
ಬೆಂಗಳೂರು, 22 ನವೆಂಬರ್ (ಹಿ.ಸ.):
ಸರ್ಕಾರ ಈ ಹಿಂದೆ ನೀಡಿದ್ದ ಭರವಸೆಯಂತೆ ಆಶಾ ಕಾರ್ಯಕರ್ತೆಯರಿಗೆ ₹15 ಸಾವಿರ ಗೌರವಧನ ನೀಡಬೇಕು. ಈ ಬೇಡಿಕೆ ಈಡೇರಿಸುವಂತೆ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಆಶಾ ಕಾರ್ಯಕರ್ತೆಯರ ರಾಜ್ಯ ಉಪಾಧ್ಯಕ್ಷೆ ರಮಾ ಟಿ.ಸಿ., ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಮ್ಮೆಲೇ ಇಷ್ಟೊಂದು ದೊಡ್ಡ ಮೊತ್ತದ ಬೇಡಿಕೆ ಈಡೇರಿಸಲು ಸಮಯಾವಕಾಶ ಬೇಕು, ಆಶಾ ಕಾರ್ಯಕರ್ತೆಯರಿಗೆ ನೀಡಿದರೆ ಇತರ ವರ್ಗದವರೂ ಬೇಡಿಕೆ ಮುಂದಿಡುತ್ತಾರೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ವಿಷಾದನೀಯ ಎಂದು ತಿಳಿಸಿದ್ದಾರೆ.
ಕಳೆದ 2025ರ ಜನವರಿ 7ರಿಂದ 10ರವರೆಗೆ ನಡೆದ ನಾಲ್ಕು ದಿನಗಳ ಹೋರಾಟದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 10ರಂದು ಆಶಾ ಕಾರ್ಯಕರ್ತೆಯರಿಗೆ ₹10 ಸಾವಿರ ಗೌರವಧನ ನಿಗದಿಪಡಿಸುವ ಭರವಸೆ ನೀಡಿದ್ದರು.
ಮೈಸೂರಿನಲ್ಲಿ ಮಾಧ್ಯಮಗಳ ಎದುರೂ ಈ ಬಗ್ಗೆ ಘೋಷಿಸಿದ್ದರು. ಅಂದಿನ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಕೂಡ 'ಆಶಾ ಕೈ ಹಿಡಿದ ಕಾಂಗ್ರೆಸ್ ಸರ್ಕಾರ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ್ದರು. ಆದರೆ, ಸರ್ಕಾರ ನೀಡಿದ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದು ರಮಾ ಟಿ.ಸಿ. ಹೇಳಿದ್ದಾರೆ.
ಸಂಘಟನೆಯ ಒತ್ತಡಕ್ಕೆ ನಡೆಯುತ್ತಿರುವ ಹೋರಾಟವಲ್ಲ
ಯಾವುದೋ ಒಂದು ಸಂಘಟನೆಯ ಒತ್ತಡಕ್ಕೆ ಮಣಿದು ಆಶಾ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದಾರೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಯನ್ನು ಅವರು ತಳ್ಳಿಹಾಕಿದ್ದಾರೆ.
ರಾಜ್ಯದ 31 ಜಿಲ್ಲೆಗಳ ಪ್ರತಿನಿಧಿಗಳು ಹಾಗೂ ರಾಜ್ಯ ಸಮಿತಿ ಒಮ್ಮತದಿಂದ ಈ ಹೋರಾಟದ ನಿರ್ಧಾರ ಕೈಗೊಂಡಿದೆ.
ಒಂದೂವರೆ ವರ್ಷಗಳ ಕಾಲ ಸರ್ಕಾರದ ಭರವಸೆಯನ್ನು ನಂಬಿ ಕಾದರೂ ಬೇಡಿಕೆ ಈಡೇರದ ಕಾರಣ ಹೋರಾಟಕ್ಕೆ ಇಳಿಯಬೇಕಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. 2025ರ ಡಿಸೆಂಬರ್ 10ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು.
ಆಗಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆಶಾ ಕಾರ್ಯಕರ್ತೆಯರೊಂದಿಗೆ ಸಭೆ ನಡೆಸಿದ್ದರು. ಬಳಿಕ 2026ರ ಆಗಸ್ಟ್ 18ರಂದು ಈಗಿನ ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು.
ನವೆಂಬರ್ 2ರಂದು ಮುಖ್ಯಮಂತ್ರಿಗಳ ಕಚೇರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೂ ಮುಷ್ಕರದ ಮುನ್ಸೂಚನೆ ಪತ್ರ ನೀಡಲಾಗಿತ್ತು. ಇಷ್ಟೆಲ್ಲಾ ಪ್ರಕ್ರಿಯೆಗಳ ನಂತರವೂ ಸರ್ಕಾರ ಸಮಯಾವಕಾಶ ಕೇಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತರ ಕಾರ್ಮಿಕ ವರ್ಗಗಳ ಹೆಸರಿನಲ್ಲಿ ಅನ್ಯಾಯ ಬೇಡ
ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿದರೆ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು ಹಾಗೂ ಅತಿಥಿ ಶಿಕ್ಷಕರೂ ಬೀದಿಗಿಳಿಯುತ್ತಾರೆ ಎಂಬ ಸರ್ಕಾರದ ವಾದ ನ್ಯಾಯಸಮ್ಮತವಲ್ಲ.
ಇತರ ಕಾರ್ಮಿಕ ವರ್ಗಗಳಿಗೂ ಸರ್ಕಾರ ಅವರ ಹಕ್ಕುಗಳನ್ನು ನೀಡಲಿ. ಆದರೆ, ಅವರ ಬೇಡಿಕೆಗಳನ್ನು ನೆಪವಾಗಿಟ್ಟುಕೊಂಡು ಆಶಾ ಕಾರ್ಯಕರ್ತೆಯರಿಗೆ ಅನ್ಯಾಯ ಮಾಡುವುದು ಸರಿಯಲ್ಲ.
ಕಳೆದ ಬಜೆಟ್ನಲ್ಲಿ ಇತರ ಕೆಲವು ವರ್ಗಗಳಿಗೆ ಕನಿಷ್ಠ ₹1 ಸಾವಿರ ಹೆಚ್ಚಳ ಮಾಡಲಾಗಿದ್ದರೂ, ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ನೀಡಿದ್ದ ಭರವಸೆಯಂತೆ ₹10 ಸಾವಿರ ಗೌರವಧನ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಪಕ್ಷಾತೀತ ಹೋರಾಟ
ಆಶಾ ಕಾರ್ಯಕರ್ತೆಯರ ಹೋರಾಟ ಸಂಪೂರ್ಣ ಪಕ್ಷಾತೀತವಾಗಿದ್ದು, ಇದಕ್ಕೆ ರಾಜಕೀಯ ಬಣ್ಣ ಬಳಿಯಬಾರದು ಎಂದು ರಮಾ ಟಿ.ಸಿ. ಮನವಿ ಮಾಡಿದ್ದಾರೆ. ವಿರೋಧ ಪಕ್ಷಗಳು ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳ ನಾಯಕರನ್ನು ಹೋರಾಟದ ವೇದಿಕೆಯಿಂದ ದೂರವಿಡಲಾಗಿದೆ.
ರಾಜಕೀಯ ನಾಯಕರು ಪ್ರತಿಭಟನಾ ಸ್ಥಳಕ್ಕೆ ಬಂದು ಆಹಾರ, ನೀರು, ಸ್ವೆಟರ್ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲು ಮುಂದಾದಾಗಲೂ ಹೊರಗಿನಿಂದಲೇ ಬೆಂಬಲ ನೀಡುವಂತೆ ತಿಳಿಸಿ ನಯವಾಗಿ ನಿರಾಕರಿಸಲಾಗಿದೆ.
ಸಾಮಾನ್ಯ ಜನರು, ನೌಕರರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ಕಳೆದ ವರ್ಷ ಆಶಾ ಕಾರ್ಯಕರ್ತೆಯರಿಗೆ ₹1,500 ಗೌರವಧನ ಹೆಚ್ಚಿಸುವುದಾಗಿ ಘೋಷಿಸಿ ಅದನ್ನೂ ಈಡೇರಿಸಿಲ್ಲ. ಈ ವಿಚಾರವನ್ನೂ ಆಶಾ ಕಾರ್ಯಕರ್ತೆಯರು ವಿರೋಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಸರ್ಕಾರ ಇನ್ನು ಕಾಲಹರಣ ಮಾಡದೆ ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸಬೇಕು. ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ರಮಾ ಟಿ.ಸಿ. ಎಚ್ಚರಿಕೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R