
ಶಿವಮೊಗ್ಗ, 22 ನವೆಂಬರ್ (ಹಿ.ಸ.):
ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇದ್ದರೂ ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ರಾಜಕೀಯ ನೇಮಕಾತಿ ಮತ್ತು ಪ್ರಚಾರಕ್ಕೆ ಆದ್ಯತೆ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ. ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೂ ಅನುದಾನ ನೀಡುತ್ತಿಲ್ಲ. ರೈತರಿಗೆ ಪರಿಹಾರ ನೀಡುವ ಯೋಗ್ಯತೆಯೂ ಸರ್ಕಾರಕ್ಕಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಸರ್ಕಾರ ಜಾಹೀರಾತುಗಳ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡುವುದರ ಜೊತೆಗೆ ಭಾರತ್ ಜೋಡೋ ಸಂಯೋಜಕರನ್ನೂ ನೇಮಕ ಮಾಡುತ್ತಿದೆ. ರಾಜ್ಯವೇ ಆರ್ಥಿಕ ಸಂಕಷ್ಟದಲ್ಲಿರುವಾಗ ಶಾಸಕರಿಗೆ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಕ್ಯಾಬಿನೆಟ್ ದರ್ಜೆ ನೀಡುವ ಅಗತ್ಯವೇನಿತ್ತು? ಇದು ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ ತೆರೆಯುವ ಕೆಲಸವಾಗಿದೆ ಎಂದು ಟೀಕಿಸಿದರು.
ಆಶಾ ಕಾರ್ಯಕರ್ತೆಯರು ತಮ್ಮ ಗೌರವಧನ ಹೆಚ್ಚಳಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ ಅವರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿ ಆಶಾ ಕಾರ್ಯಕರ್ತೆಯರನ್ನು ಸಹೋದರಿಯರು ಎಂದು ಕರೆಯುತ್ತಾರೆ. ಹಾಗಾದರೆ ಅವರ ಗೌರವಧನ ಹೆಚ್ಚಳಕ್ಕಾಗಿ ವರ್ಷಕ್ಕೆ ₹350 ಕೋಟಿ ಮೀಸಲಿಡಲು ಸರ್ಕಾರಕ್ಕೆ ಕಷ್ಟವೇ ಎಂದು ಪ್ರಶ್ನಿಸಿದರು.
ಮಂಗಳೂರಿಗೆ ₹32 ಸಾವಿರ ಕೋಟಿ ಹಾಗೂ ರಸ್ತೆ ಅಭಿವೃದ್ಧಿಗೆ ₹16 ಸಾವಿರ ಕೋಟಿ ಘೋಷಣೆ ಮಾಡುವ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರಿಗಾಗಿ ₹350 ಕೋಟಿ ನೀಡಲು ಸಾಧ್ಯವಾಗುತ್ತಿಲ್ಲವೇ? ಮುಖ್ಯಮಂತ್ರಿ ನಿವಾಸದ ಅಲಂಕಾರಕ್ಕೆ ₹100 ಕೋಟಿ ಖರ್ಚು ಮಾಡಿರುವುದು ಬರಗಾಲದ ಸಂದರ್ಭದಲ್ಲಿ ಅಗತ್ಯವಿತ್ತೇ? ಎಂದು ವಿಜಯೇಂದ್ರ ಪ್ರಶ್ನಿಸಿದರು.
ಹಿರಿಯೂರು ಉಪಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ
ಬಿಜೆಪಿಯವರು ಮನೆ ಬಾಗಿಲಿಗೆ ಬಂದರೆ ಬಹಿಷ್ಕರಿಸಿ ಎಂದು ಹೇಳುವ ಮೂಲಕ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಇತ್ತೀಚಿನ ಪರಿಷತ್ ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಿದ್ದಾರೆ. ಅದೇ ರೀತಿ ಹಿರಿಯೂರು ಉಪಚುನಾವಣೆಯಲ್ಲಿಯೂ ಜನರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ. ಹಿರಿಯೂರು ಕ್ಷೇತ್ರದಲ್ಲಿ ಎರಡು ಪಕ್ಷಗಳ ಸಹಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನ ನಡೆಯಲಿದ್ದು, ಎನ್ಡಿಎ ಅಭ್ಯರ್ಥಿಯ ಗೆಲುವಿಗೆ ಕೆಲಸ ಮಾಡುತ್ತೇವೆ ಎಂದರು.
ಹಿರಿಯೂರು ನೀರಾವರಿ ಯೋಜನೆಗಳಿಗೆ ಅನುದಾನ ನೀಡಿದ್ದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ. ಈಗಿನ ಸರ್ಕಾರ ನೀರಾವರಿಗೆ ಎಷ್ಟು ಅನುದಾನ ನೀಡಿದೆ ಎಂಬುದನ್ನು ಅಧಿವೇಶನದಲ್ಲಿ ಚರ್ಚಿಸೋಣ. ಕಾಡುಗೊಲ್ಲ ಸಮುದಾಯದ ಮೀಸಲಾತಿ ವಿಚಾರದಲ್ಲಿ ಈಗ ರಾಜಕೀಯ ಮಾಡಲಾಗುತ್ತಿದೆ. ಜನರು ಕಳೆದ ಚುನಾವಣೆಯಲ್ಲಿ ಮೋಸ ಹೋಗಿರಬಹುದು. ಆದರೆ ಪದೇಪದೇ ಮೋಸ ಹೋಗುವುದಿಲ್ಲ ಎಂದು ಹೇಳಿದರು.
ಬಸವಣ್ಣನವರ ಅವಹೇಳನ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ರವಿ ಹಂಜ್ ಸಮಾಜದ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಅಣ್ಣ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಕೇವಲ ವೀರಶೈವ ಸಮಾಜಕ್ಕೆ ಮಾತ್ರವಲ್ಲ, ಇಡೀ ನಾಡಿನ ಜನತೆಗೆ ಅಪಚಾರ ಮಾಡಿದ್ದಾರೆ. ಈ ಸಂಬಂಧ ಗೃಹ ಸಚಿವರಿಗೆ ಒತ್ತಾಯ ಮಾಡುತ್ತೇನೆ. ಕೇವಲ ಬಂಧಿಸಿ ಬಿಡುಗಡೆ ಮಾಡುವ ಕೆಲಸವಾಗಬಾರದು. ನಾಡಿನ ಯಾವುದೇ ದಾರ್ಶನಿಕರಿಗೆ ಅವಮಾನವಾಗದಂತೆ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೆಲೆ ಏರಿಕೆ ವಿರುದ್ಧ ಸದನದಲ್ಲಿ ಹೋರಾಟ
ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಗ್ಯಾರಂಟಿಗಳ ಹೆಸರಿನಲ್ಲಿ ಜನರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಯುತ್ತಿದೆ. ಬೆಲೆ ಏರಿಕೆ ವಿಚಾರವನ್ನು ಮುಂಬರುವ ಸದನದಲ್ಲಿ ಬಿಜೆಪಿ ಪ್ರಬಲವಾಗಿ ಪ್ರಸ್ತಾಪಿಸಿ ಹೋರಾಟ ನಡೆಸಲಿದೆ ಎಂದು ವಿಜಯೇಂದ್ರ ತಿಳಿಸಿದರು.
ಮಧು ಬಂಗಾರಪ್ಪ ವರ್ತನೆಗೆ ವಿಜಯೇಂದ್ರ ಖಂಡನೆ
ಕೊಪ್ಪಳದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವರ್ತನೆ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ. ಸಚಿವರ ವರ್ತನೆ ಹಾಗೆಯೇ ಇದೆ ಎಂದು ವ್ಯಂಗ್ಯವಾಡಿದರು.
ಸಚಿವರ ಉದ್ದಟತನದ ಹೇಳಿಕೆಗಳನ್ನು ರಾಜ್ಯಾದ್ಯಂತ ಖಂಡಿಸಲಾಗುತ್ತಿದೆ. ಅವರ ಅವಿವೇಕತನದ ನಡವಳಿಕೆಯನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಶಿಕ್ಷಣ ಸಚಿವರಿಗೆ ಗೌರವವಿದ್ದರೆ ತಮ್ಮ ಹೇಳಿಕೆ ಮತ್ತು ವರ್ತನೆಗಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R