
ಬೆಂಗಳೂರು, 23 ನವೆಂಬರ್ (ಹಿ.ಸ.):
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ ಹಾಗೂ ಪರಂಪರೆಯನ್ನು ಬಿಂಬಿಸುವ ‘ಬೆಂಗಳೂರು ಜಾತ್ರೆ’ ಆಯೋಜನೆಗೆ ದಿನಾಂಕ ನಿಗದಿಯಾಗಿದೆ.
ಡಿಸೆಂಬರ್ 4ರಿಂದ 13ರವರೆಗೆ ಹತ್ತು ದಿನಗಳ ಕಾಲ ನಗರದಾದ್ಯಂತ ಬೆಂಗಳೂರು ಜಾತ್ರೆ ನಡೆಯಲಿದ್ದು, ಇಡೀ ನಗರವೇ ಸಾಂಸ್ಕೃತಿಕ ವೇದಿಕೆಯಾಗಿ ರೂಪುಗೊಳ್ಳಲಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ‘ನಮ್ಮ ಬೆಂಗಳೂರು, ನಮ್ಮ ಸಂಸ್ಕೃತಿ, ನಮ್ಮ ಸಂಭ್ರಮ’ ಎಂಬ ಆಶಯದೊಂದಿಗೆ ಜಾತ್ರೆಯನ್ನು ಆಯೋಜಿಸಲಾಗುತ್ತಿದೆ.
ಸಾರ್ವಜನಿಕರು, ನಾಗರಿಕ ಸಂಸ್ಥೆಗಳು ಹಾಗೂ ಸರ್ಕಾರದ ಸಹಯೋಗದಲ್ಲಿ ನಡೆಯಲಿರುವ ಈ ಉತ್ಸವವು ಬೆಂಗಳೂರಿನ ಶ್ರೀಮಂತ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಜೀವನಶೈಲಿಯನ್ನು ಅನಾವರಣಗೊಳಿಸಲಿದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಜಾತ್ರೆ ಅಥವಾ ಉತ್ಸವಗಳನ್ನು ಒಂದೇ ಸ್ಥಳದಲ್ಲಿ ಆಯೋಜಿಸಲಾಗುತ್ತದೆ. ಆದರೆ ಬೆಂಗಳೂರು ಜಾತ್ರೆಯ ವಿಶೇಷವೆಂದರೆ ಇದಕ್ಕೆ ಯಾವುದೇ ಒಂದು ನಿರ್ದಿಷ್ಟ ಸ್ಥಳ ಅಥವಾ ಕೇಂದ್ರ ವೇದಿಕೆ ಇರುವುದಿಲ್ಲ.
ನಗರದ ಉದ್ಯಾನವನಗಳು, ಕೆರೆಗಳು, ಆಟದ ಮೈದಾನಗಳು, ಶಿಕ್ಷಣ ಸಂಸ್ಥೆಗಳು, ವಸ್ತುಸಂಗ್ರಹಾಲಯಗಳು, ಸಾಂಸ್ಕೃತಿಕ ಕೇಂದ್ರಗಳು ಹಾಗೂ ವಿವಿಧ ಬಡಾವಣೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಈ ಮೂಲಕ ಇಡೀ ಬೆಂಗಳೂರನ್ನೇ ಸಾಂಸ್ಕೃತಿಕ ವೇದಿಕೆಯನ್ನಾಗಿ ಮಾಡಲಾಗುತ್ತದೆ.
ಸಂಗೀತ, ನೃತ್ಯ, ನಾಟಕಕ್ಕೂ ಆದ್ಯತೆ
ಹತ್ತು ದಿನಗಳ ಉತ್ಸವದಲ್ಲಿ ಸಂಗೀತ, ನೃತ್ಯ, ನಾಟಕ, ಸಾಹಿತ್ಯ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು, ಪಾರಂಪರಿಕ ನಡಿಗೆಗಳು, ಆಹಾರ ಮೇಳಗಳು ಹಾಗೂ ವಿವಿಧ ಸಮುದಾಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಶಾಲಾ-ಕಾಲೇಜುಗಳು, ಸಾಂಸ್ಕೃತಿಕ ಸಂಸ್ಥೆಗಳು, ಖಾಸಗಿ ಕಂಪನಿಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೂ ಉತ್ಸವದಲ್ಲಿ ಭಾಗವಹಿಸಬಹುದಾಗಿದೆ.
ಕರ್ನಾಟಕದ ಸಾಂಪ್ರದಾಯಿಕ ಊರಹಬ್ಬದ ಮಾದರಿಯಲ್ಲಿ ಬೆಂಗಳೂರು ಜಾತ್ರೆಯನ್ನು ರೂಪಿಸಲಾಗುತ್ತಿದೆ. ನಗರದ ವಿವಿಧ ಭಾಷೆ, ಸಂಸ್ಕೃತಿ ಮತ್ತು ಹಿನ್ನೆಲೆಯ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಬೆಂಗಳೂರು ಜನರೇ ಜಾತ್ರೆಯ ಭಾಗೀದಾರರು
ಬೆಂಗಳೂರು ಕೇವಲ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾದ ನಗರವಲ್ಲ. ವಿವಿಧ ಭಾಷೆ, ಸಂಸ್ಕೃತಿ ಹಾಗೂ ಹಿನ್ನೆಲೆಯ ಜನರು ಒಟ್ಟಾಗಿ ಬದುಕುತ್ತಿರುವ ವೈವಿಧ್ಯಮಯ ನಗರವಾಗಿದೆ.
ನಗರದ ಜನರಲ್ಲಿ ಒಗ್ಗಟ್ಟು, ಆತ್ಮೀಯತೆ ಮತ್ತು ಸ್ಥಳೀಯ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರು ಜಾತ್ರೆ ಮಹತ್ವದ ವೇದಿಕೆಯಾಗಲಿದೆ ಎಂಬ ಆಶಯವನ್ನು ಸಚಿವರು ವ್ಯಕ್ತಪಡಿಸಿದ್ದಾರೆ.
'ನಮ್ಮ ಬೆಂಗಳೂರು, ನಮ್ಮ ಸಂಸ್ಕೃತಿ, ನಮ್ಮ ಸಂಭ್ರಮ' ಎಂಬ ಪರಿಕಲ್ಪನೆಯಡಿ ನಡೆಯಲಿರುವ ಈ ಉತ್ಸವವು ಬೆಂಗಳೂರಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಜಗತ್ತಿಗೆ ಪರಿಚಯಿಸುವುದರ ಜತೆಗೆ ಸ್ಥಳೀಯ ಕಲಾವಿದರು, ಯುವಜನರು ಮತ್ತು ವಿವಿಧ ಸಮುದಾಯಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಿದೆ.
ಸರ್ಕಾರ, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಯಲಿರುವ ಈ ಜಾತ್ರೆಯ ಮೂಲಕ ಬೆಂಗಳೂರಿನ ಸಾಂಸ್ಕೃತಿಕ ವೈಭವಕ್ಕೆ ಹೊಸ ಆಯಾಮ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R