
ಗದಗ, 22 ನವೆಂಬರ್ (ಹಿ.ಸ.)
ಗದಗ ಜಿಲ್ಲೆಯ ರೈತರು ಬರದ ಬೇಗೆಯಲ್ಲಿ ಬೆಂದು ಹೋಗುತ್ತಿದ್ದು, ಬೆಳೆ ನಷ್ಟ, ಬೆಳೆ ವಿಮೆ ಹಾಗೂ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಮಾತ್ರ ಅದ್ಧೂರಿ ಔತಣಕೂಟದಲ್ಲಿ ಸಂಭ್ರಮಿಸಿದ್ದಾರೆ ಎಂಬ ಆರೋಪ ರೈತ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿರುವ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸದ ಆವರಣದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಬೀಳ್ಕೊಡುಗೆ ಹಿನ್ನೆಲೆಯಲ್ಲಿ ಅದ್ಧೂರಿ ಔತಣಕೂಟ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಕಾರ್ಯಕ್ರಮದಲ್ಲಿ ಜಾನಪದ ಹಾಡುಗಳಿಗೆ ಅಧಿಕಾರಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ತಡರಾತ್ರಿ 12 ಗಂಟೆಯವರೆಗೂ ಹಾಡು, ಕುಣಿತ ಹಾಗೂ ಔತಣಕೂಟ ಮುಂದುವರಿದಿತ್ತು ಎನ್ನಲಾಗಿದೆ. ಜಿಲ್ಲಾಧಿಕಾರಿಗಳ ನಿವಾಸಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ವೆಜ್ ಮತ್ತು ನಾನ್ವೆಜ್ ಭೋಜನದ ವ್ಯವಸ್ಥೆಯೂ ಮಾಡಲಾಗಿತ್ತು.
ಒಂದೆಡೆ ಜಿಲ್ಲೆಯ ರೈತರು ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ವಿಮೆ ಹಾಗೂ ಬೆಳೆಹಾನಿ ಪರಿಹಾರಕ್ಕಾಗಿ ಸರ್ಕಾರದತ್ತ ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಜಿಲ್ಲಾಡಳಿತದ ಅಧಿಕಾರಿಗಳು ಅದ್ಧೂರಿ ಸಂಭ್ರಮದಲ್ಲಿ ತೊಡಗಿರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಈ ಕುರಿತು ರೈತ ಮುಖಂಡ ಪರಮೇಶ್ವರ ಜಂತ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ರೈತರು ಸಂಕಷ್ಟದಲ್ಲಿರುವಾಗ ಇಂತಹ ಅದ್ಧೂರಿ ಔತಣಕೂಟದ ಅಗತ್ಯವಿತ್ತೇ? ಪಾರ್ಟಿ ಮತ್ತು ವಿದ್ಯುತ್ ದೀಪಾಲಂಕಾರಕ್ಕೆ ಖರ್ಚು ಮಾಡಿರುವ ಹಣ ಎಷ್ಟು? ಈ ವೆಚ್ಚವನ್ನು ಸರ್ಕಾರ ಭರಿಸಿದೆಯೇ ಅಥವಾ ವೈಯಕ್ತಿಕವಾಗಿ ಮಾಡಲಾಗಿದೆಯೇ? ಕಾರ್ಯಕ್ರಮ ಆಯೋಜಿಸಿದವರು ಯಾರು? ಎಂಬ ಪ್ರಶ್ನೆಗಳನ್ನು ಅವರು ಎತ್ತಿದ್ದಾರೆ.
ರೈತರ ಸಂಕಷ್ಟದ ಸಂದರ್ಭದಲ್ಲಿ ಅಧಿಕಾರಿಗಳು ಆಡಂಬರದ ಸಂಭ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ಸಾರ್ವಜನಿಕ ಹಣ ಬಳಕೆಯಾಗಿದ್ದರೆ ಅದರ ವೆಚ್ಚದ ವಿವರಗಳನ್ನು ಜಿಲ್ಲಾಡಳಿತ ಬಹಿರಂಗಪಡಿಸಬೇಕು ಎಂಬುದು ರೈತ ಮುಖಂಡರ ಆಗ್ರಹವಾಗಿದೆ.
ಒಟ್ಟಿನಲ್ಲಿ, ರೈತರ ಕಣ್ಣೀರು ಒರೆಸಬೇಕಾದ ಜಿಲ್ಲಾಡಳಿತದ ಅಧಿಕಾರಿಗಳ ಅದ್ಧೂರಿ ಔತಣಕೂಟ ಇದೀಗ ಗದಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಕಾರ್ಯಕ್ರಮದ ವೆಚ್ಚ ಹಾಗೂ ಆಯೋಜನೆಯ ಕುರಿತು ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP