ಪಂಜಾಬ್ ವಿಧಾನಸಭೆ ಚುನಾವಣೆ: ಜನರ ಸಲಹೆ ಸಂಗ್ರಹಿಸಲು ಬಿಜೆಪಿ ಹೊಸ ಅಭಿಯಾನ
ನವದೆಹಲಿ, 22 ನವೆಂಬರ್ (ಹಿ.ಸ.): 2027ರ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷ (ಬಿಜೆಪಿ) ಚುನಾವಣಾ ಪ್ರಣಾಳಿಕೆ ರೂಪಿಸುವ ಪ್ರಕ್ರಿಯೆಯಲ್ಲಿ ಜನಸಾಮಾನ್ಯರನ್ನೂ ಪಾಲುದಾರರನ್ನಾಗಿಸಲು ಹೊಸ ಅಭಿಯಾನ ಆರಂಭಿಸಿದೆ. ಜನರ ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲು
BJP Launches Phone Numbers and QR Code to Collect Public Suggestions for 2027 Punjab Poll Manifesto


ನವದೆಹಲಿ, 22 ನವೆಂಬರ್ (ಹಿ.ಸ.):

2027ರ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷ (ಬಿಜೆಪಿ) ಚುನಾವಣಾ ಪ್ರಣಾಳಿಕೆ ರೂಪಿಸುವ ಪ್ರಕ್ರಿಯೆಯಲ್ಲಿ ಜನಸಾಮಾನ್ಯರನ್ನೂ ಪಾಲುದಾರರನ್ನಾಗಿಸಲು ಹೊಸ ಅಭಿಯಾನ ಆರಂಭಿಸಿದೆ. ಜನರ ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲು ಸಂಪರ್ಕ ದೂರವಾಣಿ ಸಂಖ್ಯೆಗಳು ಹಾಗೂ ತ್ವರಿತ ಪ್ರತಿಕ್ರಿಯೆ ಸಂಕೇತ (ಕ್ಯೂಆರ್ ಕೋಡ್) ಬಿಡುಗಡೆ ಮಾಡಿದೆ.

ಭಾನುವಾರ ಚಂಡೀಗಢದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಪಂಜಾಬ್ ಘಟಕದ ಅಧ್ಯಕ್ಷ ಕೇವಲ್ ಸಿಂಗ್ ಢಿಲ್ಲೋನ್, ಸಮಾಜದ ಪ್ರತಿಯೊಂದು ವರ್ಗದ ಜನರಿಂದ ಸಲಹೆಗಳನ್ನು ಸ್ವೀಕರಿಸಿ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಜನರು ತಮ್ಮ ಸಲಹೆಗಳನ್ನು ನೀಡಲು ಮೂರು ಸಂಪರ್ಕ ಸಂಖ್ಯೆಗಳನ್ನು ಪ್ರಕಟಿಸಲಾಗಿದೆ. 07971943333 ಸಂಖ್ಯೆಗೆ ಕರೆ ಮಾಡಿ ಅಭಿಪ್ರಾಯ ಹಂಚಿಕೊಳ್ಳಬಹುದು. 9913002027 ಸಂಖ್ಯೆಗೆ ತಪ್ಪಿದ ಕರೆ ನೀಡಿದರೆ ಪಕ್ಷದ ಕಚೇರಿಯಿಂದ ಮರಳಿ ಕರೆ ಮಾಡಲಾಗುತ್ತದೆ. 7508560065 ಸಂಖ್ಯೆಗೆ ವಾಟ್ಸ್‌ಆ್ಯಪ್ ಮೂಲಕ ಸಲಹೆಗಳನ್ನು ಕಳುಹಿಸಬಹುದು.

ಇದಲ್ಲದೆ, ಕ್ಯೂಆರ್ ಸಂಕೇತವನ್ನು ಸ್ಕ್ಯಾನ್ ಮಾಡುವ ಮೂಲಕವೂ ಜನರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು. ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ವಿಶೇಷ ವಾಹನಗಳನ್ನು ಕಳುಹಿಸಿ ಜನರಿಂದ ನೇರವಾಗಿ ಸಲಹೆಗಳನ್ನು ಸಂಗ್ರಹಿಸಲು ಪಕ್ಷ ಯೋಜಿಸಿದೆ. ಈ ರೀತಿ ಸಂಗ್ರಹಿಸಿದ ಸಲಹೆಗಳನ್ನು ಪರಿಶೀಲಿಸಿ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದು ತಿಳಿಸಿದರು.

ಆಪ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೇವಲ್ ಸಿಂಗ್ ಢಿಲ್ಲೋನ್, ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಾದಕ ವಸ್ತುಗಳ ಹಾವಳಿ, ಅಪರಾಧಿ ಗುಂಪುಗಳ ಚಟುವಟಿಕೆ ಹಾಗೂ ಹೆಚ್ಚುತ್ತಿರುವ ಸಾಲದ ಹೊರೆ ರಾಜ್ಯದ ಪ್ರಮುಖ ಸಮಸ್ಯೆಗಳಾಗಿವೆ ಎಂದು ಆರೋಪಿಸಿದರು.

ಆಮ್ ಆದ್ಮಿ ಪಕ್ಷದ ಆಡಳಿತದಲ್ಲಿ ಪಂಜಾಬ್ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದು ದೂರಿದ ಅವರು, ರಾಜ್ಯದ ಅಭಿವೃದ್ಧಿ ಮತ್ತು ಪ್ರಗತಿಯೇ ಬಿಜೆಪಿಯ ಏಕೈಕ ಗುರಿಯಾಗಿದೆ. ಪ್ರತಿಯೊಬ್ಬ ಪಂಜಾಬಿ ನಾಗರಿಕನ ಆಶಯಗಳು ಮತ್ತು ನಿರೀಕ್ಷೆಗಳನ್ನು ಪ್ರತಿಬಿಂಬಿಸುವ ಚುನಾವಣಾ ಪ್ರಣಾಳಿಕೆಯನ್ನು ರೂಪಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಂಜಾಬ್ ಉಸ್ತುವಾರಿ ಸತೀಶ್ ಪೂನಿಯಾ, ಮನ್ಪ್ರೀತ್ ಸಿಂಗ್ ಬಾದಲ್, ಸೋಮ್ ಪ್ರಕಾಶ್, ಎಚ್.ಎಸ್. ಫೂಲ್ಕಾ, ಮನೋರಂಜನ್ ಕಾಲಿಯಾ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande