
ಗದಗ, 20 ನವೆಂಬರ್ (ಹಿ.ಸ.):
ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಹಾಗೂ ‘ಬಸವ ಮಂಟಪ’ ಗ್ರಂಥದಲ್ಲಿ ಅವಹೇಳನಕಾರಿ ವಿಚಾರಗಳನ್ನು ಪ್ರಕಟಿಸಿರುವುದನ್ನು ಗದಗದ ತೋಂಟದ ಸಿದ್ದರಾಮ ಶ್ರೀಗಳು ತೀವ್ರವಾಗಿ ಖಂಡಿಸಿದ್ದಾರೆ.
ಬಸವಣ್ಣನವರು ಮಹಾನ್ ಮಾನವತಾವಾದಿಯಾಗಿದ್ದು, ಸಮಾನತೆ, ಕಾಯಕ ಮತ್ತು ದಾಸೋಹದಂತಹ ವಿಶ್ವಮಾನ್ಯ ಮೌಲ್ಯಗಳನ್ನು ಇಡೀ ಜಗತ್ತಿಗೆ ಸಾರಿದವರು. ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದ ಮಹಾನ್ ಶರಣರಾಗಿದ್ದಾರೆ.
ಇಂತಹ ಮಹಾನುಭಾವರ ಕುರಿತು ರವಿ ಹಂಜ್ ಅವಹೇಳನಕಾರಿಯಾಗಿ ಮಾತನಾಡಿರುವುದು ಹಾಗೂ ಗ್ರಂಥದಲ್ಲಿ ಅವಹೇಳನಕಾರಿ ವಿಚಾರಗಳನ್ನು ಪ್ರಕಟಿಸಿರುವುದು ಖಂಡನೀಯ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಬಸವಾದಿ ಶಿವಶರಣರ ತತ್ವ, ಆದರ್ಶ ಮತ್ತು ಮೌಲ್ಯಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ದೇಶದಲ್ಲಿ ಮತ್ತೆ ವರ್ಣಾಶ್ರಮ ವ್ಯವಸ್ಥೆಯನ್ನು ಸ್ಥಾಪಿಸುವ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದ ಶ್ರೀಗಳು, ಬಸವಾದಿ ಶರಣರ ಆದರ್ಶಗಳು ಭಾರತೀಯ ಸಂವಿಧಾನದ ಆಶಯಗಳಲ್ಲಿಯೂ ಅಡಕವಾಗಿವೆ ಎಂದು ಹೇಳಿದರು.
ಸಂವಿಧಾನವನ್ನು ಬದಲಿಸಿ ಮತ್ತೆ ಜಾತಿ, ಮತ, ಪಂಥಗಳು ವಿಜೃಂಭಿಸಬೇಕು ಹಾಗೂ ವರ್ಣಾಶ್ರಮ ವ್ಯವಸ್ಥೆ ಪುನಃ ಸ್ಥಾಪನೆಯಾಗಬೇಕು ಎಂದು ಬಯಸುವವರೇ ಬಸವಣ್ಣನವರ ಆದರ್ಶಗಳನ್ನು ವಿರೋಧಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಗತಿಪರ ಚಿಂತಕರು ಹಾಗೂ ಅನೇಕ ಮಠಾಧಿಪತಿಗಳ ಒತ್ತಾಯದ ಮೇರೆಗೆ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಲಿಂಗಾಯತ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡುವುದು ಹಾಗೂ ಬಸವಣ್ಣನವರನ್ನು ಕಳ್ಳ, ಸುಳ್ಳ ಎಂದು ಬಿಂಬಿಸುವ ಪ್ರಯತ್ನ ಅತ್ಯಂತ ಖಂಡನೀಯ. ಬಸವಣ್ಣನವರು ತಮ್ಮ ವಚನಗಳಲ್ಲಿಯೇ ಬಿಜ್ಜಳನ ಬಂಡಾರದ ವಿಚಾರವಾಗಿ ಸ್ಪಷ್ಟವಾಗಿ ಹೇಳಿದ್ದಾರೆ.
'ಬಿಜ್ಜಳನ ಬಂಡಾರ ನನಗೇಕಯ್ಯ' ಎಂಬ ವಚನದ ಮೂಲಕ ತಮಗೆ ಯಾವುದೇ ಸ್ವಾರ್ಥವಿಲ್ಲ ಎಂಬುದನ್ನು ತಿಳಿಸಿದ್ದಾರೆ. ಇಂತಹ ವಚನಗಳನ್ನೂ ಕಡೆಗಣಿಸಿ, ಕೆಲವು ಕಾವ್ಯಗಳಲ್ಲಿ ಉಲ್ಲೇಖಿಸಿರುವ ಆರೋಪಗಳಿಗೆ ಮಹತ್ವ ನೀಡುವುದು ಸರಿಯಲ್ಲ ಎಂದು ಹೇಳಿದರು.
ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾನತೆ, ದುಡಿದು ಉಣ್ಣುವ ಮೌಲ್ಯ ಹಾಗೂ ದುಡಿದಿದ್ದನ್ನು ಹಂಚಿಕೊಂಡು ತಿನ್ನುವ ದಾಸೋಹದ ತತ್ವವನ್ನು ಸಾರಿದ್ದಾರೆ. ಈ ಮೌಲ್ಯಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿದ್ದು, ಮುಂದಿನ ಶತಮಾನಗಳಿಗೂ ಮಾರ್ಗದರ್ಶಿಯಾಗಲಿವೆ.
ವಚನಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದರೆ ಬಸವಣ್ಣನವರ ವಿಚಾರಧಾರೆಗಳ ಮಹತ್ವ ಅರಿವಾಗುತ್ತದೆ ಎಂದರು.
ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ನಂತರ ಕೆಲವರು ದ್ವೇಷದ ಹಿನ್ನೆಲೆಯಲ್ಲಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಸಮಾನತೆ ಹಾಗೂ ಲಿಂಗಭೇದವನ್ನು ತೊಡೆದುಹಾಕುವ ಬಸವಣ್ಣನವರ ವಿಚಾರಧಾರೆಯನ್ನು ಸಹಿಸದ ವ್ಯವಸ್ಥೆಯೊಂದು ಇದರ ಹಿಂದೆ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಬಸವಣ್ಣನವರ ಕುರಿತು ಆಧಾರರಹಿತ ಆರೋಪಗಳನ್ನು ಮಾಡುವವರು ಜೈನ ಕಾವ್ಯಗಳನ್ನು ಉಲ್ಲೇಖಿಸುತ್ತಿದ್ದಾರೆ. ಆದರೆ, ಬಸವಣ್ಣನವರ ಪರವಾಗಿ ಸಾವಿರಾರು ಜನರು ಬರೆದಿರುವ ವಿಚಾರಗಳನ್ನು ಬದಿಗಿಟ್ಟು, ದ್ವೇಷದ ಆಧಾರದಲ್ಲಿರುವ ಕಾವ್ಯಗಳನ್ನು ಮಾತ್ರ ಪರಿಗಣಿಸುವುದು ಸರಿಯಲ್ಲ.
ಧರ್ಮಗಳ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಒಂದು ಧರ್ಮದ ಮೌಲ್ಯಗಳನ್ನು ಅವಹೇಳನ ಮಾಡುವುದು ಒಪ್ಪುವಂತಹದ್ದಲ್ಲ ಎಂದು ಹೇಳಿದರು.
ಈ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಸರ್ಕಾರ ಇಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡರೆ ಮುಂದೆ ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಬಹುದು ಎಂದು ತೋಂಟದ ಸಿದ್ದರಾಮ ಶ್ರೀಗಳು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R