ಡಾ. ಜಿ. ರಾಮಕೃಷ್ಣ ಅವರಿಗೆ ನಾಡೋಜ ಗೌರವ ಪ್ರದಾನ
ಬೆಂಗಳೂರು, 20 ನವೆಂಬರ್ (ಹಿ.ಸ.) ಹಂಪಿ ಕನ್ನಡ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಘೋಷಿಸಲಾಗಿದ್ದ ಪ್ರತಿಷ್ಠಿತ ನಾಡೋಜ ಪದವಿಯನ್ನು ಹಿರಿಯ ವಿದ್ವಾಂಸ ಡಾ. ಜಿ. ರಾಮಕೃಷ್ಣ ಅವರಿಗೆ ಶುಕ್ರವಾರ ಬೆಂಗಳೂರಿನ ಅವರ ನಿವಾಸದಲ್ಲಿ ಪ್ರದಾನ ಮಾಡಲಾಯಿತು. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪ
ಬೆಂಗಳೂರು


ಬೆಂಗಳೂರು, 20 ನವೆಂಬರ್ (ಹಿ.ಸ.)

ಹಂಪಿ ಕನ್ನಡ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಘೋಷಿಸಲಾಗಿದ್ದ ಪ್ರತಿಷ್ಠಿತ ನಾಡೋಜ ಪದವಿಯನ್ನು ಹಿರಿಯ ವಿದ್ವಾಂಸ ಡಾ. ಜಿ. ರಾಮಕೃಷ್ಣ ಅವರಿಗೆ ಶುಕ್ರವಾರ ಬೆಂಗಳೂರಿನ ಅವರ ನಿವಾಸದಲ್ಲಿ ಪ್ರದಾನ ಮಾಡಲಾಯಿತು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಪದವಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, 34ನೇ ನುಡಿಹಬ್ಬದಲ್ಲಿ ಡಾ. ಜಿ. ರಾಮಕೃಷ್ಣ ಅವರಿಗೆ ನಾಡೋಜ ಪದವಿ ಘೋಷಿಸಲಾಗಿತ್ತು. ಆದರೆ ಅಂದು ಅವರು ಪದವಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬೆಂಗಳೂರಿನ ಅವರ ನಿವಾಸದಲ್ಲಿಯೇ ಶುಕ್ರವಾರ ಪದವಿ ಪ್ರದಾನ ಮಾಡಲಾಗಿದೆ ಎಂದು ತಿಳಿಸಿದರು.

ವಿಜ್ಞಾನ, ತಂತ್ರಜ್ಞಾನ, ಕನ್ನಡ ಸಾಹಿತ್ಯ, ಭಾರತೀಯ ಸಾಹಿತ್ಯ, ಮಾರ್ಕ್ಸ್‌ವಾದ, ಸಾಂಸ್ಕೃತಿಕ ವಿಮರ್ಶೆ ಹಾಗೂ ಸಾಮಾಜಿಕ ಚಳವಳಿಗಳ ಕ್ಷೇತ್ರಗಳಲ್ಲಿ ಡಾ. ಜಿ. ರಾಮಕೃಷ್ಣ ಅವರು ಸಲ್ಲಿಸಿರುವ ಮೌಲಿಕ ಸೇವೆಯನ್ನು ಗುರುತಿಸಿ ವಿಶ್ವವಿದ್ಯಾಲಯವು ಈ ಪ್ರತಿಷ್ಠಿತ ಗೌರವಕ್ಕೆ ಆಯ್ಕೆ ಮಾಡಿತ್ತು ಎಂದರು.

ನಾಡೋಜ ಪದವಿ ಸ್ವೀಕರಿಸಿದ ಡಾ. ಜಿ. ರಾಮಕೃಷ್ಣ ಅವರು ಸಂತಸ ವ್ಯಕ್ತಪಡಿಸಿ, ಕನ್ನಡ ವಿಶ್ವವಿದ್ಯಾಲಯದಿಂದ ಈ ಗೌರವ ದೊರೆತಿರುವುದು ಸಂತೋಷ ತಂದಿದೆ. ಕರ್ನಾಟಕ ಸರ್ಕಾರ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳು ಮತ್ತು ಸಂಶೋಧನೆಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು. ವಿಶ್ವವಿದ್ಯಾಲಯದ ಉತ್ತಮ ಕಾರ್ಯಗಳು ನಿರಂತರವಾಗಿ ಮುಂದುವರಿಯಲು ಸರ್ಕಾರ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಅಧ್ಯಯನಾಂಗದ ನಿರ್ದೇಶಕ ಡಾ. ಎನ್. ಚಿನ್ನಸ್ವಾಮಿ ಸೋಸಲೆ, ಉಪಕುಲಸಚಿವ ಎಚ್. ಶ್ರೀನಿವಾಸ್, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಬಂಜಗೆರೆ ಜಯಪ್ರಕಾಶ್, ಡಾ. ಎಸ್.ಎಂ. ಮುತ್ತಯ್ಯ ಹಾಗೂ ಉಪನಿರ್ದೇಶಕ ವಿಜಯೇಂದ್ರ ಎಸ್.ಕೆ. ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande