ನ.25ಕ್ಕೆ ಕಲಬುರಗಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್
ನವೆಂಬರ್ 25ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಲಬುರಗಿಗೆ ಆಗಮಿಸಲಿದ್ದು, ‘ಲೋಕತಂತ್ರ ಬಜಾವೋ, ಅರಾಜಕತೆ ಹಠಾವೋ’ ಘೋಷವಾಕ್ಯದಡಿ ಬಿಜೆಪಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಕುರಿತು ಮಾಜಿ ಸಚಿವ ರಾಜೂಗೌಡ ಮಾಹಿತಿ ನೀಡಿದ್ದು, ಇವಿಎಂ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
Rajnath-Singh-to-Visit-Kalaburagi-on-November-25-BJP-to-Hold-Massive-Rally


ಕಲಬುರಗಿ, 22 ನವೆಂಬರ್ (ಹಿ.ಸ.):

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯಲ್ಲಿ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.

ನವೆಂಬರ್ 25ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಲಬುರಗಿಗೆ ಆಗಮಿಸಲಿದ್ದು, ‘ಲೋಕತಂತ್ರ ಬಜಾವೋ, ಅರಾಜಕತೆ ಹಠಾವೋ’ ಘೋಷವಾಕ್ಯದಡಿ ನಡೆಯಲಿರುವ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಮಾಜಿ ಸಚಿವ ರಾಜೂಗೌಡ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಪ್ರಪ್ರಥಮ ಬಾರಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಲಬುರಗಿಗೆ ಆಗಮಿಸುತ್ತಿದ್ದಾರೆ. ನವೆಂಬರ್ 25ರಂದು ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಬೃಹತ್ ಪಾದಯಾತ್ರೆ ನಡೆಯಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ದೇಶದ 13 ಸ್ಥಳಗಳಲ್ಲಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ಉದ್ದೇಶದೊಂದಿಗೆ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿದೆ. ಕರ್ನಾಟಕದಲ್ಲಿ ಈ ಪಾದಯಾತ್ರೆಗೆ ಕಲಬುರಗಿ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ.

ಎಸ್ಐಆರ್ ಪರವಾಗಿಯೂ ಬಿಜೆಪಿ ನಾಯಕರು ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಇವಿಎಂ ಕುರಿತು ಕಾಂಗ್ರೆಸ್ ನಾಯಕರ ಆರೋಪಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜೂಗೌಡ, 'ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ಸತ್ಯವಾಗುತ್ತದೆ ಎಂಬಂತೆ ಕಾಂಗ್ರೆಸ್ ನಾಯಕರು ಪದೇಪದೆ ಇವಿಎಂ ಸರಿಯಿಲ್ಲ ಎಂದು ಆರೋಪಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದೂ ಇದೇ ಇವಿಎಂ ಮೂಲಕವಲ್ಲವೇ? ಹಾಗಾದರೆ ಕಾಂಗ್ರೆಸ್ ಹೇಗೆ ಅಧಿಕಾರಕ್ಕೆ ಬಂತು? ನಾವು ಸೋತಿದ್ದು ಹೇಗೆ?' ಎಂದು ಪ್ರಶ್ನಿಸಿದರು.

'ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಸೋತಾಗ ಮಾತ್ರ ಇವಿಎಂ ದೋಷದ ಬಗ್ಗೆ ಮಾತನಾಡುತ್ತಾರೆ. ನಿಜವಾಗಿಯೂ ಇವಿಎಂನಲ್ಲಿ ದೋಷವಿದೆ ಎಂದಾದರೆ, ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯನ್ನು ಎದುರಿಸಲಿ' ಎಂದು ಸವಾಲು ಹಾಕಿದರು.

ಕಲಬುರಗಿಯಲ್ಲಿ ನವೆಂಬರ್ 25ರಂದು ನಡೆಯಲಿರುವ ಪಾದಯಾತ್ರೆಯ ಮೂಲಕ ಬಿಜೆಪಿ ತನ್ನ ರಾಜಕೀಯ ಶಕ್ತಿಯನ್ನು ಪ್ರದರ್ಶಿಸಲು ಸಿದ್ಧತೆ ನಡೆಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande