
ದಾವಣಗೆರೆ, 22 ನವೆಂಬರ್ (ಹಿ.ಸ.):
ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ರೀತಿಯಲ್ಲಿ ಬರೆದಿರುವ ಆರೋಪ ಎದುರಿಸುತ್ತಿರುವ ರವಿ ಹಂಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರು ವಿಶ್ವಗುರುವಾಗಿದ್ದು, ಸರ್ವಧರ್ಮಗಳ ಸಂಕೇತವಾಗಿದ್ದಾರೆ. ಅವರ ಅನುಯಾಯಿಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ.
ಎಲ್ಲ ಸಮುದಾಯಗಳಲ್ಲಿಯೂ ಬಸವಣ್ಣನವರ ಅನುಯಾಯಿಗಳಿದ್ದಾರೆ. ಹೀಗಾಗಿ ಅವರ ಕುರಿತು ಮಾತನಾಡುವಾಗ ಅಥವಾ ಬರೆಯುವಾಗ ಅತ್ಯಂತ ಎಚ್ಚರಿಕೆ ಮತ್ತು ಗಂಭೀರತೆ ವಹಿಸಬೇಕು ಎಂದು ಹೇಳಿದರು.
ನಾನು ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದರೂ ಬಸವಣ್ಣನವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾದುದು. ಇಂತಹ ಮಹಾನ್ ಶರಣರ ಕುರಿತು ಅವಹೇಳನಕಾರಿ ರೀತಿಯಲ್ಲಿ ಬರೆಯುವುದು ಸರಿಯಲ್ಲ.
ಅವರ ಒಡನಾಡಿಯಂತೆ ಇದ್ದವರೇ ಎಂಬಂತೆ ಬಿಂಬಿಸಿಕೊಂಡು, ಬಸವಣ್ಣನವರೇ ಹೀಗೆ ಹೇಳಿದ್ದಾರೆಯೇನೋ ಎಂಬ ರೀತಿಯಲ್ಲಿ ಬರೆಯುವುದು ಒಪ್ಪುವಂತಹದ್ದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಸವಣ್ಣನವರ ಬಗ್ಗೆ ಕೆಟ್ಟದಾಗಿ ಬರೆಯುವ ಬದಲು ಅವರ ಮಾನವೀಯ ಮೌಲ್ಯಗಳನ್ನು ಎತ್ತಿ ಸಾರಬೇಕು. ಸಮಾಜದಲ್ಲಿ ಅವರು ಸಾರಿದ ಮಾನವೀಯತೆ, ಸಮಾನತೆ ಮತ್ತು ಆದರ್ಶಗಳನ್ನು ಪ್ರಚುರಪಡಿಸುವ ಕೆಲಸವಾಗಬೇಕು.
ಯಾವುದೇ ಶರಣರು, ದಾರ್ಶನಿಕರು ಹಾಗೂ ಮಹನೀಯರ ಕುರಿತು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಸಚಿವ ಸಂಪುಟದಲ್ಲಿಯೂ ಚರ್ಚೆಯಾಗಿದೆ. ಬಸವಣ್ಣನವರ ಗೌರವ ಮತ್ತು ಹಿತದೃಷ್ಟಿಯಿಂದ ನಮ್ಮ ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ.
ದಾರ್ಶನಿಕರು ಹಾಗೂ ಮಹನೀಯರ ಬಗ್ಗೆ ಯಾರೂ ಅವಹೇಳನಕಾರಿಯಾಗಿ ಬರೆಯುವ ಅಥವಾ ಮಾತನಾಡುವಂತಿಲ್ಲ. ಇಂತಹ ಕೃತ್ಯಗಳನ್ನು ತಡೆಯಲು ಕಾನೂನು ರೂಪಿಸುವಂತೆ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಸಚಿವರು ಹೇಳಿದರು.
ರವಿ ಹಂಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಾವು ಸರ್ಕಾರವನ್ನು ಒತ್ತಾಯಿಸಿರುವುದಾಗಿ ಕೆ.ಎಸ್. ಬಸವಂತಪ್ಪ ಸ್ಪಷ್ಟಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R