
ಬೆಂಗಳೂರು, 20 ನವೆಂಬರ್ (ಹಿ.ಸ.):
ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು, ಸರ್ಕಾರದ ಮನವೊಲಿಕೆ ಪ್ರಯತ್ನಗಳಿಗೂ ಜಗ್ಗದೆ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ.
ಸಂಸದರ ವಾಹನ ಖರೀದಿಗೆ ಸರ್ಕಾರದ ಬಳಿ ಹಣವಿದೆ. ಆದರೆ, ಜನರ ಆರೋಗ್ಯ ಸೇವೆಯಲ್ಲಿ ಹಗಲಿರುಳು ದುಡಿಯುವ ನಮಗೆ ನ್ಯಾಯಯುತ ಗೌರವಧನ ನೀಡಲು ಹಣವಿಲ್ಲವೇ? ಎಂದು ಆಶಾ ಕಾರ್ಯಕರ್ತೆಯರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಲಿಖಿತ ಭರವಸೆ ನೀಡುವಂತೆ ಆಗ್ರಹ
ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಯೆಂದರೆ ಪ್ರಸ್ತುತ ನೀಡಲಾಗುತ್ತಿರುವ ನಿಗದಿತ ಮಾಸಿಕ ಗೌರವಧನವನ್ನು 5 ಸಾವಿರ ರೂ.ನಿಂದ 15 ಸಾವಿರ ರೂ.ಗೆ ಹೆಚ್ಚಿಸಬೇಕು ಎಂಬುದಾಗಿದೆ.
ಇದರೊಂದಿಗೆ 2024-25ನೇ ಸಾಲಿನ ಬಾಕಿ ಪ್ರೋತ್ಸಾಹಧನ 1,500 ರೂ. ಪಾವತಿಸಬೇಕು, ಮೊಬೈಲ್ ಫೋನ್ ಹಾಗೂ ರೀಚಾರ್ಜ್ ಸೌಲಭ್ಯ ಕಲ್ಪಿಸಬೇಕು, ಆರು ತಿಂಗಳ ವೇತನ ಸಹಿತ ಹೆರಿಗೆ ರಜೆ ನೀಡಬೇಕು ಮತ್ತು ನಿವೃತ್ತಿ ಸೌಲಭ್ಯವನ್ನು 5 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಿಎಂ ಮನವಿಗೂ ಜಗ್ಗದ ಕಾರ್ಯಕರ್ತೆಯರು
ಗುರುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಶಾ ಕಾರ್ಯಕರ್ತೆಯರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದರು.
ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಸಚಿವರು ಹಾಗೂ ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಆದರೆ, ಈ ಹಿಂದೆಯೂ ಹಲವು ಬಾರಿ ಭರವಸೆ ನೀಡಿದ್ದರೂ ಬೇಡಿಕೆಗಳು ಈಡೇರಿಲ್ಲ. ಹೀಗಾಗಿ ಈ ಬಾರಿ ಕೇವಲ ಮೌಖಿಕ ಭರವಸೆಗಳಿಗೆ ಮಣಿಯುವುದಿಲ್ಲ.
ಗೌರವಧನ ಹೆಚ್ಚಳ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಅಧಿಕೃತ ಲಿಖಿತ ಆದೇಶ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸಂಘಟನೆಯ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸಾವಿರಾರು ಕಾರ್ಯಕರ್ತೆಯರು ಮಕ್ಕಳೊಂದಿಗೆ ಫ್ರೀಡಂ ಪಾರ್ಕ್ನಲ್ಲೇ ಹಗಲು-ರಾತ್ರಿ ಧರಣಿ ನಡೆಸುತ್ತಿದ್ದಾರೆ. ಪ್ರತಿಭಟನೆಯ ವೇಳೆ ಕೆಲ ಕಾರ್ಯಕರ್ತೆಯರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆಯೂ ನಡೆದಿದೆ.
ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಯ ಪ್ರಮುಖ ಕೊಂಡಿಯಾಗಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಸದ್ಯಕ್ಕೆ ಸರ್ಕಾರದ ಮನವೊಲಿಕೆ ಪ್ರಯತ್ನ ವಿಫಲವಾಗಿದ್ದು, ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರ ಹೋರಾಟ ಮುಂದುವರಿದಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R