ನವಜಾತ ಶಿಶುಗಳ ಆರೈಕೆಗೆ ಗಮನ ನೀಡಿ : ಶಿವಾನಂದ ವಿ.ಪಿ.
ಕಂಪ್ಲಿ, 20 ನವೆಂಬರ್ (ಹಿ.ಸ.) ನವಜಾತ ಶಿಶುಗಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಜನನದ ಮೊದಲ 28 ದಿನಗಳು ಅತ್ಯಂತ ಮಹತ್ವದಾಗಿದ್ದು, ತಾಯಂದಿರು ಮಕ್ಕಳ ಆರೈಕೆಗೆ ವಿಶೇಷ ಗಮನಹರಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಅವರು ತಿಳಿಸಿದ್ದಾರೆ. ಜಿಲ್ಲಾ ಆಡಳಿತ, ಜಿಲ್ಲಾ
ನವಜಾತ ಶಿಶುಗಳ ಆರೈಕೆಗೆ ಗಮನ ನೀಡಿ : ಶಿವಾನಂದ ವಿ.ಪಿ.


ಕಂಪ್ಲಿ, 20 ನವೆಂಬರ್ (ಹಿ.ಸ.)

ನವಜಾತ ಶಿಶುಗಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಜನನದ ಮೊದಲ 28 ದಿನಗಳು ಅತ್ಯಂತ ಮಹತ್ವದಾಗಿದ್ದು, ತಾಯಂದಿರು ಮಕ್ಕಳ ಆರೈಕೆಗೆ ವಿಶೇಷ ಗಮನಹರಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಅವರು ತಿಳಿಸಿದ್ದಾರೆ.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಜಿಲ್ಲಾ ಆರ್ಸಿಎಚ್ ವಿಭಾಗ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಂಪ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಂಪ್ಲಿ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕಂಪ್ಲಿಯ 4ನೇ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ನವಜಾತ ಶಿಶು ಆರೈಕೆ ಸಪ್ತಾಹದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿಯ ಮೊದಲ ಹಾಲಾದ ಕೊಲೊಸ್ಟ್ರಮ್ ನೀಡಬೇಕು. ಆರು ತಿಂಗಳವರೆಗೆ ಕೇವಲ ತಾಯಿಯ ಎದೆಹಾಲನ್ನೇ ನೀಡಬೇಕು. ಮಗುವಿನ ಹಸಿವಿಗೆ ಅನುಗುಣವಾಗಿ ದಿನಕ್ಕೆ 10 ರಿಂದ 12 ಬಾರಿ ಹಾಲುಣಿಸಬೇಕು. ಮಗುವಿಗೆ ಜನಿಸಿದ ತಕ್ಷಣ ಸ್ನಾನ ಮಾಡಿಸದೆ, ತಾಯಿಯ ಎದೆಯ ಮೇಲೆ ಚರ್ಮದಿಂದ ಚರ್ಮಕ್ಕೆ ತಾಗುವಂತೆ ಇರಿಸಿ ಕಾಂಗರೂ ಆರೈಕೆ ಮಾಡಬೇಕು. ಮಗುವಿನ ದೇಹದ ಉಷ್ಣತೆ ಕಾಪಾಡಲು ಸ್ವಚ್ಛವಾದ ಬಟ್ಟೆಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.

ನವಜಾತ ಶಿಶು ಸರಿಯಾಗಿ ಹಾಲು ಕುಡಿಯದಿರುವುದು, ದೇಹ ತಣ್ಣಗಾಗುವುದು ಅಥವಾ ವಿಪರೀತ ಜ್ವರ ಕಾಣಿಸಿಕೊಳ್ಳುವುದು, ಉಸಿರಾಟದ ತೊಂದರೆ, ಚರ್ಮ ಅಥವಾ ಕಣ್ಣು ಹಳದಿಯಾಗುವುದು, ನಿರಂತರ ಅಳುವುದು, ಮಂಕಾಗಿರುವುದು ಮೂತ್ರ ವಿಸರ್ಜನೆ ಮಾಡದಿರುವಂತಹ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ತಾಯಂದಿರಿಗೆ ಎಚ್ಚರಿಕೆ ನೀಡಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ ಅವರು, ಕ್ಷಯರೋಗ ಮತ್ತು ಕುಷ್ಠರೋಗ ನಿರ್ಮೂಲನೆ, ಹಾವು ಕಡಿತ ಹಾಗೂ ನಾಯಿ ಕಡಿತ ನಿಯಂತ್ರಣದ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ, ಮೆದುಳು ಜ್ವರ ಹಾಗೂ ಆನೆಕಾಲು ರೋಗಗಳ ಬಗ್ಗೆ ಜಾಗೃತಿ ಮೂಡಿಸಿದರು.

ಪಿಎಚ್ಒ ಮಹಾಲಕ್ಷ್ಮೀ ಅವರು ಲಸಿಕಾ ಕಾರ್ಯಕ್ರಮದ ಮಹತ್ವ ಹಾಗೂ ಮಕ್ಕಳ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡುವ ವಿಧಾನಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಕಿಶೋರಿಯರು, ಗರ್ಭಿಣಿಯರು, ಬಾಣಂತಿಯರು, ತಾಯಂದಿರು ಹಾಗೂ ಮಕ್ಕಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande