ಬಸವಣ್ಣ ಕುರಿತು ಅವಹೇಳನಕಾರಿ ಹೇಳಿಕೆ: ಕ್ರಮಕ್ಕೆ ಬಸವಪರ ಸಂಘಟನೆಗಳ ಆಗ್ರಹ
ಬೆಂಗಳೂರು, 22 ನವೆಂಬರ್ (ಹಿ.ಸ.): ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ರವಿ ಹಂಜ ಹಾಗೂ ಆ ಹೇಳಿಕೆಗಳನ್ನು ಪ್ರಸಾರ ಮಾಡಿದ ಖಾಸಗಿ ವಾಹಿನಿಯ ಸಂಪಾದಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಬಸವ ದಳ, ಸಿದ್ಧಗಂಗಾ ಚಾರಿಟಬಲ್ ಟ್ರಸ್ಟ್ ಸೇರಿದಂತೆ ವಿವಿಧ
basavanna-row-protest-action


ಬೆಂಗಳೂರು, 22 ನವೆಂಬರ್ (ಹಿ.ಸ.):

ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ರವಿ ಹಂಜ ಹಾಗೂ ಆ ಹೇಳಿಕೆಗಳನ್ನು ಪ್ರಸಾರ ಮಾಡಿದ ಖಾಸಗಿ ವಾಹಿನಿಯ ಸಂಪಾದಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಬಸವ ದಳ, ಸಿದ್ಧಗಂಗಾ ಚಾರಿಟಬಲ್ ಟ್ರಸ್ಟ್ ಸೇರಿದಂತೆ ವಿವಿಧ ಬಸವಪರ ಸಂಘಟನೆಗಳು ಆಗ್ರಹಿಸಿವೆ.

ಖಾಸಗಿ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ಬಸವಣ್ಣನವರ ಕುರಿತು ಕೀಳುಮಟ್ಟದ ಪದಗಳನ್ನು ಬಳಸಲಾಗಿದೆ. ಅಲ್ಲದೆ, 12ನೇ ಶತಮಾನದ ಶಿವಶರಣರ ವಚನ ಸಾಹಿತ್ಯ ಮತ್ತು ಲಿಂಗಾಯತ ಸಮುದಾಯದ ಬಗ್ಗೆ ಆಧಾರರಹಿತ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ.

ಇದೇ ರೀತಿ, 'ಬಸವ ಮಂಟಪ' ಪುಸ್ತಕದಲ್ಲಿಯೂ ಬಸವಾದಿ ಶರಣರು, ವಚನ ಸಾಹಿತ್ಯ ಹಾಗೂ ಲಿಂಗಾಯತ ಧರ್ಮದ ಕುರಿತು ಅವಹೇಳನಕಾರಿ ವಿಚಾರಗಳನ್ನು ಪ್ರಕಟಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿವೆ. ವಿವಾದಾತ್ಮಕ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ವಿಶ್ವವಾಣಿ ಪತ್ರಿಕೆಯ ಬಸವ ಮಂಟಪ ಅಂಕಣಕ್ಕೆ ಸಂಬಂಧಿಸಿದ ಎಲ್ಲ ಅಂತರ್ಜಾಲದ ವಿಷಯಗಳನ್ನು ಶಾಶ್ವತವಾಗಿ ತೆಗೆದುಹಾಕಬೇಕು ಎಂದು ಒತ್ತಾಯಿಸಿವೆ.

ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಸರ್ಕಾರದ ನಿರ್ಧಾರಕ್ಕೆ ಇಂತಹ ಹೇಳಿಕೆಗಳು ಅಪಮಾನ ಮಾಡಿದಂತಿವೆ ಎಂದು ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಸಂಘಟನೆಗಳ ಮನವಿಗೆ ಸ್ಪಂದಿಸಿರುವ ಕರ್ನಾಟಕ ಸರ್ಕಾರ 'ಬಸವ ಮಂಟಪ' ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ರವಿ ಹಂಜ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಸಂಘಟನೆಗಳು, ಸರ್ಕಾರದ ಕ್ರಮವನ್ನು ಸ್ವಾಗತಿಸಿ ಅಭಿನಂದನೆ ಸಲ್ಲಿಸಿವೆ.

ಬಸವಣ್ಣನವರು, ಶಿವಶರಣರು, ಲಿಂಗಾಯತ ಮಠಾಧೀಶರು, ಮುಖಂಡರು ಹಾಗೂ ಹೋರಾಟಗಾರರ ವಿರುದ್ಧ ಸಾಮಾಜಿಕ ಜಾಲತಾಣಗಳು ಮತ್ತು ಪತ್ರಿಕೆಗಳಲ್ಲಿ ನಿರಂತರವಾಗಿ ಟೀಕೆ ಹಾಗೂ ತೇಜೋವಧೆ ನಡೆಯುತ್ತಿದೆ ಎಂದು ಸಂಘಟನೆಗಳು ಆರೋಪಿಸಿವೆ. ಇಂತಹ ಚಟುವಟಿಕೆಗಳ ಹಿಂದೆ ಲಿಂಗಾಯತ ಸಮುದಾಯದ ಅಸ್ಮಿತೆಗೆ ಧಕ್ಕೆ ತರುವ ವ್ಯವಸ್ಥಿತ ಷಡ್ಯಂತ್ರವಿದೆ ಎಂದು ಆಕ್ಷೇಪಿಸಿರುವ ಅವು, ಇಂತಹ ಬೆಳವಣಿಗೆಗಳಿಗೆ ಕೂಡಲೇ ಕಡಿವಾಣ ಹಾಕಬೇಕು. ಸಂಬಂಧಪಟ್ಟವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿವೆ.

ಪ್ರತಿಭಟನೆಯಲ್ಲಿ ಪೂಜ್ಯ ಜ್ಞಾನೇಶ್ವರಿ ಮಾತಾಜಿ, ಪೂಜ್ಯ ಅನಿಮಿಷಾನಂದ ಸ್ವಾಮೀಜಿ, ಪೂಜ್ಯ ದಯಾನಂದ ಸ್ವಾಮೀಜಿ, ಪೂಜ್ಯ ಅಕ್ಕ ನಾಗಲಾಂಬಿಕ ಮಾತಾಜಿ, ಪೂಜ್ಯ ಬಸವಪ್ರಕಾಶ, ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರಣ ಚಂದ್ರಮೌಳಿ ಎನ್. ಲಿಂಗಾಯತ ಹಾಗೂ ಸಿದ್ಧಗಂಗಾ ಚಾರಿಟಬಲ್ ಟ್ರಸ್ಟ್‌ನ ಶರಣ ಚಂದ್ರಶೇಖರ ಟಿ.ಎಂ. ಸೇರಿದಂತೆ ಹಲವರು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande