ಸಹಕಾರ ರಂಗದಲ್ಲಿ ಅಹಿಂದ ವರ್ಗಗಳಿಗೆ ಹೆಚ್ಚಿನ ಪಾಲುದಾರಿಕೆ ಕಲ್ಪಿಸಿ: ಕೆ.ಎಸ್. ಗಣೇಶ್
ಸಹಕಾರ ಸಂಘಗಳಲ್ಲಿ ಅಹಿಂದ ಪಾಲುದಾರಿಕೆಗೆ ಒತ್ತಾಯ
ಕೋಲಾರದಲ್ಲಿ ನಡೆದ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಒಕ್ಕೂಟದ ನಿರ್ದೇಶಕ ಕಲ್ವಮಂಜಲಿ ಟಿ.ಕೆ.ಬೈರೇಗೌಡ, ಕೋಲಾರ ಚಿಕ್ಕಬಳ್ಳಾಪುರ ವಿವಿಧೋದ್ಧೇಶ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಕೆ.ಎಸ್.ಗಣೇಶ್, ಉಪಾಧ್ಯಕ್ಷ ಅಬ್ಬಣಿ ಶಂಕರ್ ಇತರರು ಭಾಗವಹಿಸಿದ್ದರು.


ಕೋಲಾರ, 20 ನವೆಂಬರ್ (ಹಿ.ಸ.)

ಸಹಕಾರ ಕ್ಷೇತ್ರದಲ್ಲಿ ಅಹಿಂದ ವರ್ಗಗಳ ಪಾಲುದಾರಿಕೆಯನ್ನು ಹೆಚ್ಚಿಸಲು ಸಹಕಾರಿ ಮುಖಂಡರು ಮುಕ್ತ ಮನಸ್ಸಿನಿಂದ ಅವಕಾಶ ಕಲ್ಪಿಸಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ರಾಜ್ಯ ಸಹಕಾರ ಮಹಾಮಂಡಳ, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಕೋಲಾರ-ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ, ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ 73ನೇ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರದಲ್ಲಿ ಮಹಿಳೆಯರು, ಯುವಜನರು ಹಾಗೂ ದುರ್ಬಲ ವರ್ಗಗಳ ಪಾಲುದಾರಿಕೆ ಹೆಚ್ಚಿಸುವ ಕುರಿತು ಸಹಕಾರ ಸಪ್ತಾಹದಲ್ಲಿ ಒಂದು ದಿನ ಚರ್ಚಿಸಲಾಗುತ್ತದೆ. ಆದರೆ, ಸಹಕಾರ ಕ್ಷೇತ್ರದಲ್ಲಿ ಅಹಿಂದ ವರ್ಗಗಳ ಪಾಲುದಾರಿಕೆ ಎಷ್ಟಿದೆ ಎಂಬ ಬಗ್ಗೆ ಸಹಕಾರಿ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಸಹಕಾರ ಸಂಸ್ಥೆಗಳ ಮಾತೃ ಸಂಸ್ಥೆಯಾಗಿರುವ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟವು ತನ್ನ ನಿರ್ದೇಶಕ ