ಯುವಜನರ ಆರೋಗ್ಯ ರಕ್ಷಣೆ ಭಾರತದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು: ಜಿತೇಂದ್ರ ಸಿಂಗ್
ನವದೆಹಲಿ, 22 ನವೆಂಬರ್ (ಹಿ.ಸ.): ಭಾರತದಲ್ಲಿ ಆರೋಗ್ಯ ಸಂಶೋಧನೆಯ ಗಮನ ಈಗ ಕೇವಲ ರೋಗಗಳ ಚಿಕಿತ್ಸೆಗೆ ಸೀಮಿತವಾಗದೆ, ಅವುಗಳ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಹಾಗೂ ಅಣು ಮತ್ತು ಆನುವಂಶಿಕ ಮಟ್ಟದ ಸಂಶೋಧನೆಯತ್ತ ವಿಸ್ತರಿಸುತ್ತಿದೆ. ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ
नई दिल्ली में रविवार को 'द वीक हेल्थ समिट 2026' में स्वास्थ्य क्षेत्र में योगदान देने वाले विशेषज्ञों को सम्मानित करते केंद्रीय मंत्री डॉ. जितेंद्र सिंह।


ನವದೆಹಲಿ, 22 ನವೆಂಬರ್ (ಹಿ.ಸ.):

ಭಾರತದಲ್ಲಿ ಆರೋಗ್ಯ ಸಂಶೋಧನೆಯ ಗಮನ ಈಗ ಕೇವಲ ರೋಗಗಳ ಚಿಕಿತ್ಸೆಗೆ ಸೀಮಿತವಾಗದೆ, ಅವುಗಳ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಹಾಗೂ ಅಣು ಮತ್ತು ಆನುವಂಶಿಕ ಮಟ್ಟದ ಸಂಶೋಧನೆಯತ್ತ ವಿಸ್ತರಿಸುತ್ತಿದೆ. ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಯುವಜನರನ್ನೂ ಹೆಚ್ಚಾಗಿ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಆಧಾರಿತ ಆರೋಗ್ಯ ಸೇವೆ ಹಾಗೂ ರೋಗಗಳ ಆರಂಭಿಕ ಪತ್ತೆಗೆ ಆದ್ಯತೆ ನೀಡುವುದು ಅಗತ್ಯವಾಗಿದೆ. ದೇಶದ ಯುವಜನರ ಆರೋಗ್ಯವನ್ನು ಕಾಪಾಡುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ಹೊಣೆಗಾರಿಕೆ) ಡಾ. ಜಿತೇಂದ್ರ ಸಿಂಗ್ ಹೇಳಿದರು.

ಭಾನುವಾರ ನವದೆಹಲಿಯಲ್ಲಿ ನಡೆದ 'ದಿ ವೀಕ್ ಆರೋಗ್ಯ ಶೃಂಗಸಭೆ-2026'ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆರೋಗ್ಯ ಉಪಕ್ರಮಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ತಜ್ಞರು, ಸಂಶೋಧಕರು ಮತ್ತು ಉದ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ನಿಖಿಲ್ ಟಂಡನ್, ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ ನಿರ್ದೇಶಕ ಶರದ್ ಅಗರ್ವಾಲ್, ಭಾರತದಲ್ಲಿನ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಯ ಉಪಮುಖ್ಯಸ್ಥ ಡಾ. ಆಂಡ್ರೇ ಕೊಜಿಕ್ ಸೇರಿದಂತೆ ಹಲವು ಹಿರಿಯ ವೈದ್ಯರು ಮತ್ತು ವೈದ್ಯಕೀಯ ಸಂಶೋಧಕರು ಉಪಸ್ಥಿತರಿದ್ದರು.

ಬದಲಾಗುತ್ತಿರುವ ಆಹಾರ ಪದ್ಧತಿ, ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಜೀವನಶೈಲಿಯ ಸಮಸ್ಯೆಗಳಿಂದ ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ ಹಾಗೂ ಹೃದಯ ಕಾಯಿಲೆಗಳ ಅಪಾಯ ಹೆಚ್ಚುತ್ತಿದೆ. ಈ ಸವಾಲು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ರೋಗಗಳ ತಡೆಗಟ್ಟುವಿಕೆ ಕೇವಲ ವೈದ್ಯರ ಜವಾಬ್ದಾರಿಯಲ್ಲ. ಇದಕ್ಕೆ ಸಮಾಜದ ಸಾಮೂಹಿಕ ಸಹಭಾಗಿತ್ವ ಮತ್ತು ಜನಜಾಗೃತಿ ಅಗತ್ಯ ಎಂದು ಹೇಳಿದರು.

ಭಾರತವು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳನ್ನು ಮೀರಿ ರೋಗಗಳ ಮೂಲ ಕಾರಣಗಳನ್ನು ಅರಿಯಲು ಅಣು ವಿಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಆನುವಂಶಿಕ ಸಂಶೋಧನೆಯಲ್ಲಿ ಪ್ರಗತಿ ಸಾಧಿಸುತ್ತಿದೆ. ಇದರಿಂದ ಸಂಕೀರ್ಣ ಕಾಯಿಲೆಗಳ ಚಿಕಿತ್ಸೆಗೆ ಹಾಗೂ ಅವುಗಳ ಉತ್ತಮ ನಿರ್ವಹಣೆಗೆ ಹೆಚ್ಚು ನಿಖರವಾದ ವಿಧಾನಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿದೆ ಎಂದರು.

ಸ್ವದೇಶಿ ಲಸಿಕೆ ಅಭಿವೃದ್ಧಿಯಲ್ಲಿ ಭಾರತದ ಸಾಧನೆ

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತ ಸ್ವದೇಶಿ ಡಿಎನ್‌ಎ ಲಸಿಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ತನ್ನ ವೈಜ್ಞಾನಿಕ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಇದೀಗ ಲಸಿಕೆ ಸಂಶೋಧನೆ ಮತ್ತು ರೋಗಗಳ ತಡೆಗಟ್ಟುವಿಕೆ ಆಧಾರಿತ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ನಡೆಯುತ್ತಿರುವ ಮಾನವ ಪ್ಯಾಪಿಲೋಮಾ ವೈರಾಣು ಲಸಿಕಾ ಅಭಿಯಾನದಡಿ 50 ಲಕ್ಷಕ್ಕೂ ಹೆಚ್ಚು ಬಾಲಕಿಯರಿಗೆ ಲಸಿಕೆ ನೀಡಲಾಗಿದೆ. ಇದರಿಂದ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಪ್ರಯತ್ನಗಳಿಗೆ ಮತ್ತಷ್ಟು ಬಲ ದೊರೆತಿದೆ ಎಂದು ಹೇಳಿದರು.

10 ಸಾವಿರ ಜನರ ವಂಶವಾಹಿ ಅನುಕ್ರಮಣ

ಭಾರತೀಯ ಜನಸಂಖ್ಯೆಯ ವಂಶವಾಹಿ ಸಂಶೋಧನೆಯ ಕುರಿತು ಮಾತನಾಡಿದ ಅವರು, ದೇಶದ 84 ವಿಭಿನ್ನ ಜನಸಂಖ್ಯಾ ಗುಂಪುಗಳಿಗೆ ಸೇರಿದ 10 ಸಾವಿರ ಜನರ ವಂಶವಾಹಿ ಅನುಕ್ರಮಣ ಮಾಡಲಾಗಿದೆ ಎಂದು ತಿಳಿಸಿದರು.

ಭಾರತದ ಆನುವಂಶಿಕ ವೈವಿಧ್ಯತೆ ಹಾಗೂ ವಿವಿಧ ಜನಸಂಖ್ಯಾ ಗುಂಪುಗಳಲ್ಲಿ ಕಂಡುಬರುವ 400ಕ್ಕೂ ಹೆಚ್ಚು ಆನುವಂಶಿಕ ಲಕ್ಷಣಗಳ ಅಧ್ಯಯನವು ರೋಗಗಳ ಬಗ್ಗೆ ವ್ಯಕ್ತಿಗಳಲ್ಲಿರುವ ಸೂಕ್ಷ್ಮತೆ ಮತ್ತು ಆರೋಗ್ಯದ ಅಪಾಯಗಳನ್ನು ಅರ್ಥಮಾಡಿಕೊಳ್ಳಲು ಮಹತ್ವದ್ದಾಗಿದೆ. ಇದರಿಂದ ಪ್ರತಿಯೊಬ್ಬರಿಗೂ ಅವರ ದೇಹದ ಗುಣಲಕ್ಷಣಗಳಿಗೆ ಅನುಗುಣವಾಗಿ ನಿರ್ದಿಷ್ಟ ಚಿಕಿತ್ಸಾ ವಿಧಾನಗಳನ್ನು ರೂಪಿಸಲು ನೆರವಾಗಲಿದೆ ಎಂದರು.

ವೈದ್ಯಕೀಯ ಕ್ಷೇತ್ರದ ಭವಿಷ್ಯ ವೈಯಕ್ತಿಕ ಚಿಕಿತ್ಸಾ ಪದ್ಧತಿಯಲ್ಲಿದೆ. ಇದರಲ್ಲಿ ವ್ಯಕ್ತಿಯ ವಂಶವಾಹಿ ರಚನೆ, ಜೀವನಶೈಲಿ ಮತ್ತು ಪರಿಸರವನ್ನು ಪರಿಗಣಿಸಿ ಚಿಕಿತ್ಸೆ ನಿರ್ಧರಿಸಲಾಗುತ್ತದೆ. ಒಂದೇ ಕಾಯಿಲೆಯಿಂದ ಬಳಲುವ ವಿಭಿನ್ನ ವ್ಯಕ್ತಿಗಳಿಗೆ ವಿಭಿನ್ನ ಚಿಕಿತ್ಸಾ ವಿಧಾನಗಳು ಅಗತ್ಯವಾಗಬಹುದು ಎಂದು ವಿವರಿಸಿದರು.

ಗರ್ಭಾವಸ್ಥೆಯಲ್ಲಿ ಮಧುಮೇಹದಿಂದ ಬಳಲುವ ಮಹಿಳೆಯರಲ್ಲಿ ಜೈವಿಕ ಸೂಚಕಗಳ ಕುರಿತ ಸಂಶೋಧನೆಯೂ ನಡೆಯುತ್ತಿದೆ. ಭವಿಷ್ಯದಲ್ಲಿ ಇಂತಹ ಮಹಿಳೆಯರಲ್ಲಿ ಎರಡನೇ ವಿಧದ ಮಧುಮೇಹ ಕಾಣಿಸಿಕೊಳ್ಳುವ ಹೆಚ್ಚಿನ ಅಪಾಯವಿದೆಯೇ ಎಂಬುದನ್ನು ಮುಂಚಿತವಾಗಿ ಗುರುತಿಸುವುದು ಈ ಸಂಶೋಧನೆಯ ಉದ್ದೇಶವಾಗಿದೆ ಎಂದು ಹೇಳಿದರು.

ಅಪರೂಪದ ಆನುವಂಶಿಕ ಕಾಯಿಲೆಗಳ ಚಿಕಿತ್ಸೆಗೆ ಒತ್ತು

ಕೇಂದ್ರ ಸರ್ಕಾರ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಅಪರೂಪದ ಆನುವಂಶಿಕ ಕಾಯಿಲೆಗಳ ಪತ್ತೆ ಹಾಗೂ ಚಿಕಿತ್ಸಾ ಸೌಲಭ್ಯಗಳ ವ್ಯಾಪ್ತಿಯನ್ನು ವಿಸ್ತರಿಸಲು ಕಾರ್ಯನಿರ್ವಹಿಸುತ್ತಿವೆ ಎಂದು ಜಿತೇಂದ್ರ ಸಿಂಗ್ ತಿಳಿಸಿದರು.

ಇಂತಹ ಕಾಯಿಲೆಗಳಿಗೆ ಸರಿಯಾದ ರೋಗನಿರ್ಣಯ ವಿಳಂಬವಾಗುವುದು, ಚಿಕಿತ್ಸೆಯ ವೆಚ್ಚ ಹೆಚ್ಚಿರುವುದು ಹಾಗೂ ಔಷಧಗಳ ಸೀಮಿತ ಲಭ್ಯತೆಯಿಂದ ರೋಗಿಗಳು ಮತ್ತು ಅವರ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಚಿಕಿತ್ಸೆಯನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮತ್ತು ಕೈಗೆಟುಕುವ ದರದಲ್ಲಿ ಒದಗಿಸುವುದು ಅಗತ್ಯವಾಗಿದೆ ಎಂದರು.

ಭಾರತ ಸ್ವದೇಶಿ ವೈದ್ಯಕೀಯ ಸಂಶೋಧನೆಯಲ್ಲಿಯೂ ಪ್ರಗತಿ ಸಾಧಿಸುತ್ತಿದೆ. ಹೊಸ ಪ್ರತಿಜೀವಕ ಔಷಧಗಳ ಅಭಿವೃದ್ಧಿ ಹಾಗೂ ವಂಶವಾಹಿ ಚಿಕಿತ್ಸಾ ಕ್ಷೇತ್ರದಲ್ಲಿ ಸಂಶೋಧನೆ ನಡೆಯುತ್ತಿದೆ. ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನಲ್ಲಿ ಹಿಮೋಫಿಲಿಯಾ ಕಾಯಿಲೆಗೆ ಸಂಬಂಧಿಸಿದಂತೆ ನಡೆಸಿದ ವಂಶವಾಹಿ ಚಿಕಿತ್ಸಾ ಸಂಶೋಧನೆಯ ಫಲಿತಾಂಶಗಳು ಪ್ರತಿಷ್ಠಿತ 'ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್' ವೈದ್ಯಕೀಯ ನಿಯತಕಾಲಿಕದಲ್ಲಿ ಪ್ರಕಟವಾಗಿವೆ ಎಂದು ಅವರು ಉಲ್ಲೇಖಿಸಿದರು.

ಭಾರತೀಯ ಸಂಶೋಧಕರು ಅಭಿವೃದ್ಧಿಪಡಿಸುತ್ತಿರುವ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳನ್ನು ದೇಶದ ಹೊರಗೂ ಬಳಸುವ ಸಾಧ್ಯತೆಗಳಿವೆ ಎಂದು ಹೇಳಿದರು.

ವೈದ್ಯರ ಸಲಹೆಯಿಲ್ಲದೆ ಔಷಧ ಬಳಸಬೇಡಿ

ಯುವಜನರು ಆರೋಗ್ಯಕ್ಕೆ ಸಂಬಂಧಿಸಿದ ಸುಳ್ಳು ಮತ್ತು ತಪ್ಪು ಮಾಹಿತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವೈಜ್ಞಾನಿಕ ಆಧಾರವಿಲ್ಲದ ಪೌಷ್ಟಿಕಾಂಶ ಸಲಹೆಗಳು ಹಾಗೂ ಸೌಂದರ್ಯದ ಉದ್ದೇಶಕ್ಕಾಗಿ ವೈದ್ಯರ ಸಲಹೆಯಿಲ್ಲದೆ ಔಷಧಗಳನ್ನು ಬಳಸುವ ಪ್ರವೃತ್ತಿಯಿಂದ ದೂರವಿರಬೇಕು ಎಂದು ಜಿತೇಂದ್ರ ಸಿಂಗ್ ಎಚ್ಚರಿಸಿದರು.

ಅರ್ಹ ವೈದ್ಯರಿಂದ ಸಲಹೆ ಪಡೆಯಬೇಕು ಹಾಗೂ ವೈಜ್ಞಾನಿಕವಾಗಿ ದೃಢೀಕರಿಸಲಾದ ಮಾಹಿತಿಯನ್ನೇ ನಂಬಬೇಕು ಎಂದು ಯುವಜನರಿಗೆ ಮನವಿ ಮಾಡಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande