
ನವದೆಹಲಿ, 23 ನವೆಂಬರ್ (ಹಿ.ಸ.):
ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಂಧನ, ಸಂಪರ್ಕ, ರೈಲ್ವೆ, ಮೂಲಸೌಕರ್ಯ, ತಂತ್ರಜ್ಞಾನ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ಮಹತ್ವದ ಒಪ್ಪಂದಗಳು ಪ್ರಕಟವಾಗುವ ನಿರೀಕ್ಷೆಯಿದೆ.
ನೇಪಾಳದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಾಲೇಂದ್ರ ಶಾ ಅವರು ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿದ್ದು, ಅವರ ಮೊದಲ ದ್ವಿಪಕ್ಷೀಯ ವಿದೇಶ ಪ್ರವಾಸವೂ ಇದಾಗಿದೆ. 36 ವರ್ಷದ ಬಲೇನ್ ಶಾ ಅವರು ಭಾನುವಾರ ನವದೆಹಲಿಗೆ ಆಗಮಿಸಿದರು. ಕೇಂದ್ರ ವಾಣಿಜ್ಯ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ್ ಅವರನ್ನು ಸ್ವಾಗತಿಸಿದರು.
ಪ್ರವಾಸದ ಮೊದಲ ಅಧಿಕೃತ ಕಾರ್ಯಕ್ರಮವಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿ ಮಾಡಿದ ಬಾಲೇಂದ್ರ ಶಾ, ದ್ವಿಪಕ್ಷೀಯ ಸಂಬಂಧಗಳ ವಿವಿಧ ಆಯಾಮಗಳ ಕುರಿತು ಚರ್ಚಿಸಿದರು. ಸಂಪರ್ಕ ವ್ಯವಸ್ಥೆ, ವ್ಯಾಪಾರ, ಸಾಗಣೆ, ವಾಣಿಜ್ಯ, ಇಂಧನ, ಸಂಸ್ಕೃತಿ, ಶಿಕ್ಷಣ ಹಾಗೂ ಉಭಯ ದೇಶಗಳ ಜನರ ನಡುವಿನ ಸಂಪರ್ಕ ವೃದ್ಧಿಸುವ ಕುರಿತು ಮಾತುಕತೆ ನಡೆಯಿತು.
ಭಾರತವು ನೇಪಾಳದೊಂದಿಗಿನ ವಿಶೇಷ ಸ್ನೇಹ ಸಂಬಂಧವನ್ನು ಅತ್ಯಂತ ಗೌರವಿಸುತ್ತದೆ ಎಂದು ಎಸ್. ಜೈಶಂಕರ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಲೇಂದ್ರ ಶಾ ಅವರ ನಡುವೆ ಈ ಹಿಂದೆ ದೂರವಾಣಿ ಮೂಲಕ ಮಾತುಕತೆ ನಡೆದಿದ್ದು, ಸಾಮಾಜಿಕ ಜಾಲತಾಣಗಳ ಮೂಲಕವೂ ಸಂದೇಶ ವಿನಿಮಯವಾಗಿದೆ. ಆದರೆ, ಉಭಯ ನಾಯಕರ ಮೊದಲ ಮುಖಾಮುಖಿ ಭೇಟಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. 2025ರಲ್ಲಿ ನೇಪಾಳದಲ್ಲಿ ನಡೆದ ಯುವಜನರ ಚಳವಳಿಯ ಬಳಿಕ ಕೆ.ಪಿ. ಶರ್ಮಾ ಒಲಿ ನೇತೃತ್ವದ ಸರ್ಕಾರ ಪತನಗೊಂಡಿತ್ತು. ನಂತರ ರ್ಯಾಪರ್ನಿಂದ ರಾಜಕಾರಣಿಯಾಗಿ ಬೆಳೆದ ಬಾಲೇಂದ್ರ ಶಾ ಮತ್ತು ರಾಷ್ಟ್ರೀಯ ಸ್ವತಂತ್ರ ಪಕ್ಷದ ಯುವ ನಾಯಕತ್ವ ಅಧಿಕಾರಕ್ಕೆ ಬಂದಿತ್ತು. ಈ ರಾಜಕೀಯ ಬದಲಾವಣೆಯ ಬಳಿಕ ನಡೆಯುತ್ತಿರುವ ಭೇಟಿ ಭಾರತ-ನೇಪಾಳ ಸಂಬಂಧಗಳಿಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.
ಇಂದಿನ ಮಾತುಕತೆಯ ಸಂದರ್ಭದಲ್ಲಿ ಭಾರತದ ಸಹಕಾರದೊಂದಿಗೆ ಪೂರ್ಣಗೊಂಡಿರುವ ಸಂಪರ್ಕ ಮತ್ತು ಇಂಧನ ಯೋಜನೆಗಳನ್ನು ಉಭಯ ಪ್ರಧಾನಿಗಳು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಹೊಸ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸುವ ಸಾಧ್ಯತೆಯೂ ಇದೆ. ಅಭಿವೃದ್ಧಿ ಸಹಕಾರ, ಜಲವಿದ್ಯುತ್, ರೈಲ್ವೆ, ಹವಾಮಾನ ಬದಲಾವಣೆ, ವಿಪತ್ತು ನಿರ್ವಹಣೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ದೀರ್ಘಾವಧಿಯ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಅಯೋಧ್ಯೆ ಮತ್ತು ಜನಕಪುರ ನಡುವಿನ ರೈಲು ಸಂಪರ್ಕ ಯೋಜನೆಯನ್ನೂ ಅನಾವರಣಗೊಳಿಸುವ ಸಾಧ್ಯತೆಯಿದೆ.
