ಬೆಂಗಳೂರಿನಲ್ಲಿ ಮೂರು ದಿನಗಳ ವೀರಲೋಕ ಪುಸ್ತಕ ಸಂತೆ ಆರಂಭ
ರಾಜ್ಯಪಾಲೆ ಡಾ. ಸುಧಾ ಯಾದವ್ರಿಂದ ಚಾಲನೆ; ಐದು ಹೊಸ ಕೃತಿಗಳ ಬಿಡುಗಡೆ, 13ಕ್ಕೂ ಹೆಚ್ಚು ಸಾಹಿತ್ಯ ಸಂವಾದ
Veeraloka-Book-Fair-Begins-in-Bengaluru-for-Three-Days


ಬೆಂಗಳೂರು, 20 ನವೆಂಬರ್ (ಹಿ.ಸ.):

ಕನ್ನಡ ಸಾಹಿತ್ಯ ಮತ್ತು ಪುಸ್ತಕ ಪ್ರೇಮಿಗಳಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ಬೆಂಗಳೂರಿನ ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ (ಶಾಲಿನಿ ಮೈದಾನ) ಇಂದಿನಿಂದ ಮೂರು ದಿನಗಳ ಕಾಲ ‘ವೀರಲೋಕ ಪುಸ್ತಕ ಸಂತೆ-6’ ಆರಂಭಗೊಂಡಿದೆ.

ವೀರಲೋಕ ಬುಕ್ಸ್ ಸಂಸ್ಥೆ ಆಯೋಜಿಸಿರುವ ಈ ಸಾಹಿತ್ಯ ಹಬ್ಬಕ್ಕೆ ರಾಜ್ಯಪಾಲೆ ಡಾ. ಸುಧಾ ಯಾದವ್ ಚಾಲನೆ ನೀಡಿದರು. ನವೆಂಬರ್ 20ರಿಂದ 22ರವರೆಗೆ ನಡೆಯಲಿರುವ ಪುಸ್ತಕ ಸಂತೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲೆ ಡಾ. ಸುಧಾ ಯಾದವ್, “ಪುಸ್ತಕಗಳು ಕೇವಲ ಜ್ಞಾನ ಸಂಪಾದನೆಯ ಮಾಧ್ಯಮಗಳಲ್ಲ. ಅವು ನಮ್ಮ ಆಲೋಚನೆಗಳಿಗೆ ದಿಕ್ಕು ನೀಡುತ್ತವೆ,

ಮಾನವೀಯ ಸಂವೇದನೆಗಳನ್ನು ಶ್ರೀಮಂತಗೊಳಿಸುತ್ತವೆ ಹಾಗೂ ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುತ್ತವೆ. ಪ್ರತಿಯೊಬ್ಬರಲ್ಲೂ ಓದುವ ಹವ್ಯಾಸ ಬೆಳೆಸುವ ಅಗತ್ಯವಿದೆ” ಎಂದು ಹೇಳಿದರು.

ಕನ್ನಡ ಸಾಹಿತ್ಯಕ್ಕೆ ಸಾವಿರಕ್ಕೂ ಹೆಚ್ಚು ವರ್ಷಗಳ ಶ್ರೀಮಂತ ಇತಿಹಾಸವಿದೆ. ಕವಿರಾಜಮಾರ್ಗ, ವಚನ ಸಾಹಿತ್ಯದಿಂದ ಹಿಡಿದು ಪಂಪ, ರನ್ನ, ಪೊನ್ನ ಹಾಗೂ ಆಧುನಿಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳವರೆಗೆ ಕನ್ನಡ ಸಾಹಿತ್ಯ ಸಮಾಜಕ್ಕೆ ಹೊಸ ಆಲೋಚನೆ ಮತ್ತು ಮಾರ್ಗದರ್ಶನ ನೀಡುತ್ತಾ ಬಂದಿದೆ ಎಂದು ಅವರು ತಿಳಿಸಿದರು.

ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಬಳಕೆ ಹೆಚ್ಚಾಗಿರುವ ಸಂದರ್ಭದಲ್ಲಿ ಪುಸ್ತಕಗಳತ್ತ ಜನರ ಆಸಕ್ತಿ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ. ಡಿಜಿಟಲ್ ವೇದಿಕೆಗಳು ಮಾಹಿತಿಯನ್ನು ನೀಡಬಹುದು.

ಆದರೆ ಪುಸ್ತಕಗಳು ಆ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು, ಚಿಂತನೆ ನಡೆಸಲು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳಲ್ಲಿ ಬಾಲ್ಯದಿಂದಲೇ ಓದುವ ಅಭ್ಯಾಸ ಬೆಳೆಸಬೇಕು. ಪೋಷಕರು ಮತ್ತು ಶಿಕ್ಷಕರು ಈ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು. ಪ್ರತಿಯೊಂದು ಮನೆಯಲ್ಲೂ ಒಂದು ಪುಟ್ಟ ಗ್ರಂಥಾಲಯ ಇರಬೇಕು.

ಪಠ್ಯಪುಸ್ತಕಗಳ ಜೊತೆಗೆ ಸಾಹಿತ್ಯ, ಇತಿಹಾಸ, ವಿಜ್ಞಾನ ಮತ್ತು ಮಹನೀಯರ ಜೀವನ ಚರಿತ್ರೆಗಳನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದು ಕರೆ ನೀಡಿದರು.

ಕಳೆದ ನಾಲ್ಕು ವರ್ಷಗಳಲ್ಲಿ ವೀರಲೋಕ ಪ್ರಕಾಶನ 200ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದು, ಹಿಂದಿನ ಐದು ಪುಸ್ತಕ ಸಂತೆಗಳ ಮೂಲಕ 10 ಲಕ್ಷಕ್ಕೂ ಹೆಚ್ಚು ಓದುಗರನ್ನು ತಲುಪಿದೆ. ಮೂರು ಲಕ್ಷಕ್ಕೂ ಅಧಿಕ ಪುಸ್ತಕಗಳ ಮಾರಾಟವಾಗಿರುವುದು ಸಂತಸದ ಸಂಗತಿ ಎಂದು ರಾಜ್ಯಪಾಲರು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ವಹಿಸಿದ್ದರು. ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು.

ಹಿರಿಯ ಸಾಹಿತಿ ಎಸ್. ದಿವಾಕರ್ ಅವರಿಗೆ ‘ವೀರಲೋಕ ಪುಸ್ತಕ ಸಂತೆ ಗೌರವ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೀರಲೋಕ ಪ್ರಕಾಶನದ ಐದು ನೂತನ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಮೂರು ದಿನಗಳ ಸಂತೆಯಲ್ಲಿ 13ಕ್ಕೂ ಹೆಚ್ಚು ಸಾಹಿತ್ಯ ಸಂವಾದಗಳು ನಡೆಯಲಿವೆ. ಮಕ್ಕಳ ಸಾಹಿತ್ಯ, ಮಹಿಳಾ ಬರಹ, ವಿಜ್ಞಾನ, ಹಾಸ್ಯ, ರಾಜಕೀಯ ಮತ್ತು ಸಾಹಿತ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಹಿರಿಯ ಸಾಹಿತಿಗಳು ಹಾಗೂ ಚಿಂತಕರು ವಿಚಾರ ವಿನಿಮಯ ನಡೆಸಲಿದ್ದಾರೆ.

ಸಂಜೆ ವೇಳೆ ಗಝಲ್ ಗಾಯನ, ಜಾನಪದ ಸಂಗೀತ, ರಂಗಗೀತೆಗಳು ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ನವೆಂಬರ್ 22ರಂದು ನಟಿ ರಂಜನಿ ರಾಘವನ್ ಅವರ ‘ನೇಚರ್ ಆರ್ಕೆಸ್ಟ್ರಾ’ ಕೃತಿ ಬಿಡುಗಡೆ ಹಾಗೂ ಗೋಥೆ ಸಂಸ್ಥೆಯ ಸಹಯೋಗದಲ್ಲಿ ಕನ್ನಡಕ್ಕೆ ಅನುವಾದಗೊಂಡ ಮೂರು ಪುಸ್ತಕಗಳ ಲೋಕಾರ್ಪಣೆ ನಡೆಯಲಿದೆ.

ಅಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ‘ಜೀವರತಿ’ ಕಾದಂಬರಿಯ ಲೇಖಕಿ ಜ.ನಾ. ತೇಜಶ್ರೀ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande