
ನವದೆಹಲಿ, 22 ನವೆಂಬರ್ (ಹಿ.ಸ.):
ದೀರ್ಘಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಸಮಾಜಕ್ಕೆ ಮರಳುವವರು ಹೊಸದಾಗಿ ಬದುಕು ಆರಂಭಿಸಲು ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಶಿಕ್ಷೆ ಪೂರ್ಣಗೊಂಡ ಬಳಿಕವೂ ಅಪರಾಧ ಪ್ರಜ್ಞೆ ಮತ್ತು ಹಿಂದಿನ ಜೀವನದ ಕಹಿ ನೆನಪುಗಳು ಅವರನ್ನು ಕಾಡುತ್ತವೆ. ಇಂತಹವರಿಗೆ ಬದುಕಿನಲ್ಲಿ ಮತ್ತೊಂದು ಅವಕಾಶ ನೀಡಬೇಕು ಎಂದು ರಷ್ಯಾದ ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ನಿಕಿತಾ ಗ್ರುಶಿನ್ ಹೇಳಿದರು.
ಭಾನುವಾರ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಮ್ಮ 'ನ್ಯೂ ಹೋಮ್' ಚಿತ್ರದ ಕುರಿತು ಮಾತನಾಡಿದ ಅವರು, ಜೈಲಿನಿಂದ ಬಿಡುಗಡೆಯಾಗಿ ಪುನರ್ವಸತಿ ಪ್ರಕ್ರಿಯೆಯಲ್ಲಿರುವವರ ಬದುಕಿನ ಸಂಕಷ್ಟಗಳನ್ನು ವಿವರಿಸಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಾರ, ಈ ವರ್ಷದ ಚಲನಚಿತ್ರೋತ್ಸವದಲ್ಲಿ ರಷ್ಯಾವನ್ನು ಪಾಲುದಾರ ರಾಷ್ಟ್ರವಾಗಿ ಸೇರಿಸಿಕೊಳ್ಳಲಾಗಿದೆ. ಇದರ ಭಾಗವಾಗಿ ರಷ್ಯನ್ ಭಾಷೆಯ 101 ನಿಮಿಷಗಳ ಅವಧಿಯ 'ನ್ಯೂ ಹೋಮ್' ಚಲನಚಿತ್ರದ ವಿಶ್ವಪ್ರದರ್ಶನವನ್ನು ಚಲನಚಿತ್ರೋತ್ಸವದಲ್ಲಿ ಆಯೋಜಿಸಲಾಗಿದೆ.
ದೀರ್ಘಕಾಲ ಜೈಲಿನಲ್ಲಿದ್ದು ಬಿಡುಗಡೆಯಾದ ಬಳಿಕ ಪುನರ್ವಸತಿ ಪ್ರಕ್ರಿಯೆ ಎದುರಿಸುತ್ತಿರುವವರೊಂದಿಗೆ ಸಂವಾದ ನಡೆಸಿದಾಗ ಅವರ ಸಮಸ್ಯೆಗಳ ಅರಿವಾಯಿತು. ಸಮಾಜದಲ್ಲಿ ಮತ್ತೆ ನೆಲೆ ಕಂಡುಕೊಳ್ಳುವುದು ಮತ್ತು ಸಾಮಾನ್ಯ ಜೀವನ ಆರಂಭಿಸುವುದು ಅವರಿಗೆ ಸುಲಭವಲ್ಲ. ಆದರೆ, ಅವರ ಈ ಹೋರಾಟದ ಬಗ್ಗೆ ಸಮಾಜದಲ್ಲಿ ಸಾಕಷ್ಟು ಗಮನ ಹರಿಸಲಾಗುತ್ತಿಲ್ಲ. ಈ ಅನುಭವವೇ ಚಿತ್ರ ನಿರ್ಮಾಣಕ್ಕೆ ಪ್ರೇರಣೆಯಾಯಿತು ಎಂದು ಗ್ರುಶಿನ್ ತಿಳಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಳ್ಳುತ್ತಿರುವ ತಮ್ಮ ಮೊದಲ ಪೂರ್ಣಪ್ರಮಾಣದ ಚಿತ್ರ ಇದಾಗಿದೆ ಎಂದರು.
ಅಪರಾಧ ಪ್ರಜ್ಞೆ, ಕ್ಷಮೆ ಮತ್ತು ಪುನರ್ವಸತಿಯ ಕಥೆ
ಚಿತ್ರದ ಕಥೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗುವ ಅಣ್ಣಾ ಎಂಬ ಮಹಿಳೆಯ ಸುತ್ತ ಹೆಣೆಯಲಾಗಿದೆ. ಆಕೆಯ ಬಳಿ ಹಣವಿಲ್ಲ, ಕುಟುಂಬದ ಬೆಂಬಲವಿಲ್ಲ ಹಾಗೂ ಭವಿಷ್ಯದ ಬಗ್ಗೆ ಸ್ಪಷ್ಟವಾದ ದಿಕ್ಕೆಯೂ ಇಲ್ಲ. ಸಾಮಾಜಿಕ ಸೇವಾ ಸಂಸ್ಥೆಗಳ ನೆರವಿನಿಂದ ಆಕೆಗೆ ಉದ್ಯೋಗ ಮತ್ತು ವಾಸಿಸಲು ಸ್ಥಳ ದೊರೆಯುತ್ತದೆ.
ಈ ಸಂದರ್ಭದಲ್ಲಿ ರೋಮನ್ ಎಂಬ ವ್ಯಕ್ತಿಯ ಪರಿಚಯವಾಗುತ್ತದೆ. ಅಲ್ಲದೆ, ಆಕೆ ಸಹಾಯ ಗುಂಪೊಂದರ ಭಾಗವಾಗುತ್ತಾಳೆ. ಹೊಸದಾಗಿ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ತನ್ನ ಹಿಂದಿನ ಜೀವನ, ಅಪರಾಧ ಪ್ರಜ್ಞೆ ಮತ್ತು ಆಂತರಿಕ ಸಂಘರ್ಷಗಳನ್ನು ಎದುರಿಸಬೇಕಾಗುತ್ತದೆ. ಕೊನೆಗೆ ತನ್ನ ಭವಿಷ್ಯವನ್ನೇ ನಿರ್ಧರಿಸಬಲ್ಲ ಕಠಿಣ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ.
ಅಣ್ಣಾ ಪಾತ್ರ ಯಾವುದೇ ಒಬ್ಬ ನೈಜ ವ್ಯಕ್ತಿಯನ್ನು ಆಧರಿಸಿಲ್ಲ. ಜೈಲಿನಿಂದ ಬಿಡುಗಡೆಯಾದ ಬಳಿಕ ಸಾಮಾನ್ಯ ಜೀವನಕ್ಕೆ ಮರಳಲು ಪ್ರಯತ್ನಿಸುತ್ತಿರುವ ಹಲವು ಜನರ ಅನುಭವಗಳು ಮತ್ತು ಅವರೊಂದಿಗಿನ ಸಂಭಾಷಣೆಗಳಿಂದ ಈ ಪಾತ್ರವನ್ನು ರೂಪಿಸಲಾಗಿದೆ ಎಂದು ಗ್ರುಶಿನ್ ವಿವರಿಸಿದರು.
ಅಪರಾಧ ಪ್ರಜ್ಞೆ, ಕ್ಷಮೆ, ಪುನರ್ವಸತಿ ಹಾಗೂ ಬದುಕನ್ನು ಹೊಸದಾಗಿ ಆರಂಭಿಸುವ ಸಾಧ್ಯತೆಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ ಎಂದರು.
ಚಿತ್ರದ ಛಾಯಾಗ್ರಾಹಕಿ ಏಕತೇರಿನಾ ಸ್ಮೊಲಿನಾ ಅವರು ನಿರ್ದೇಶಕರೊಂದಿಗಿನ ಸೃಜನಶೀಲ ಒಡನಾಟದ ಕುರಿತು ಮಾತನಾಡಿದರು. ಇಬ್ಬರೂ ಚಲನಚಿತ್ರ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿದ್ದ ದಿನಗಳಿಂದ ಪರಸ್ಪರ ಪರಿಚಿತರಾಗಿದ್ದು, ಈ ಹಿಂದೆ ಮೂರು ಕಿರುಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ದೀರ್ಘಕಾಲದ ಸ್ನೇಹ ಮತ್ತು ಪರಸ್ಪರರ ಕೆಲಸದ ಶೈಲಿಯ ಅರಿವು ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಸಹಕಾರಿಯಾಯಿತು ಎಂದು ತಿಳಿಸಿದರು.
ಭಾರತ-ರಷ್ಯಾ ಚಿತ್ರರಂಗ ಸಹಕಾರಕ್ಕೆ ಅವಕಾಶ
ಭಾರತ ಮತ್ತು ರಷ್ಯಾ ನಡುವಿನ ಚಲನಚಿತ್ರ ನಿರ್ಮಾಣ ಕ್ಷೇತ್ರದ ಸಹಕಾರದ ಸಾಧ್ಯತೆಗಳ ಕುರಿತು ಮಾತನಾಡಿದ ಗ್ರುಶಿನ್, ಉಭಯ ದೇಶಗಳ ನಡುವೆ ಚಿತ್ರರಂಗದ ಸಂಬಂಧ ಬಹಳ ಹಿಂದಿನಿಂದಲೂ ಇದೆ ಎಂದು ಹೇಳಿದರು.
ಸೋವಿಯತ್ ಒಕ್ಕೂಟದ ಕಾಲದಲ್ಲಿ ಭಾರತೀಯ ಚಲನಚಿತ್ರಗಳು ರಷ್ಯಾದಲ್ಲಿ ಅತ್ಯಂತ ಜನಪ್ರಿಯವಾಗಿದ್ದವು. ಇಂದಿಗೂ ಅಲ್ಲಿನ ಪ್ರೇಕ್ಷಕರ ಹೃದಯದಲ್ಲಿ ಭಾರತೀಯ ಚಿತ್ರರಂಗಕ್ಕೆ ವಿಶೇಷ ಸ್ಥಾನವಿದೆ. ಮುಂದಿನ ದಿನಗಳಲ್ಲಿ ಭಾರತ ಮತ್ತು ರಷ್ಯಾ ನಡುವೆ ಚಲನಚಿತ್ರ ನಿರ್ಮಾಣ ಕ್ಷೇತ್ರದಲ್ಲಿ ಸಹಕಾರ ವಿಸ್ತರಿಸಲು ವಿಪುಲ ಅವಕಾಶಗಳಿವೆ ಎಂದರು.
ಈ ಸಹಭಾಗಿತ್ವ ಕೇವಲ ಬಂಡವಾಳ ಹೂಡಿಕೆ ಮತ್ತು ತಂತ್ರಜ್ಞಾನಕ್ಕೆ ಸೀಮಿತವಾಗಬಾರದು. ಉಭಯ ದೇಶಗಳ ಜನರ ನಡುವಿನ ಬಾಂಧವ್ಯ, ಪರಸ್ಪರ ಸಂಬಂಧಗಳು ಮತ್ತು ಸಾಂಸ್ಕೃತಿಕ ನಂಟನ್ನು ಪ್ರತಿಬಿಂಬಿಸುವ ಕಥೆಗಳಿಗೂ ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.