ರಲ್ಲಿ ಮುರಿದುಬಿದ್ದಿದ್ದ ಮೈತ್ರಿ

ಬಿಜೆಪಿ ಮತ್ತು ಅಕಾಲಿದಳ ಹಲವು ವರ್ಷಗಳಿಂದ ಮಿತ್ರಪಕ್ಷಗಳಾಗಿದ್ದವು. ಆದರೆ, 2020ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅಕಾಲಿದಳ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು. ಬಳಿಕ ಕೇಂದ್ರ ಸರ್ಕಾರ ಆ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿತ್ತು.

2017ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಾಣುವ ಮುನ್ನ ಬಿಜೆಪಿ-ಅಕಾಲಿದಳ ಮೈತ್ರಿಕೂಟ ಸತತ ಹತ್ತು ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಬಳಿಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. 2022ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿ ಸರ್ಕಾರ ರಚಿಸಿತ್ತು. ಇದೀಗ ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಮತ್ತು ಅಕಾಲಿದಳ ಮತ್ತೆ ಮೈತ್ರಿ ಮಾಡಿಕೊಂಡಿವೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande