
ಢಾಕಾ (ಬಾಂಗ್ಲಾದೇಶ), 22 ನವೆಂಬರ್ (ಹಿ.ಸ.):
ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಹಾಗೂ ಹಿಂಸಾತ್ಮಕ ಘಟನೆಗಳು ಮುಂದುವರಿದಿದ್ದು, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪಕ್ಷವಾದ ಅವಾಮಿ ಲೀಗ್ ನಾಯಕರ ಮೇಲೆ ದಾಳಿಗಳು ಹೆಚ್ಚಾಗಿವೆ. ಪಕ್ಷದ ನಾಯಕರ ಮನೆಗಳ ಮೇಲೆ ಹಲ್ಲೆ, ದರೋಡೆ ಹಾಗೂ ಗುಂಡಿನ ದಾಳಿಗಳು ನಡೆದಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಶೇಖ್ ಹಸೀನಾ ಅವರ ತವರು ಜಿಲ್ಲೆ ಗೋಪಾಲಗಂಜ್ನಲ್ಲಿ ಗಡಿ ಭದ್ರತಾ ಪಡೆಗಳ 55 ತುಕಡಿಗಳನ್ನು ನಿಯೋಜಿಸಲಾಗಿದೆ.
ಡಿಸೆಂಬರ್ನಲ್ಲಿ ದೇಶಕ್ಕೆ ಮರಳುವುದಾಗಿ ಶೇಖ್ ಹಸೀನಾ ಘೋಷಿಸಿರುವುದು ಹಾಗೂ ಅವರ ಪಕ್ಷ ಅವಾಮಿ ಲೀಗ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ರಾಜಕೀಯ ಸಂಘರ್ಷ ತೀವ್ರಗೊಂಡಿದೆ. ಸರ್ಕಾರವು ಅವಾಮಿ ಲೀಗ್ ಪಕ್ಷದ ಮೇಲೆ ನಿಷೇಧ ಹೇರಿದೆ.
ಖುಲ್ನಾದಲ್ಲಿ ಇಬ್ಬರು ನಾಯಕರ ಮೇಲೆ ಹಲ್ಲೆ
ಶನಿವಾರ ಖುಲ್ನಾ ಜಿಲ್ಲೆಯ ರೂಪ್ಸಾ ಉಪಜಿಲ್ಲೆಯ ಸೇನರ್ ಬಜಾರ್ನಲ್ಲಿ ಮಧ್ಯಾಹ್ನ ಹಾಗೂ ಖಾನ್ ಜಹಾನ್ ಅಲಿ ಠಾಣಾ ವ್ಯಾಪ್ತಿಯ ಫುಲ್ಬಾರಿ ಗೇಟ್ ಬಳಿ ಸಂಜೆ ಅವಾಮಿ ಲೀಗ್ ನಾಯಕರ ಮೇಲೆ ಪ್ರತ್ಯೇಕ ದಾಳಿಗಳು ನಡೆದಿವೆ.
ದಾಳಿಯಲ್ಲಿ ಮೊಹಮ್ಮದ್ ಮುನಿರುಜ್ಜಮಾನ್ ಮತ್ತು ಮುಕ್ತಿಜೊದ್ಧಾ ಪ್ರಜೋನ್ಮೊ ಲೀಗ್ ಸದಸ್ಯ 50 ವರ್ಷದ ಲೈಸುಜ್ಜಮಾನ್ ಗಾಯಗೊಂಡಿದ್ದಾರೆ. ಲೈಸುಜ್ಜಮಾನ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ. ಮುನಿರುಜ್ಜಮಾನ್ ಅವರು ಐಚಗಾಟಿ ಒಕ್ಕೂಟದ ದೇವೋರಾ ಪ್ರದೇಶದ ಅವಾಮಿ ಲೀಗ್ ಐದನೇ ವಾರ್ಡ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಖುಲ್ನಾ ಜಿಲ್ಲಾ ಕೃಷಕ ಲೀಗ್ನ ಮಾಜಿ ಅಧ್ಯಕ್ಷ ಪ್ರೊ. ಅಶ್ರಫುಜ್ಜಮಾನ್ ಬಾಬುಲ್ ಅವರ ಸಹೋದರರಾಗಿದ್ದಾರೆ.
ಲೈಸುಜ್ಜಮಾನ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮಿರಾಜ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಪಾಲಗಂಜ್ನಲ್ಲಿ 55 ತುಕಡಿ ನಿಯೋಜನೆ
ಗೋಪಾಲಗಂಜ್ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿಯಾಗಿ 26 ತುಕಡಿ ಗಡಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಈ ಕುರಿತು ಗಡಿ ಭದ್ರತಾ ಪಡೆಗಳ ಪ್ರಧಾನ ಕಚೇರಿ ಶನಿವಾರ ಮಧ್ಯಾಹ್ನ ಪ್ರಕಟಣೆ ಹೊರಡಿಸಿದೆ.
ಈಗಾಗಲೇ ಜಿಲ್ಲೆಯಲ್ಲಿ 29 ತುಕಡಿಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿ 26 ತುಕಡಿಗಳ ನಿಯೋಜನೆಯೊಂದಿಗೆ ಒಟ್ಟು ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಸಾರ್ವಜನಿಕರ ಸುರಕ್ಷತೆ ಖಚಿತಪಡಿಸುವುದು ಹಾಗೂ ಅಹಿತಕರ ಘಟನೆಗಳನ್ನು ತಡೆಯುವುದು ನಿಯೋಜನೆಯ ಉದ್ದೇಶವಾಗಿದೆ. ಸ್ಥಳೀಯ ಆಡಳಿತ ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಪಡೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.
ವ್ಯಾಪಾರಿ ಮನೆ ಮೇಲೆ ದಾಳಿ, ಇಬ್ಬರಿಗೆ ಗುಂಡೇಟು
ರಾಜಧಾನಿ ಢಾಕಾದ ಕೆರಾನಿಗಂಜ್ ಪ್ರದೇಶದ ತೆಘೋರಿಯಾದಲ್ಲಿ ಶನಿವಾರ ಮುಂಜಾನೆ ಉದ್ಯಮಿ ಹಾಗೂ ಅವಾಮಿ ಲೀಗ್ನ ಮಾಜಿ ನಾಯಕ ನೂರ್ ಆಲಂ ಅವರ ಮನೆ ಮೇಲೆ ದಾಳಿ ನಡೆದಿದೆ. ದಾಳಿಕೋರರು ಬೆಲೆಬಾಳುವ ವಸ್ತುಗಳನ್ನು ದೋಚಿ, ಮನೆಯ ಮುಂದೆ ನಿಲ್ಲಿಸಿದ್ದ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಕುಟುಂಬದ ಇಬ್ಬರಿಗೆ ಗುಂಡು ಹಾರಿಸಿದ್ದಾರೆ.
ನೂರ್ ಆಲಂ ಅವರ 17 ವರ್ಷದ ಪುತ್ರ ರಿಪಾಯಿ ಮಹಮೂದ್ ಲಿಯೋನ್ ಹಾಗೂ 70 ವರ್ಷದ ಮಾವ ಹಾಜಿ ಆಲಂ ಗಾಯಗೊಂಡಿದ್ದಾರೆ. ಹಾಜಿ ಆಲಂ ಅವರಿಗೆ ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು ಮತ್ತು ಮಿಟ್ಫೋರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಜಿ ಸಂಸದರು, ಮೇಯರ್ಗಳ ಮನೆಗಳ ಮೇಲೂ ದಾಳಿ
ಪಟುವಾಖಾಲಿ ಜಿಲ್ಲೆಯಲ್ಲಿ ಅವಾಮಿ ಲೀಗ್ನ ಮೂವರು ಮಾಜಿ ಸಂಸದರು ಹಾಗೂ ಓರ್ವ ಮಾಜಿ ಮೇಯರ್ ಅವರ ಮನೆಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಲಾಗಿದೆ.
ಕಲಾಪಾರಾ ಪಟ್ಟಣದ ಕಮಾರಪಟ್ಟಿ ಪ್ರದೇಶದಲ್ಲಿರುವ ಅವಾಮಿ ಲೀಗ್ನ ದಿವಂಗತ ಮಾಜಿ ಸಂಸದ ಅನ್ವರ್-ಉಲ್ ಇಸ್ಲಾಂ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಅನಾಥಾಶ್ರಮ ಪ್ರದೇಶದಲ್ಲಿರುವ ಕಲಾಪಾರಾ ಪುರಸಭೆಯ ಮಾಜಿ ಮೇಯರ್ ಹಾಗೂ ಅವಾಮಿ ಲೀಗ್ ಉಪಜಿಲ್ಲಾ ಸಮಿತಿಯ ಉಪಾಧ್ಯಕ್ಷ ಎಸ್.ಎಂ. ರಕಿಬುಲ್ ಅಹ್ಸಾನ್ ಅವರ ಮನೆಗೆ ಇಟ್ಟಿಗೆ ಚೂರು ಮತ್ತು ಕಲ್ಲುಗಳನ್ನು ಎಸೆಯಲಾಗಿದೆ.
ಮಾಜಿ ರಾಜ್ಯ ಸಚಿವ ಹಾಗೂ ಅವಾಮಿ ಲೀಗ್ ಜಿಲ್ಲಾ ಸಮಿತಿಯ ಮಾಜಿ ಉಪಾಧ್ಯಕ್ಷ ಮೊಹಿಬುರ್ ರಹಮಾನ್ ಅವರ ನಿವಾಸವನ್ನೂ ಧ್ವಂಸಗೊಳಿಸಲಾಗಿದೆ.
ಈ ಘಟನೆಗಳ ಕುರಿತು ಯಾವುದೇ ದೂರು ಸ್ವೀಕರಿಸಿಲ್ಲ ಎಂದು ಕಲಾಪಾರಾ ಠಾಣೆಯ ಅಧಿಕಾರಿ ಮೊಹಮ್ಮದ್ ನಜರುಲ್ ಇಸ್ಲಾಂ ತಿಳಿಸಿದ್ದಾರೆ.
ಇದಕ್ಕೂ ಮೊದಲು ನವೆಂಬರ್ 19ರ ರಾತ್ರಿ ಪಟುವಾಖಾಲಿ ನಗರದ ಪುರಾನ್ ಬಜಾರ್ ಪ್ರದೇಶದಲ್ಲಿರುವ ಮಾಜಿ ಸಂಸದೆ ಲುತ್ಫುನ್ ನೆಸಾ ಅವರ ಮನೆಯ ಮುಖ್ಯ ದ್ವಾರದ ಮೇಲೆ ದಾಳಿ ನಡೆಸಿ ಹಾನಿಗೊಳಿಸಲಾಗಿತ್ತು. ಅವರು 2014ರಿಂದ 2018ರವರೆಗೆ ಹತ್ತನೇ ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾದ ಕ್ಷೇತ್ರದಿಂದ ಸಂಸದೆಯಾಗಿದ್ದರು. ಅವಾಮಿ ಲೀಗ್ನ ಪಟುವಾಖಾಲಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಸುಲ್ತಾನ್ ಅಹ್ಮದ್ ಅವರ ಪತ್ನಿಯಾಗಿದ್ದಾರೆ.
ದಾಳಿಯ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಆದರೆ, ಯಾರೂ ಅಧಿಕೃತ ದೂರು ದಾಖಲಿಸದ ಕಾರಣ ಪೊಲೀಸರು ವಾಪಸಾಗಿದ್ದರು ಎಂದು ಪಟುವಾಖಾಲಿ ಸದರ್ ಠಾಣೆಯ ಅಧಿಕಾರಿ ಮೊಹಮ್ಮದ್ ಮುನಿರುಜ್ಜಮಾನ್ ತಿಳಿಸಿದ್ದಾರೆ.
ವಿದ್ಯಾರ್ಥಿ ಲೀಗ್ ನಾಯಕರ ಮನೆಗಳಿಗೂ ಕಲ್ಲೆಸೆತ
ಶುಕ್ರವಾರ ರಾತ್ರಿ ಬ್ರಾಹ್ಮಣಬಾರಿಯಾ ಪುರಸಭೆ ವ್ಯಾಪ್ತಿಯ ಬಾಗಾನಬಾರಿ ಪ್ರದೇಶದಲ್ಲಿ ನಿಷೇಧಿತ ವಿದ್ಯಾರ್ಥಿ ಲೀಗ್ನ ಜಿಲ್ಲಾ ಘಟಕದ ಜಂಟಿ ಕಾರ್ಯದರ್ಶಿ ಮಿಕಾಯಿಲ್ ಹುಸೇನ್ ಹಾಗೂ ಪುರಸಭೆ ಘಟಕದ ಅಧ್ಯಕ್ಷ ಸಾಮಿ ಅಹ್ಮದ್ ಅವರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ.
ಬಾಂಗ್ಲಾದೇಶದ ವಿವಿಧ ಜಿಲ್ಲೆಗಳಲ್ಲಿ ಅವಾಮಿ ಲೀಗ್ ನಾಯಕರು, ಮಾಜಿ ಜನಪ್ರತಿನಿಧಿಗಳು ಹಾಗೂ ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು ದಾಳಿಗಳು ಮುಂದುವರಿದಿರುವುದು ದೇಶದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ಆತಂಕ ಮೂಡಿಸಿದೆ ಎಂದು ವರದಿಗಳು ತಿಳಿಸಿವೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.