
ಬೆಂಗಳೂರು, 23 ನವೆಂಬರ್ (ಹಿ.ಸ.):
ಬೆಂಗಳೂರಿನ ಪದ್ಮನಾಭನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳನ್ನು ಕಳೆದ 16 ವರ್ಷಗಳಿಂದ ಕಾಡುತ್ತಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗುವ ನಿರೀಕ್ಷೆ ಮೂಡಿದೆ. ಸ್ಥಳೀಯ ನಿವಾಸಿಗಳು ಹಾಗೂ ಶಾಲಾ ಮಕ್ಕಳು ನಡೆಸಿದ ನಿರಂತರ ಹೋರಾಟದ ಫಲವಾಗಿ, ಇಂದಿನಿಂದ ಪ್ರದೇಶದಲ್ಲಿ ನೂತನ ತ್ಯಾಜ್ಯ ನಿರ್ವಹಣಾ ಗುತ್ತಿಗೆದಾರರು ಅಧಿಕೃತವಾಗಿ ಕಾರ್ಯಾರಂಭಿಸಲಿದ್ದಾರೆ.
ಪದ್ಮನಾಭನಗರದ 18ನೇ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ಕಸದ ರಾಶಿ ಸಂಗ್ರಹವಾಗುತ್ತಿದ್ದು, ಇದರಿಂದ ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಸದ ದುರ್ವಾಸನೆಯಿಂದ ಜನರು ಮನೆಗಳಲ್ಲಿ ನೆಮ್ಮದಿಯಿಂದ ಇರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಕಸದ ರಾಶಿಯಿಂದ ಪಾದಚಾರಿ ಮಾರ್ಗ ಸಂಪೂರ್ಣ ಮುಚ್ಚಿಹೋಗಿದ್ದು, ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರಸ್ತೆಯ ಅರ್ಧಭಾಗದವರೆಗೆ ಕಸ ಹರಡಿಕೊಂಡಿರುವುದರಿಂದ ವಾಹನಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ.
ಸ್ಥಳೀಯರ ನಿರಂತರ ಪ್ರತಿಭಟನೆ ಹಾಗೂ ಮನವಿಗಳ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮತ್ತು ಕ್ಷೇತ್ರದ ಶಾಸಕ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಳೆಯ ಗುತ್ತಿಗೆದಾರರನ್ನು ಬದಲಾಯಿಸಿ ಹೊಸ ಗುತ್ತಿಗೆದಾರರಿಗೆ ಜವಾಬ್ದಾರಿ ವಹಿಸಲಾಗಿದೆ.
ಈ ಕುರಿತು ಹೋರಾಟಗಾರ್ತಿ ವರ್ಷಾ ಶೆವಾಲೆ ಮಾತನಾಡಿ, ಕಳೆದ 16 ವರ್ಷಗಳಿಂದ ನಾವು ಈ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಆಟೊಗಳು ದೊಡ್ಡ ಲಾರಿಗಳಿಗೆ ತ್ಯಾಜ್ಯ ವರ್ಗಾಯಿಸುವ ಸ್ಥಳವಾಗಿ ಈ ಪ್ರದೇಶ ಬಳಕೆಯಾಗುತ್ತಿದೆ. ಈ ಸಂದರ್ಭದಲ್ಲಿ ಕಸ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದರೂ ಅದನ್ನು ಸಮರ್ಪಕವಾಗಿ ತೆರವುಗೊಳಿಸುತ್ತಿಲ್ಲ. ಮನೆಗಳಿಂದಲೂ ಸರಿಯಾಗಿ ಕಸ ಸಂಗ್ರಹವಾಗದ ಕಾರಣ ಕೆಲವರು ಇದೇ ಸ್ಥಳಕ್ಕೆ ತಂದು ಕಸ ಸುರಿಯುತ್ತಿದ್ದಾರೆ. ಇದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಸದ ರಾಶಿಯನ್ನು ತೆರವುಗೊಳಿಸಿದರೂ ರಾತ್ರಿ ವೇಳೆ ಮತ್ತೆ ಕೆಲವರು ಬಂದು ಕಸ ಸುರಿಯುತ್ತಾರೆ. ಈ ಪ್ರದೇಶದ ಸಮೀಪ ಶಾಲೆಗಳಿದ್ದು, ಪ್ರತಿದಿನ ನೂರಾರು ಮಕ್ಕಳು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಇದರಿಂದ ಮಕ್ಕಳ ಸುರಕ್ಷತೆಗೂ ಅಪಾಯ ಎದುರಾಗಿದೆ. ಅಲ್ಲದೆ, ಕಸದ ರಾಶಿಗೆ ಆಗಾಗ ಬೆಂಕಿ ಹಚ್ಚುವುದರಿಂದ ಹೊಗೆ ಹಾಗೂ ವಾಯುಮಾಲಿನ್ಯ ಉಂಟಾಗಿ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಶೂನ್ಯ ತ್ಯಾಜ್ಯ ಒಕ್ಕೂಟದ ಸಂಸ್ಥಾಪಕ ಹಾಗೂ ನಗರ ಸುಸ್ಥಿರತೆ ಪ್ರತಿಪಾದಕ ಧ್ರುವ್ ನಾಗರಾಜನ್ ಕೌಂಡಿನ್ಯ ಮಾತನಾಡಿ, ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ವ್ಯವಸ್ಥೆ ಶೇ.100ರಷ್ಟು ಪರಿಣಾಮಕಾರಿಯಾಗಿಲ್ಲದಿರಬಹುದು. ಆದರೂ ಆಟೊಗಳು ಮನೆಗಳಿಂದ ಕಸ ಸಂಗ್ರಹಿಸುತ್ತಿವೆ. ಆದರೆ, ಕಸ ಸಂಗ್ರಹಿಸುವ ವಾಹನಗಳು ಬಾರದ ದಿನ ಅಥವಾ ವಾಹನ ತಪ್ಪಿಸಿಕೊಂಡಾಗ ಕೆಲವರು ನಾಗರಿಕ ಪ್ರಜ್ಞೆ ಮರೆತು ರಸ್ತೆಯಲ್ಲೇ ಕಸ ಸುರಿಯುತ್ತಿದ್ದಾರೆ. ಅಂತಿಮವಾಗಿ ಈ ತ್ಯಾಜ್ಯ ಭೂಭರ್ತಿ ಪ್ರದೇಶಗಳಿಗೆ ಸೇರುತ್ತದೆ. ಇದರಿಂದ ಪರಿಸರದ ಮೇಲಿನ ಹೊರೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಕಸದ ಕಪ್ಪು ತಾಣವನ್ನು ಒಂದು ತಿಂಗಳೊಳಗೆ ಸಂಪೂರ್ಣ ತೆರವುಗೊಳಿಸಿ, ಮುಂದೆ ಮತ್ತೆ ಕಸ ಸುರಿಯದಂತೆ ತಡೆಗೋಡೆ ನಿರ್ಮಿಸುವುದಾಗಿ ಶಾಸಕ ಆರ್. ಅಶೋಕ್ ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಭರವಸೆ ಈಡೇರದಿದ್ದರೆ ಹೋರಾಟದ ಎಚ್ಚರಿಕೆ:
ನೂತನ ಗುತ್ತಿಗೆದಾರರು ನ.23ರಿಂದ ಜವಾಬ್ದಾರಿ ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ನಿವಾಸಿಗಳಲ್ಲಿದೆ. ಆದರೆ, ಕೇವಲ ಗುತ್ತಿಗೆದಾರರ ಬದಲಾವಣೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಕಸದ ಕಪ್ಪು ತಾಣವನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಮತ್ತೆ ಅಲ್ಲಿ ತ್ಯಾಜ್ಯ ಸಂಗ್ರಹವಾಗದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಜನಪ್ರತಿನಿಧಿಗಳು ನೀಡಿರುವ ಭರವಸೆಗಳನ್ನು ಈಡೇರಿಸದಿದ್ದರೆ ಬೀದಿಗಿಳಿದು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R