ಬಾಲೇಂದ್ರ ಶಾ ಅವರೊಂದಿಗೆ 35 ಸದಸ್ಯರ ಉನ್ನತ ಮಟ್ಟದ ನಿಯೋಗ ಭಾರತಕ್ಕೆ ಆಗಮಿಸಿದೆ. ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್, ಹಣಕಾಸು ಸಚಿವ ಸ್ವರ್ಣಿಮ್ ವಾಗ್ಲೆ, ಪ್ರಧಾನಿಯ ಹಿರಿಯ ಸಲಹೆಗಾರರು ಹಾಗೂ ಉದ್ಯಮ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ. ಪ್ರವಾಸದ ಅಂಗವಾಗಿ ಭಾರತ-ನೇಪಾಳ ಉದ್ಯಮ ವೇದಿಕೆಯನ್ನೂ ಆಯೋಜಿಸಲಾಗಿದೆ.
ಭಾರತ ಮತ್ತು ನೇಪಾಳ ಮುಕ್ತ ಗಡಿ, ಪರಸ್ಪರ ವಿಶ್ವಾಸ, ಹಂಚಿಕೊಂಡ ಸಂಪ್ರದಾಯಗಳು ಹಾಗೂ ಜನರ ನಡುವಿನ ನಿಕಟ ಬಾಂಧವ್ಯದ ಆಧಾರದಲ್ಲಿ ವಿಶಿಷ್ಟ ಸಂಬಂಧ ಹೊಂದಿವೆ. ವಿವಿಧ ಕ್ಷೇತ್ರಗಳ ಸಹಕಾರವನ್ನು ಮುಂದುವರಿಸಲು ಉಭಯ ದೇಶಗಳ ನಡುವೆ 40ಕ್ಕೂ ಹೆಚ್ಚು ದ್ವಿಪಕ್ಷೀಯ ಸಾಂಸ್ಥಿಕ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಭಾರತವು ನೇಪಾಳದ ಅತಿದೊಡ್ಡ ವ್ಯಾಪಾರ, ಸಾಗಣೆ ಮತ್ತು ಹೂಡಿಕೆ ಪಾಲುದಾರ ರಾಷ್ಟ್ರವಾಗಿದೆ. ನೇಪಾಳಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಸುಂಕಮುಕ್ತ ಪ್ರವೇಶವಿದ್ದು, ಅದರ ಒಟ್ಟು ರಫ್ತಿನ ಸುಮಾರು ಶೇ.80ರಷ್ಟು ಭಾರತಕ್ಕೆ ಬರುತ್ತದೆ. ನೇಪಾಳದ ಒಟ್ಟು ನೇರ ವಿದೇಶಿ ಹೂಡಿಕೆಯಲ್ಲಿ ಸುಮಾರು ಮೂರನೇ ಒಂದು ಭಾಗ ಭಾರತದಿಂದ ಬರುತ್ತಿದೆ.
ನೇಪಾಳದ 74 ಜಿಲ್ಲೆಗಳಲ್ಲಿ 1,662 ಕೋಟಿ ನೇಪಾಳಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ 600ಕ್ಕೂ ಹೆಚ್ಚು ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಭಾರತ ಅನುಷ್ಠಾನಗೊಳಿಸಿದೆ. ಗಡಿ ದಾಟುವ ರೈಲು ಮಾರ್ಗಗಳು, ಪೆಟ್ರೋಲಿಯಂ ಉತ್ಪನ್ನಗಳ ಕೊಳವೆ ಮಾರ್ಗಗಳು ಮತ್ತು ಸಮಗ್ರ ತಪಾಸಣಾ ಕೇಂದ್ರಗಳು ಪ್ರಮುಖ ಸಂಪರ್ಕ ಯೋಜನೆಗಳಾಗಿವೆ.
2015ರ ಗೂರ್ಖಾ ಭೂಕಂಪದ ಬಳಿಕ ಭಾರತ ನೇಪಾಳಕ್ಕೆ ವ್ಯಾಪಕ ನೆರವು ನೀಡಿತ್ತು. ಇದರಡಿ 50 ಸಾವಿರ ಮನೆಗಳು, 71 ಶೈಕ್ಷಣಿಕ ಯೋಜನೆಗಳು ಹಾಗೂ 128 ಆರೋಗ್ಯ ಕೇಂದ್ರಗಳ ಪುನರ್ನಿರ್ಮಾಣಕ್ಕೆ ಸಹಕಾರ ನೀಡಲಾಗಿತ್ತು. ಈ ವರ್ಷ ನೇಪಾಳದಲ್ಲಿ ಸಂಭವಿಸಿದ ಪ್ರವಾಹದ ಬಳಿಕವೂ ಭಾರತ 140 ಟನ್ ತುರ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿ ಮಾನವೀಯ ನೆರವು ಒದಗಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.