
ಬೆಂಗಳೂರು, 22 ನವೆಂಬರ್ (ಹಿ.ಸ.):
ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು, ಕಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಖ್ಯಾತ ಕನ್ನಡ ನಟಿ ಕಾರುಣ್ಯ ರಾಮ್ ಅವರು ಕಾರ್ಯಕರ್ತೆಯರಿಗೆ ಬೆಂಬಲ ಸೂಚಿಸಿ ಮಾತನಾಡಿ, ನಿಮ್ಮ ಮನೆಯ ಮಗಳು ಮತ್ತು ತಂಗಿಯಾಗಿ ನಿಮ್ಮೊಂದಿಗೆ ಇರಲು ಬಂದಿದ್ದೇನೆ. ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು, ರಾಜ್ಯ ಸರ್ಕಾರ ಅವುಗಳನ್ನು ಈಡೇರಿಸಬೇಕು. ಬೇಡಿಕೆಗಳು ಈಡೇರುವವರೆಗೂ ನಾನು ಮಾತ್ರವಲ್ಲದೆ ನಾಡಿನ ಎಲ್ಲ ತಾಯಂದಿರು ನಿಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ. ಕೊನೆಯವರೆಗೂ ನಿಮ್ಮೊಂದಿಗೆ ಇರುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಹೋರಾಟ ನಿರತ ಕಾರ್ಯಕರ್ತೆಯರಿಗೆ ಅಕ್ಕಿ, ಬಿಸ್ಕತ್ ಹಾಗೂ ನೀರಿನ ಬಾಟಲಿಗಳನ್ನು ಕೊಡುಗೆಯಾಗಿ ನೀಡಿದರು.
ತುಮಕೂರಿನ ಗಣಿಬಾಧಿತ ಪರಿಸರ ಹಾಗೂ ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿಯ ಇಂದಿರಮ್ಮ ಮಾತನಾಡಿ, ಪರಿಸರದಲ್ಲಿರುವ ಪ್ರತಿಯೊಂದು ಜೀವಿಯೂ ಹೋರಾಟ ಮಾಡಿಯೇ ಬದುಕುತ್ತಿದೆ. ಮನುಷ್ಯ ಗೌರವಯುತ ಜೀವನ ನಡೆಸಲು ಹೋರಾಟ ಅನಿವಾರ್ಯವಾಗಿದೆ. ಆರೋಗ್ಯ ಇಲಾಖೆಯಲ್ಲಿ ಹಗಲಿರುಳು ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ಇಂದು ಗೌರವಯುತ ಜೀವನದಿಂದ ವಂಚಿತರಾಗಿದ್ದಾರೆ. ಹೀಗಾಗಿ ಅವರ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ರಾಜಕೀಯ ನಾಯಕರು ಆಶಾ ಕಾರ್ಯಕರ್ತೆಯರಿಗೆ ನೀಡುವ ಗೌರವಧನದಲ್ಲಿ ಒಂದೇ ಒಂದು ದಿನ ಜೀವನ ನಡೆಸಿ ತೋರಿಸಲಿ. ಅವರಿಗೆ ನೀಡಲಾಗುವ ಮಾಸಿಕ ಗೌರವಧನ ರಾಜಕಾರಣಿಗಳ ಒಂದು ದಿನದ ಖರ್ಚಿಗಿಂತಲೂ ಕಡಿಮೆಯಾಗಿದೆ. ಅವರ ಎಲ್ಲ ಬೇಡಿಕೆಗಳು ನ್ಯಾಯಯುತವಾಗಿದ್ದು, ನಾವು ನಿಮ್ಮೊಂದಿಗಿದ್ದೇವೆ ಎಂದರು.
ರೈಟ್ ಟು ಎಜುಕೇಶನ್ ಸಮಿತಿ ಸದಸ್ಯ ಯೋಗಾನಂದ ಮಾತನಾಡಿ, ಆಶಾ ಕಾರ್ಯಕರ್ತೆಯರ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದ್ದರೂ ಸರ್ಕಾರ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಜನರು ದೈಹಿಕವಾಗಿ ಹೋರಾಟದ ಸ್ಥಳದಲ್ಲಿ ಇಲ್ಲದಿದ್ದರೂ ಭಾವನಾತ್ಮಕವಾಗಿ ಕಾರ್ಯಕರ್ತೆಯರ ಬೆಂಬಲಕ್ಕೆ ನಿಂತಿದ್ದಾರೆ. ಎಲ್ಲ ಬೇಡಿಕೆಗಳು ಈಡೇರುವವರೆಗೂ ಹೋರಾಟ ಹಿಂತೆಗೆದುಕೊಳ್ಳಬಾರದು. ನಾಗರಿಕ ಸಮಾಜದ ಪ್ರತಿಯೊಬ್ಬರೂ ನಿಮ್ಮೊಂದಿಗಿದ್ದಾರೆ ಎಂದು ತಿಳಿಸಿದರು.
ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಅಧ್ಯಕ್ಷೆ ಜ್ಯೋತಿ ಅನಂತಸುಬ್ಬರಾವ್ ಮಾತನಾಡಿ, ಮಹಿಳೆಯರ ಪರ ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರನ್ನು ಬೀದಿಗೆ ಬಿಟ್ಟಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಮಹಿಳೆಯರನ್ನು ಪರಸ್ಪರ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಶಾಸಕರೂ ಧ್ವನಿ ಎತ್ತುವಂತೆ ಮಾಡಬೇಕು. ಹಣವಿಲ್ಲ ಎಂದು ಹೇಳುವ ಸರ್ಕಾರ ಶಾಸಕರ ವೇತನವನ್ನು ಮಾತ್ರ ರಾತ್ರೋರಾತ್ರಿ ಹೆಚ್ಚಿಸುತ್ತದೆ. ಭರವಸೆ ನೀಡುವುದೇ ಸರ್ಕಾರದ ಕೆಲಸವಾಗಿದೆ. ಈಗಾಗಲೇ ಭರವಸೆಗಳ ಮೇಲಿನ ನಂಬಿಕೆ ಕಳೆದುಹೋಗಿದೆ. ಮಹಿಳೆಯರು ಸಾಮಾನ್ಯವಾಗಿ ಬೀದಿಗಿಳಿಯುವುದಿಲ್ಲ. ಆದರೆ ಒಮ್ಮೆ ಹೋರಾಟಕ್ಕೆ ಇಳಿದರೆ ಬೇಡಿಕೆ ಈಡೇರುವವರೆಗೂ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.
ಎಐಟಿಯುಸಿ ರಾಜ್ಯಾಧ್ಯಕ್ಷ ಕಾ. ಬಾಬು ಮ್ಯಾಥ್ಯೂ ಮಾತನಾಡಿ, ದುಡಿಯುವ ವರ್ಗಕ್ಕೆ ಜೀವನ ನಡೆಸಲು ಯೋಗ್ಯವಾದ ವೇತನ ನೀಡದೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಆಶಾ ಕಾರ್ಯಕರ್ತೆಯರು ತಿಂಗಳಿಗೆ 15 ಸಾವಿರ ರೂ. ಗೌರವಧನ ನೀಡಬೇಕೆಂದು ಮಾಡುತ್ತಿರುವ ಬೇಡಿಕೆ ಅತ್ಯಂತ ನ್ಯಾಯಯುತವಾಗಿದೆ. ಬೇಡಿಕೆ ಈಡೇರುವವರೆಗೂ ಹೋರಾಟದ ಸ್ಥಳದಿಂದ ತೆರಳಬಾರದು ಎಂದು ಕರೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R