ಹಂಪಿ ಉತ್ಸವ ನಡೆಸದ ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ: ನಿಗದಿತ ದಿನಾಂಕ ಘೋಷಣೆಗೆ ಆಗ್ರಹ
ಹೊಸಪೇಟೆ, 20 ನವೆಂಬರ್ (ಹಿ.ಸ.): ಐತಿಹಾಸಿಕ ಹಂಪಿ ಉತ್ಸವವನ್ನು ಪ್ರತಿವರ್ಷ ನವೆಂಬರ್ ತಿಂಗಳಿನಲ್ಲೇ ಆಯೋಜಿಸುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ, ಈ ಬಾರಿ ಉತ್ಸವದ ಸಿದ್ಧತೆಗಳನ್ನೇ ಆರಂಭಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಸರ್ಕಾರದ ವಿಳಂಬ ಧೋರಣೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಉತ್ಸವಕ
Hampi-Utsav-Government-Negligence-Locals-Express-Anger-Demand-November-Celebration


ಹೊಸಪೇಟೆ, 20 ನವೆಂಬರ್ (ಹಿ.ಸ.):

ಐತಿಹಾಸಿಕ ಹಂಪಿ ಉತ್ಸವವನ್ನು ಪ್ರತಿವರ್ಷ ನವೆಂಬರ್ ತಿಂಗಳಿನಲ್ಲೇ ಆಯೋಜಿಸುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ, ಈ ಬಾರಿ ಉತ್ಸವದ ಸಿದ್ಧತೆಗಳನ್ನೇ ಆರಂಭಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಸರ್ಕಾರದ ವಿಳಂಬ ಧೋರಣೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಉತ್ಸವಕ್ಕೆ ಶಾಶ್ವತ ದಿನಾಂಕ ನಿಗದಿಪಡಿಸಿ ಪ್ರತಿವರ್ಷ ನಿಗದಿತ ಅವಧಿಯಲ್ಲೇ ಆಯೋಜಿಸುವಂತೆ ಆಗ್ರಹಿಸಿದ್ದಾರೆ.

ಹಂಪಿ ಉತ್ಸವವನ್ನು ಪ್ರತಿವರ್ಷದ ಕ್ಯಾಲೆಂಡರ್ ಕಾರ್ಯಕ್ರಮವನ್ನಾಗಿ ರೂಪಿಸಬೇಕು ಎಂಬುದು ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿದೆ. ಹಿಂದಿನ ಉತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ವರ್ಷ ನವೆಂಬರ್‌ನಲ್ಲೇ ಉತ್ಸವ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ, ಮೈಸೂರು ದಸರಾ ಮತ್ತು ಕಿತ್ತೂರು ಉತ್ಸವಗಳಿಗೆ ಸಿದ್ಧತೆ ನಡೆಸಿರುವ ಸರ್ಕಾರ ಹಂಪಿ ಉತ್ಸವದ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿದೆ. ಮೈಸೂರು ದಸರಾ ಉತ್ಸವದ ಮೂಲವೂ ಹಂಪಿಯಲ್ಲಿದೆ ಎಂದು ಸ್ಥಳೀಯರು ನೆನಪಿಸಿದ್ದಾರೆ. ಬರಗಾಲದ ನಡುವೆಯೂ ಮೈಸೂರು ದಸರಾಕ್ಕೆ ಸರ್ಕಾರ 45 ಕೋಟಿ ರೂ. ಅನುದಾನ ನೀಡಿದೆ. ಆದರೆ, ಅದಕ್ಕಿಂತ ಕಡಿಮೆ ವೆಚ್ಚದಲ್ಲಿ ನಡೆಯುವ ಹಂಪಿ ಉತ್ಸವಕ್ಕೆ ಆದ್ಯತೆ ನೀಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ನವೆಂಬರ್‌ನಲ್ಲೇ ಉತ್ಸವ ನಡೆಸಲು ಒತ್ತಾಯ

ಹಂಪಿ ಉತ್ಸವವನ್ನು ನವೆಂಬರ್‌ನಲ್ಲೇ ಆಯೋಜಿಸುವುದಕ್ಕೆ ಐತಿಹಾಸಿಕ ಮಹತ್ವದ ಜತೆಗೆ ಹವಾಮಾನವೂ ಪ್ರಮುಖ ಕಾರಣವಾಗಿದೆ. ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದ ಎಂ.ಪಿ. ಪ್ರಕಾಶ್ ಅವರ ಅವಧಿಯಲ್ಲಿ 1992ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಹಂಪಿ ಉತ್ಸವ ಆಯೋಜಿಸಲಾಗಿತ್ತು.

ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ನವೆಂಬರ್‌ನಲ್ಲಿ ವಾತಾವರಣ ಹೆಚ್ಚು ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ದೇಶ-ವಿದೇಶಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಭೇಟಿ ನೀಡುತ್ತಾರೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಸ್ಥಳೀಯರ ಒತ್ತಾಯದ ಮೇರೆಗೆ 2025ರ ಸಾಲಿನ ಹಂಪಿ ಉತ್ಸವವನ್ನು 2026ರ ಜನವರಿಯಲ್ಲಿ ಆಯೋಜಿಸಲಾಗಿತ್ತು. ಆಗ ಉತ್ಸವ ಉದ್ಘಾಟಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ ನವೆಂಬರ್‌ನಲ್ಲೇ ಉತ್ಸವ ನಡೆಸುವುದು ತಮ್ಮ ವೈಯಕ್ತಿಕ ಬದ್ಧತೆ ಹಾಗೂ ಆರನೇ ಗ್ಯಾರಂಟಿಯಾಗಲಿದೆ ಎಂದು ಭರವಸೆ ನೀಡಿದ್ದರು.

ಆದರೆ, ಈ ವರ್ಷದ ಉತ್ಸವಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಯಾವುದೇ ಸಿದ್ಧತೆ ಆರಂಭಿಸಿಲ್ಲ. ಸರ್ಕಾರದಿಂದಲೂ ಅಧಿಕೃತ ಮಾಹಿತಿ ಬಂದಿಲ್ಲ ಎನ್ನಲಾಗಿದೆ. ಉತ್ಸವವನ್ನು ಮುಂದಿನ ವರ್ಷದ ಫೆಬ್ರವರಿಯಲ್ಲಿ ಆಯೋಜಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಡಿಎಂಎಫ್ ನಿಧಿ ಬಳಸಲು ಸಲಹೆ

ಬರಗಾಲ ಮತ್ತು ಗ್ಯಾರಂಟಿ ಯೋಜನೆಗಳಿಂದ ಉಂಟಾಗಿರುವ ಆರ್ಥಿಕ ಕೊರತೆಯ ನೆಪದಲ್ಲಿ ಸರ್ಕಾರ ಪ್ರತಿವರ್ಷ ಹಂಪಿ ಉತ್ಸವದ ಅನುದಾನ ಕಡಿತಗೊಳಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹಣಕಾಸಿನ ಸಮಸ್ಯೆಯಿದ್ದರೆ ದಸರಾ ಉತ್ಸವವನ್ನು ಸರಳವಾಗಿ ಆಚರಿಸಬಹುದಿತ್ತು. ಹಂಪಿ ಉತ್ಸವ ಆಯೋಜನೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್) ನಿಧಿ ಬಳಸಿಕೊಳ್ಳುವ ಅವಕಾಶವಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ವಿಲೇಜರ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ವಿರೂಪಾಕ್ಷಿ ವಿ., ಹಣಕಾಸಿನ ಕೊರತೆಯ ನೆಪವೊಡ್ಡಿ ಸರ್ಕಾರ ಪ್ರತಿವರ್ಷ ಹಂಪಿ ಉತ್ಸವದ ಅನುದಾನಕ್ಕೆ ಕತ್ತರಿ ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶವನ್ನು ಕಡೆಗಣಿಸುವ ಸರ್ಕಾರದ ಮೇಲೆ ಅವಲಂಬಿತರಾಗುವ ಬದಲು ಜಿಲ್ಲಾಡಳಿತವೇ ಡಿಎಂಎಫ್ ನಿಧಿ ಬಳಸಿಕೊಂಡು ಉತ್ಸವ ಆಯೋಜಿಸಬಹುದು. ಉತ್ಸವಕ್ಕೆ ಆದ್ಯತೆ ನೀಡದಿರುವುದು ಹಂಪಿಯ ಜನರು ಮತ್ತು ಸ್ಥಳೀಯ ಕಲಾವಿದರಿಗೆ ಆಗುತ್ತಿರುವ ಅನ್ಯಾಯವಾಗಿದೆ ಎಂದು ಹೇಳಿದರು.

ನವೆಂಬರ್ 3ರಿಂದ 5ರವರೆಗೆ ದಿನಾಂಕ ನಿಗದಿಗೆ ಆಗ್ರಹ

ಹಂಪಿಯ ಕೆಲವು ಪ್ರದೇಶಗಳಲ್ಲಿ ಬೇಸಿಗೆ ಬೇಗನೆ ಆರಂಭವಾಗುವುದರಿಂದ ಫೆಬ್ರವರಿಯಲ್ಲಿ ಉತ್ಸವ ಆಯೋಜಿಸುವುದು ಸೂಕ್ತವಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ. ಹೀಗಾಗಿ ಪ್ರತಿವರ್ಷ ನವೆಂಬರ್ 3ರಿಂದ 5ರವರೆಗೆ ಹಂಪಿ ಉತ್ಸವ ನಡೆಸಲು ಶಾಶ್ವತ ದಿನಾಂಕ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನ ರದ್ದುಗೊಂಡಿತ್ತು. ಈ ವರ್ಷ ಹಂಪಿ ಉತ್ಸವ ನಡೆಸುವ ಉದ್ದೇಶವೂ ಸರ್ಕಾರಕ್ಕಿಲ್ಲದಂತೆ ಕಾಣುತ್ತಿದೆ. ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ಲಕ್ಷಿಸುವ ಧೋರಣೆ ಸರಿಯಲ್ಲ. ದಕ್ಷಿಣ ಕರ್ನಾಟಕದ ಕಾರ್ಯಕ್ರಮಗಳ ವಿಚಾರದಲ್ಲೂ ಸರ್ಕಾರ ಇದೇ ರೀತಿ ನಡೆದುಕೊಳ್ಳುತ್ತದೆಯೇ ಎಂದು ವಿರೂಪಾಕ್ಷಿ ಪ್ರಶ್ನಿಸಿದ್ದಾರೆ.

ಐತಿಹಾಸಿಕ ಪರಂಪರೆ, ಪ್ರವಾಸೋದ್ಯಮ ಮತ್ತು ಸ್ಥಳೀಯ ಕಲಾವಿದರ ಬದುಕಿಗೆ ಮಹತ್ವದ ವೇದಿಕೆಯಾಗಿರುವ ಹಂಪಿ ಉತ್ಸವದ ಆಯೋಜನೆ ಕುರಿತು ಸರ್ಕಾರ ಶೀಘ್ರ ನಿರ್ಧಾರ ಪ್ರಕಟಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande