ಶಿವರಾಮ ಕಾರಂತ ಬಡಾವಣೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬಿಡಿಎ ಸಿದ್ಧತೆ
45.29 ಎಕರೆ ಪ್ರದೇಶದಲ್ಲಿ ಪಿಪಿಪಿ ಮಾದರಿಯ ಬೃಹತ್ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಯೋಜನೆ – ಹೂಡಿಕೆದಾರರಿಂದ ಆಸಕ್ತಿ ಆಹ್ವಾನ
BDA-plans-international-cricket-stadium-in-shivaram-karanth-layout-45-acre-PPP-project


ಬೆಂಗಳೂರು, 23 ನವೆಂಬರ್ (ಹಿ.ಸ.):

ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧತೆ ನಡೆಸಿದೆ. ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸೇರಿದಂತೆ ಸಮಗ್ರ ಕ್ರೀಡಾ ಸಂಕೀರ್ಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಸಮೀಪದಲ್ಲಿರುವ ಶಿವರಾಮ ಕಾರಂತ ಬಡಾವಣೆಯ ಸುಮಾರು 45.29 ಎಕರೆ ಪ್ರದೇಶದಲ್ಲಿ ಈ ಬೃಹತ್ ಯೋಜನೆ ಅನುಷ್ಠಾನಗೊಳಿಸಲು ಬಿಡಿಎ ಉದ್ದೇಶಿಸಿದೆ. ಈ ಸಂಬಂಧ ದೇಶೀಯ ಹಾಗೂ ಅಂತಾರಾಷ್ಟ್ರೀಯ ಹೂಡಿಕೆದಾರರಿಂದ ಆಸಕ್ತಿ ವ್ಯಕ್ತಪಡಿಸುವಿಕೆ ಆಹ್ವಾನಿಸಲಾಗಿದೆ.

'ಬ್ರ್ಯಾಂಡ್ ಬೆಂಗಳೂರು' ಪರಿಕಲ್ಪನೆಯಡಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಈ ಕ್ರೀಡಾ ಸಂಕೀರ್ಣವು ಕೇವಲ ಕ್ರಿಕೆಟ್ ಕ್ರೀಡಾಂಗಣಕ್ಕೆ ಸೀಮಿತವಾಗಿರುವುದಿಲ್ಲ. ಕ್ರೀಡಾ ಮೂಲಸೌಕರ್ಯಗಳ ಜತೆಗೆ ಮನರಂಜನೆ, ಆತಿಥ್ಯ, ಚಿಲ್ಲರೆ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನೂ ಒಳಗೊಂಡ ಮಿಶ್ರ ಬಳಕೆಯ ಕ್ರೀಡಾ ತಾಣವಾಗಿ ರೂಪುಗೊಳ್ಳಲಿದೆ.

ಯೋಜನೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಕ್ರೀಡಾ ನಿರ್ವಾಹಕರು, ಮೂಲಸೌಕರ್ಯ ಮತ್ತು ನಿರ್ಮಾಣ ಸಂಸ್ಥೆಗಳು, ಪ್ರವಾಸೋದ್ಯಮ ಹಾಗೂ ಆತಿಥ್ಯ ಉದ್ಯಮದ ಕಂಪನಿಗಳು ಮತ್ತು ರಿಯಲ್ ಎಸ್ಟೇಟ್ ಅಭಿವೃದ್ಧಿದಾರರಿಂದ ಬಿಡಿಎ ಪ್ರಸ್ತಾವನೆಗಳನ್ನು ನಿರೀಕ್ಷಿಸುತ್ತಿದೆ.

ಆಸಕ್ತ ಸಂಸ್ಥೆಗಳು ತಮ್ಮ ಕಂಪನಿಯ ಹಿನ್ನೆಲೆ, ಈ ಹಿಂದೆ ಕೈಗೊಂಡಿರುವ ಯೋಜನೆಗಳು, ಆರ್ಥಿಕ ಸಾಮರ್ಥ್ಯ ಹಾಗೂ ಯೋಜನೆಯ ಅನುಷ್ಠಾನ, ವಾಣಿಜ್ಯ ಕಾರ್ಯಸಾಧ್ಯತೆ ಮತ್ತು ನಿರ್ಮಾಣದ ಹಂತಗಳ ಕುರಿತು ಸಲಹೆಗಳನ್ನು ಸಲ್ಲಿಸಬೇಕಿದೆ.

ಈ ಯೋಜನೆಗೆ ಸಂಬಂಧಿಸಿದಂತೆ ಖಾಸಗಿ ವಲಯದ ಆಸಕ್ತಿ ಮತ್ತು ಉದ್ಯಮದ ಅಭಿಪ್ರಾಯಗಳನ್ನು ಸಂಗ್ರಹಿಸಲು ಡಿಸೆಂಬರ್ 1ರಂದು ಬೆಳಗ್ಗೆ 11 ಗಂಟೆಗೆ ಪೂರ್ವ-ಪ್ರಸ್ತಾವನಾ ಸಭೆ ಆಯೋಜಿಸಲಾಗಿದೆ. ಆಸಕ್ತರು ತಮ್ಮ ಪ್ರಶ್ನೆ ಹಾಗೂ ಸಂದೇಹಗಳನ್ನು ಸಲ್ಲಿಸಲು ನವೆಂಬರ್ 30ರ ಸಂಜೆ 5 ಗಂಟೆಯವರೆಗೆ ಅವಕಾಶ ನೀಡಲಾಗಿದೆ.

ಇದು ಟೆಂಡರ್ ಪ್ರಕ್ರಿಯೆಯಲ್ಲ: ಬಿಡಿಎ ಸ್ಪಷ್ಟನೆ

ಈ ಕುರಿತು ಬಿಡಿಎ ಸ್ಪಷ್ಟನೆ ನೀಡಿದ್ದು, ಪ್ರಸ್ತುತ ಆಹ್ವಾನಿಸಿರುವ ಆಸಕ್ತಿ ವ್ಯಕ್ತಪಡಿಸುವಿಕೆ ಕೇವಲ ಪ್ರಾಥಮಿಕ ಮಾರುಕಟ್ಟೆ ಮೌಲ್ಯಮಾಪನ ಮತ್ತು ಯೋಜನೆಯ ಕಾರ್ಯಸಾಧ್ಯತೆ ಪರಿಶೀಲನೆಗಾಗಿ ನಡೆಸುತ್ತಿರುವ ಪ್ರಕ್ರಿಯೆಯಾಗಿದೆ.

ಇದನ್ನು ಟೆಂಡರ್ ಆಹ್ವಾನವೆಂದು ಪರಿಗಣಿಸಬಾರದು. ಅಲ್ಲದೆ, ಈ ಪ್ರಕ್ರಿಯೆಯಿಂದ ಯಾವುದೇ ಸಂಸ್ಥೆಗೆ ಯೋಜನೆ ನೀಡುವ ಬದ್ಧತೆ ಇರುವುದಿಲ್ಲ ಎಂದು ತಿಳಿಸಿದೆ.

ಸರ್ಕಾರದ ಅಗತ್ಯ ಅನುಮೋದನೆಗಳು ಹಾಗೂ ಯೋಜನೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿದ ಬಳಿಕ, ಪಿಪಿಪಿ ಮಾದರಿಯಲ್ಲಿ ಯೋಜನೆ ಅನುಷ್ಠಾನಗೊಳಿಸುವ ಸಂಸ್ಥೆಯನ್ನು ಆಯ್ಕೆ ಮಾಡಲು ಪ್ರತ್ಯೇಕ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಆನೇಕಲ್ನ ಸೂರ್ಯ ನಗರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಯೋಜನೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ.

ಇದರ ಬೆನ್ನಲ್ಲೇ ಶಿವರಾಮ ಕಾರಂತ ಬಡಾವಣೆಯಲ್ಲೂ ಮತ್ತೊಂದು ಬೃಹತ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬಿಡಿಎ ಮುಂದಾಗಿರುವುದು ಬೆಂಗಳೂರಿನ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande