ಬಸವಣ್ಣನವರ ಅವಹೇಳನ ಖಂಡಿಸಿ ದಾವಣಗೆರೆಯಲ್ಲಿ ಪ್ರತಿಭಟನೆ
ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಬರೆದಿದ್ದಾರೆ ಎನ್ನಲಾದ ರವಿ ಹಂಜ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದಾವಣಗೆರೆಯ ವಿದ್ಯಾನಗರದ ಗಾಂಧಿ ಪ್ರತಿಮೆ ಎದುರು ಯುವ ಬಸವ ಬ್ರಿಗೇಡ್ ಪ್ರತಿಭಟನೆ ನಡೆಸಿತು. ಈ ವೇಳೆ ಟೈರ್ಗೆ ಬೆಂಕಿ ಹಚ್ಚಿ, ರವಿ ಹಂಜ್ ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
Davangere-Protest-Demands-Strict-Action-Against-Ravi-Hanj


ದಾವಣಗೆರೆ, 22 ನವೆಂಬರ್ (ಹಿ.ಸ.):

ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಬರೆದಿದ್ದಾರೆ ಎನ್ನಲಾದ ರವಿ ಹಂಜ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಾವಣಗೆರೆಯಲ್ಲಿ ಯುವ ಬಸವ ಬ್ರಿಗೇಡ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ವಿದ್ಯಾನಗರದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರವಿ ಹಂಜ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಟೈರ್ಗೆ ಬೆಂಕಿ ಹಚ್ಚಿ, ರವಿ ಹಂಜ್ ಅವರ ಭಾವಚಿತ್ರವನ್ನು ಹರಿದು ಬೆಂಕಿಗೆ ಹಾಕುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಬಸವಣ್ಣನವರು ವಿಶ್ವಗುರು, ಸಮಾನತೆ ಮತ್ತು ಮಾನವೀಯತೆಯ ಪ್ರತಿಪಾದಕರು. ಇಂತಹ ಮಹಾನ್ ಶರಣರು ಹಾಗೂ ದಾರ್ಶನಿಕರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವುದು ಅಥವಾ ಬರಹಗಳನ್ನು ರಚಿಸುವುದು ಅಕ್ಷಮ್ಯ ಅಪರಾಧ.

ಸಮಾಜದ ಧಾರ್ಮಿಕ ಮತ್ತು ಸಾಮಾಜಿಕ ಭಾವನೆಗಳಿಗೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರವಿ ಹಂಜ್ ವಿರುದ್ಧ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಂಡು, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಶರಣರು, ಸಂತರು ಹಾಗೂ ದಾರ್ಶನಿಕರ ಕುರಿತು ಅವಹೇಳನಕಾರಿ ಹೇಳಿಕೆ ಅಥವಾ ಬರಹಗಳನ್ನು ಮಾಡುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಸವಣ್ಣನವರ ಗೌರವ ಮತ್ತು ತತ್ವಾದರ್ಶಗಳನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆ ಯುವ ಬಸವ ಬ್ರಿಗೇಡ್ ಸದಸ್ಯರು ಒತ್ತಾಯಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande