
ಚಿತ್ರದುರ್ಗ, 22 ನವೆಂಬರ್ (ಹಿ.ಸ.):
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್ನಿಂದ ಹಣ ಕಳವು ಮಾಡುತ್ತಿದ್ದ ಐವರು ಅಂತರ್ ಜಿಲ್ಲಾ ಆರೋಪಿಗಳನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 20 ದಿನಗಳ ಹಿಂದೆ ಈ ಕಳವು ಪ್ರಕರಣ ನಡೆದಿತ್ತು. ಎ.ಆರ್. ಲಕ್ಷ್ಮಣ್ ರಾವ್ ಎಂಬುವವರು ಹೊಸದುರ್ಗ ಪಟ್ಟಣದಲ್ಲಿ ಕಿರಾಣಿ ಅಂಗಡಿಗಳ ಬಾಕಿ ವಸೂಲಿ ಮಾಡಿಕೊಂಡು ಒಟ್ಟು 1.20 ಲಕ್ಷ ರೂ. ಹಣವನ್ನು ಬ್ಯಾಗ್ನಲ್ಲಿಟ್ಟುಕೊಂಡು ಚಿತ್ರದುರ್ಗಕ್ಕೆ ತೆರಳಲು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಬಸ್ ಹತ್ತುವ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರ ಬ್ಯಾಗ್ನಲ್ಲಿದ್ದ 1.20 ಲಕ್ಷ ರೂ. ನಗದು ಹಣವನ್ನು ಕಳವು ಮಾಡಿದ್ದರು.
ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು.
ಈ ವೇಳೆ ಹುಬ್ಬಳ್ಳಿ ಮೂಲದ ಹನುಮಂತ, ಶ್ರೀಕಾಂತ ಬಳ್ಳಾರಿ, ಮಂಜುನಾಥ ದೊಡ್ಡಮನಿ, ಸದ್ದಾಂ ಹುಸೇನ್ ರಾಯಚೂರು ಹಾಗೂ ಕಾರವಾರ ಜಿಲ್ಲೆಯ ಅಣ್ಣಪ್ಪ ಕ್ಯಾರಕಟ್ಟೆ ಎಂಬ ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳವು ಮಾಡಿದ್ದ ಹಣದಲ್ಲಿ 60 ಸಾವಿರ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುವವರ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R