ರಾಜಸ್ಥಾನದ ಕೋಟಾದಲ್ಲಿ ಭೀಕರ ರಸ್ತೆ ಅಪಘಾತ: ಮಹಾರಾಷ್ಟ್ರದ ಒಂದೇ ಕುಟುಂಬದ ಒಂಬತ್ತು ಮಂದಿ ಸಾವು
ಕೋಟಾ (ರಾಜಸ್ಥಾನ), 22 ನವೆಂಬರ್ (ಹಿ.ಸ.): ರಾಜಸ್ಥಾನದ ಕೋಟಾ-ಉದಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಂಭೂಪುರ ಗ್ರಾಮದ ಸಮೀಪ ಶನಿವಾರ ಮಧ್ಯರಾತ್ರಿ ಬಳಿಕ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಾರಾಷ್ಟ್ರದ ಒಂದೇ ಕುಟುಂಬದ ಒಂಬತ್ತು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ನಾಂತಾ ಪೊಲೀಸ್ ಠ
यह हादसा रात लगभग एक बजे कोटा-उदयपुर नेशनल हाइवे पर शंभूपुरा गांव के पास हुआ। फोटो -  इंटरनेट मीडिया


ಕೋಟಾ (ರಾಜಸ್ಥಾನ), 22 ನವೆಂಬರ್ (ಹಿ.ಸ.):

ರಾಜಸ್ಥಾನದ ಕೋಟಾ-ಉದಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಂಭೂಪುರ ಗ್ರಾಮದ ಸಮೀಪ ಶನಿವಾರ ಮಧ್ಯರಾತ್ರಿ ಬಳಿಕ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಾರಾಷ್ಟ್ರದ ಒಂದೇ ಕುಟುಂಬದ ಒಂಬತ್ತು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ನಾಂತಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಸುಮಾರು 1 ಗಂಟೆಗೆ ಈ ಅಪಘಾತ ಸಂಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ಆರಂಭಿಸಿದರು. ನಗರ ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವಿನಿ ಗೌತಮ್ ಅವರು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.

ಪೊಲೀಸರ ಪ್ರಕಾರ, ಮಹಾರಾಷ್ಟ್ರದ ಧುಳೆ ಜಿಲ್ಲೆಯ ಒಂದೇ ಕುಟುಂಬದ 16 ಮಂದಿ ಕ್ರೂಸರ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕಾಗಿ ಮಂಗಳವಾರ ಮಹಾರಾಷ್ಟ್ರದಿಂದ ಪ್ರವಾಸ ಆರಂಭಿಸಿದ್ದ ಕುಟುಂಬ, ಮೊದಲು ಮಧ್ಯಪ್ರದೇಶದ ಓಂಕಾರೇಶ್ವರ, ಬಳಿಕ ರಾಜಸ್ಥಾನದ ಪುಷ್ಕರ್ ಮತ್ತು ಖಾಟುಶ್ಯಾಮ್ಜಿ ದೇವಸ್ಥಾನಗಳಿಗೆ ಭೇಟಿ ನೀಡಿತ್ತು. ಶನಿವಾರ ರಾತ್ರಿ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಕ್ರೂಸರ್‌ನಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಾಧವಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.

ನ್ಯೂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಅಧೀಕ್ಷಕ ಡಾ. ಆಶುತೋಷ್ ಶರ್ಮಾ ಅವರ ಪ್ರಕಾರ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ ಮನೀಷಾ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿರಿಸಲಾಗಿದೆ.

ಮೃತರನ್ನು ಉಷಾ ಬಾಯಿ, ಸುಶೀಲಾ (55), ಕೈಲಾಶ್ (45), ಸಾಂವಿ, ಸಜ್ಜನ್, ಅನಿತಾ, ಬಾಬೂಲಾಲ್ (60), ಜಾಹ್ನವಿ (13) ಮತ್ತು ಮಾಧವಿ ಎಂದು ಗುರುತಿಸಲಾಗಿದೆ.

ಗಾಯಗೊಂಡವರನ್ನು ಜಗದೀಶ್ (10), ಮಯೂರಿ ಪವಾರ್ (20), ಮನೀಷಾ ಪವಾರ್ (45), ಶರದ್ ಪವಾರ್ (46), ಗಣೇಶ್ ಪವಾರ್ (30), ಸೃಜೇತ್ (3) ಹಾಗೂ ಟ್ರಕ್ ಚಾಲಕ ಹರೂನ್ (43) ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ನ್ಯೂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಅಪಘಾತಕ್ಕೀಡಾದ ಕ್ರೂಸರ್ ವಾಹನದ ಹಿಂದಿನ ಮತ್ತೊಂದು ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರದೀಪ್ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಕುಟುಂಬದ ಒಟ್ಟು 36 ಮಂದಿ ಮೂರು ವಾಹನಗಳಲ್ಲಿ ಧಾರ್ಮಿಕ ಪ್ರವಾಸಕ್ಕೆ ತೆರಳಿದ್ದರು. ಖಾಟುಶ್ಯಾಮ್ಜಿ ದರ್ಶನ ಮುಗಿಸಿ ಶನಿವಾರ ರಾತ್ರಿ ಮಹಾರಾಷ್ಟ್ರಕ್ಕೆ ಮರಳುತ್ತಿದ್ದರು. ಮೂರು ವಾಹನಗಳು ಪರಸ್ಪರ ಸಮೀಪದಲ್ಲೇ ಸಂಚರಿಸುತ್ತಿದ್ದವು. ಈ ಸಂದರ್ಭದಲ್ಲಿ ಮುಂದೆ ಸಾಗುತ್ತಿದ್ದ ಕ್ರೂಸರ್ ಏಕಾಏಕಿ ಅಪಘಾತಕ್ಕೀಡಾಯಿತು ಎಂದು ಅವರು ತಿಳಿಸಿದ್ದಾರೆ.

ಟ್ರಕ್ ಚಾಲಕ ಹರೂನ್ (43) ಮಧ್ಯಪ್ರದೇಶದ ಖಂಡ್ವಾ ನಿವಾಸಿಯಾಗಿದ್ದು, ಟ್ರಕ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದ್ದಾಗಿ ತಿಳಿಸಿದ್ದಾರೆ. ತಾವು ಟ್ರಕ್‌ನಿಂದ ಸ್ವಲ್ಪ ದೂರದಲ್ಲಿ ನಿಂತಿದ್ದಾಗ ವೇಗವಾಗಿ ಬಂದ ಕ್ರೂಸರ್ ಮೊದಲು ತಮಗೆ ಡಿಕ್ಕಿ ಹೊಡೆದು ಬಳಿಕ ಟ್ರಕ್‌ನ ಹಿಂಭಾಗಕ್ಕೆ ನುಗ್ಗಿತು. ಡಿಕ್ಕಿಯ ರಭಸಕ್ಕೆ ಸುಮಾರು 20 ಅಡಿ ದೂರಕ್ಕೆ ಎಸೆಯಲ್ಪಟ್ಟು ಪ್ರಜ್ಞೆ ತಪ್ಪಿದ್ದಾಗಿ ಹೇಳಿದ್ದಾರೆ.

ಸುಮಾರು ಹತ್ತು ನಿಮಿಷಗಳ ಬಳಿಕ ಪ್ರಜ್ಞೆ ಮರಳಿದಾಗ ಪೊಲೀಸರಿಗೆ ಮತ್ತು ಆಂಬುಲೆನ್ಸ್‌ಗೆ ಮಾಹಿತಿ ನೀಡಿದ್ದಾಗಿ ಹರೂನ್ ತಿಳಿಸಿದ್ದಾರೆ. ಅಪಘಾತದಲ್ಲಿ ಅವರ ತಲೆ ಮತ್ತು ಮೊಣಕಾಲುಗಳಿಗೆ ಗಾಯಗಳಾಗಿವೆ.

ಒಂದೇ ಕುಟುಂಬದ ಒಂಬತ್ತು ಮಂದಿ ಮೃತಪಟ್ಟಿರುವ ಘಟನೆ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರಲ್ಲಿ ತೀವ್ರ ಆಘಾತ ಮತ್ತು ಶೋಕಕ್ಕೆ ಕಾರಣವಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande