ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಪ್ರಕರಣ: ಮರು ಸರ್ವೆಗೆ ಹೈಕೋರ್ಟ್ ತಡೆ
ಅರಣ್ಯ ಭೂಮಿ ಮರು ಸರ್ವೆಗೆ ಹೈಕೋರ್ಟ್ ತಡೆಯಾಜ್ಞೆ; ಯಥಾಸ್ಥಿತಿಗೆ ಸೂಚನೆ
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಜಿಲ್ಲಾಧಿಕಾರಿ ರವಿಕುಮಾರ್


ಕೋಲಾರ, 20 ನವೆಂಬರ್ (ಹಿ.ಸ.)

ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅವರಿಗೆ ಸಂಬಂಧಿಸಿದ ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಗುಂಟೆ ಅರಣ್ಯ ಪ್ರದೇಶದ ಹೊಸ ಹುಡ್ಯ ಗ್ರಾಮದ ಸರ್ವೆ ನಂಬರ್ 1 ಮತ್ತು 2ರ ಜಮೀನುಗಳಲ್ಲಿನ ಕಂದಾಯ ಹಾಗೂ ಅರಣ್ಯ ಭೂಮಿಗಳ ಗಡಿ ಗುರುತಿಸುವ ಮರು ಸರ್ವೆ ಕಾರ್ಯಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದ್ದು, ಶುಕ್ರವಾರ ನಡೆಯುತ್ತಿದ್ದ ಮರು ಸರ್ವೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.

ಈ ಹಿಂದೆ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ನಿರ್ದೇಶನದಂತೆ ಕೋಲಾರ ಭೂ ದಾಖಲೆಗಳ ಉಪನಿರ್ದೇಶಕರ ನೇತೃತ್ವದಲ್ಲಿ ಜಂಟಿ ಸರ್ವೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಕೆ.ಆರ್. ರಮೇಶ್ ಕುಮಾರ್ ಅವರು 60 ಎಕರೆ 23 ಗುಂಟೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು ಎಂದು ವರದಿಯಾಗಿತ್ತು.

ಇದರ ಬೆನ್ನಲ್ಲೇ ನ್ಯಾಯಾಲಯದ ಸೂಚನೆಯಂತೆ ಅರಣ್ಯ ಇಲಾಖೆ ಕರ್ನಾಟಕ ಅರಣ್ಯ ಕಾಯ್ದೆಯ ಕಲಂ 64ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಪೂರ್ಣಗೊಳಿಸಿತ್ತು. ಬಳಿಕ ಒತ್ತುವರಿಯಾಗಿದ್ದ 60 ಎಕರೆ 23 ಗುಂಟೆ ಜಮೀನನ್ನು ತೆರವುಗೊಳಿಸುವಂತೆ ಬೆಂಗಳೂರು ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದರು.

ಈ ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಈ ಹಿಂದೆ ಎರಡು ಬಾರಿ ಮರು ಸರ್ವೆ ನಡೆಸಲು ಪ್ರಯತ್ನಿಸಿತ್ತು. ಎರಡೂ ಸಂದರ್ಭಗಳಲ್ಲಿ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಆದರೂ ನವೆಂಬರ್ 20ರಂದು ಕಂದಾಯ ಇಲಾಖೆ ಮತ್ತೊಮ್ಮೆ ಮರು ಸರ್ವೆ ಕಾರ್ಯಕ್ಕೆ ಮುಂದಾಗಿತ್ತು.

ಸರ್ವೆ ಸ್ಥಳದಲ್ಲಿ ಜಿಲ್ಲಾಧಿಕಾರಿ, ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕರು, ಸಹಾಯಕ ಆಯುಕ್ತರು ಹಾಗೂ ಶ್ರೀನಿವಾಸಪುರ ತಹಶೀಲ್ದಾರ್ ಉಪಸ್ಥಿತರಿದ್ದರು.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಮತ್ತೆ ವಿಚಾರಣೆಗೆ ಕೈಗೆತ್ತಿಕೊಂಡ ಉಚ್ಚ ನ್ಯಾಯಾಲಯ, ನಡೆಯುತ್ತಿದ್ದ ಮರು ಸರ್ವೆ ಕಾರ್ಯಕ್ಕೆ ತಡೆ ನೀಡಿತು. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತು. ಆದೇಶವನ್ನು ತಕ್ಷಣವೇ ಜಾರಿಗೆ ಬರುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಬೇಕೆಂದು ಸರ್ಕಾರಿ ವಕೀಲರಿಗೆ ನಿರ್ದೇಶನ ನೀಡಿತು.

ಇದೇ ವೇಳೆ, ಹಿಂದಿನ ಜಂಟಿ ಸರ್ವೆ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ದೂರವಿಟ್ಟು ಸರ್ವೆ ನಡೆಸಲು ಜಿಲ್ಲಾಧಿಕಾರಿಗಳು ಮುಂದಾಗಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಇದೀಗ ಉಚ್ಚ ನ್ಯಾಯಾಲಯದ ಆದೇಶದಿಂದಾಗಿ ಮರು ಸರ್ವೆ ಪ್ರಕ್ರಿಯೆ ಮುಂದೂಡಿಕೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande