ಅರುಣಾಚಲ ಪ್ರದೇಶ ಗ್ರಾಮೀಣ ಸಮೃದ್ಧಿಯ ಹೊಸ ಯುಗದತ್ತ ಮುನ್ನಡೆ: ಅಮಿತ್ ಶಾ
ಇಟಾನಗರ, 22 ನವೆಂಬರ್ (ಹಿ.ಸ.): ಅರುಣಾಚಲ ಪ್ರದೇಶ ಗ್ರಾಮೀಣ ಸಮೃದ್ಧಿಯ ಹೊಸ ಯುಗದತ್ತ ಮುನ್ನಡೆಯುತ್ತಿದೆ. ಸಹಕಾರ ಕ್ಷೇತ್ರವನ್ನು ಬಲಪಡಿಸುವುದರಿಂದ ರಾಜ್ಯದ ರೈತರು, ಯುವಕರು ಮತ್ತು ಮಹಿಳೆಯರಿಗೆ ಆರ್ಥಿಕ ಪ್ರಗತಿ ಹಾಗೂ ಉದ್ಯೋಗದ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿ
अमित शाह (फाइल फाेटाे)


ಇಟಾನಗರ, 22 ನವೆಂಬರ್ (ಹಿ.ಸ.):

ಅರುಣಾಚಲ ಪ್ರದೇಶ ಗ್ರಾಮೀಣ ಸಮೃದ್ಧಿಯ ಹೊಸ ಯುಗದತ್ತ ಮುನ್ನಡೆಯುತ್ತಿದೆ. ಸಹಕಾರ ಕ್ಷೇತ್ರವನ್ನು ಬಲಪಡಿಸುವುದರಿಂದ ರಾಜ್ಯದ ರೈತರು, ಯುವಕರು ಮತ್ತು ಮಹಿಳೆಯರಿಗೆ ಆರ್ಥಿಕ ಪ್ರಗತಿ ಹಾಗೂ ಉದ್ಯೋಗದ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು.

ಇಟಾನಗರದ ದೋರ್ಜಿ ಖಂಡು ಸಮಾವೇಶ ಭವನದಲ್ಲಿ ಭಾನುವಾರ ನಡೆದ 'ಸಹಕಾರ ಸಮಾರಂಭ'ದಲ್ಲಿ ಮಾತನಾಡಿದ ಅವರು, ಅರುಣಾಚಲ ಪ್ರದೇಶದ ಅಭಿವೃದ್ಧಿಗಾಗಿ 'ಸಹಕಾರ ದೃಷ್ಟಿ ದಾಖಲಾತಿ 2047' ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಒಟ್ಟು 5,610 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಸಹಕಾರ ಸಂಸ್ಥೆಗಳು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದರ ಜತೆಗೆ ಸ್ಥಳೀಯ ಮಟ್ಟದಲ್ಲಿ ಸ್ವಾವಲಂಬನೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಗ್ರಾಮೀಣ ಪ್ರದೇಶಗಳಲ್ಲಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಹಕಾರ ಕ್ಷೇತ್ರದಿಂದ ಸಾಧ್ಯವಿದೆ. ಇದರಿಂದ ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯಲಿದ್ದು, ಯುವಕರಿಗೆ ಸ್ವಯಂ ಉದ್ಯೋಗದ ಅವಕಾಶಗಳು ಲಭ್ಯವಾಗಲಿವೆ. ಮಹಿಳೆಯರನ್ನು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸಹಕಾರ ಸಂಸ್ಥೆಗಳ ವಿಸ್ತರಣೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಲಿವೆ. ಅಭಿವೃದ್ಧಿಯ ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಲಿದೆ ಎಂದು ಹೇಳಿದರು.

5,610 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಸಮಾರಂಭದಲ್ಲಿ ಆರಂಭಿಸಲಾದ 5,610 ಕೋಟಿ ರೂ. ಮೊತ್ತದ ಯೋಜನೆಗಳಲ್ಲಿ 'ಮಿಷನ್ ಶಿಕ್ಷಿತ ಅರುಣಾಚಲ-ಹಂತ 2', ವಿದ್ಯುತ್ ಕ್ಷೇತ್ರದ ಅಭಿವೃದ್ಧಿ, ಗ್ರಾಮೀಣ ರಸ್ತೆ ಸಂಪರ್ಕ ಬಲಪಡಿಸುವುದು ಮತ್ತು ಗಡಿ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳು ಸೇರಿವೆ.

ಇದಲ್ಲದೆ, ರಾಜ್ಯದ 11 ಗಡಿ ಜಿಲ್ಲೆಗಳಲ್ಲಿ 'ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮ'ದಡಿ 199 ಯೋಜನೆಗಳಿಗೆ ಚಾಲನೆ ನೀಡಲಾಯಿತು.

ಗಡಿ ಗ್ರಾಮಗಳಲ್ಲಿ ಮೂಲಸೌಕರ್ಯಗಳನ್ನು ವಿಸ್ತರಿಸುವುದು ಹಾಗೂ ಅಲ್ಲಿನ ಜನರ ಜೀವನಮಟ್ಟ ಸುಧಾರಿಸುವುದು ಈ ಯೋಜನೆಗಳ ಪ್ರಮುಖ ಉದ್ದೇಶವಾಗಿದೆ. ಗ್ರಾಮೀಣ ರಸ್ತೆಗಳು ಮತ್ತು ವಿದ್ಯುತ್ ಸೌಲಭ್ಯಗಳ ಅಭಿವೃದ್ಧಿಯಿಂದ ದೂರದ ಪ್ರದೇಶಗಳನ್ನು ಮುಖ್ಯವಾಹಿನಿಗೆ ಸಂಪರ್ಕಿಸಲು ನೆರವಾಗಲಿದೆ.

'ಮಿಷನ್ ಶಿಕ್ಷಿತ ಅರುಣಾಚಲ-ಹಂತ 2' ಮೂಲಕ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯುತ್ ಅಭಿವೃದ್ಧಿ ಯೋಜನೆಗಳಿಂದ ಇಂಧನ ಸೌಲಭ್ಯಗಳ ವಿಸ್ತರಣೆ ಹಾಗೂ ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಸುಧಾರಣೆಯಾಗುವ ನಿರೀಕ್ಷೆಯಿದೆ.

ನಾಲ್ಕು ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ

ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ನಾಲ್ಕು ಸಹಕಾರ ಸಂಘಗಳಿಗೆ ಅಮಿತ್ ಶಾ ಪ್ರಶಸ್ತಿ ನೀಡಿ ಗೌರವಿಸಿದರು.

ನಾಮ್ಸಾಯಿ ಡೈರಿ ಸಹಕಾರ ಸಂಘ, ಲೋವರ್ ಸುಬನ್ಸಿರಿ ಮೀನುಗಾರರ ಸಹಕಾರ ಸಂಘ, ಕೆಮ್ಲಿ ನೇಕಾರರ ಕೈಮಗ್ಗ, ಜವಳಿ ಮತ್ತು ನೇಕಾರರ ಸಹಕಾರ ಸಂಘ ಹಾಗೂ ತವಾಂಗ್‌ನ ಜಾಂಗ್ ಲ್ಯಾಂಪ್ಸ್ ಸಂಘಗಳು ಪ್ರಶಸ್ತಿ ಪಡೆದವು.

ಈ ಸಂಘಗಳು ಹೈನುಗಾರಿಕೆ, ಮೀನುಗಾರಿಕೆ, ಕೈಮಗ್ಗ ಮತ್ತು ಜವಳಿ ಉತ್ಪಾದನೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಹಕಾರ ಚಟುವಟಿಕೆಗಳ ಮೂಲಕ ಸ್ಥಳೀಯ ಉದ್ಯೋಗ ಮತ್ತು ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಇವು ಮಾದರಿಯಾಗಿವೆ.

ಅರುಣಾಚಲ ಪ್ರದೇಶದಲ್ಲಿ ಹೈನುಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳ ಸಹಕಾರ ಸಂಘಗಳು ರೈತರು ಹಾಗೂ ಸಣ್ಣ ಉತ್ಪಾದಕರಿಗೆ ಹೆಚ್ಚಿನ ನೆರವು ನೀಡುತ್ತಿವೆ. ಕೈಮಗ್ಗ ಮತ್ತು ನೇಕಾರರ ಸಂಘಗಳು ಸ್ಥಳೀಯ ಕಲೆ, ಸಾಂಪ್ರದಾಯಿಕ ಕೌಶಲ ಮತ್ತು ಕರಕುಶಲ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನೆರವಾಗುತ್ತಿವೆ. ಇಂತಹ ಪ್ರಯತ್ನಗಳಿಂದ ಗ್ರಾಮೀಣ ಸಮುದಾಯಗಳ ಆದಾಯ ಹೆಚ್ಚಿಸುವುದರ ಜತೆಗೆ ಸ್ಥಳೀಯ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಮತ್ತು ಗುರುತು ದೊರೆಯಲಿದೆ.

ಮೂರು ದಿನಗಳ ಅರುಣಾಚಲ ಪ್ರದೇಶ ಪ್ರವಾಸ

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ಶುಕ್ರವಾರ ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರಕ್ಕೆ ಆಗಮಿಸಿದ್ದರು. ಮೂರು ದಿನಗಳ ಪ್ರವಾಸದ ಭಾಗವಾಗಿ ನವೆಂಬರ್ 21ರಂದು ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಪರಿಶೀಲನೆ ನಡೆಸಿದ್ದರು.

ಭಾನುವಾರ ಸಹಕಾರ ಸಮಾರಂಭದಲ್ಲಿ ಪಾಲ್ಗೊಂಡು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವುದರ ಜತೆಗೆ ಸಹಕಾರ ಕ್ಷೇತ್ರದ ಭವಿಷ್ಯದ ರೂಪುರೇಷೆಗಳನ್ನು ಪ್ರಕಟಿಸಿದರು.

ಕಾರ್ಯಕ್ರಮದಲ್ಲಿ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು, ಕೇಂದ್ರ ಸಚಿವ ಕಿರಣ್ ರಿಜಿಜು, ಉಪಮುಖ್ಯಮಂತ್ರಿ ಚೌನಾ ಮೇನ್, ಸಂಸದ ತಾಪಿರ್ ಗಾವೊ, ತೈ ತಗಾಕ್ ಸೇರಿದಂತೆ ರಾಜ್ಯ ಸಚಿವ ಸಂಪುಟದ ಸದಸ್ಯರು, ಶಾಸಕರು, ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಅಮಿತ್ ಶಾ ಅವರ ಈ ಪ್ರವಾಸವು ಅರುಣಾಚಲ ಪ್ರದೇಶದ ಅಭಿವೃದ್ಧಿ, ಗ್ರಾಮೀಣ ಆರ್ಥಿಕತೆ ಮತ್ತು ಗಡಿ ಪ್ರದೇಶಗಳ ಸಬಲೀಕರಣದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. 'ಸಹಕಾರ ದೃಷ್ಟಿ ದಾಖಲಾತಿ 2047' ಮೂಲಕ ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ಸಹಕಾರ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವುದರ ಜತೆಗೆ ರೈತರು, ಮಹಿಳೆಯರು ಮತ್ತು ಯುವಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.

-------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande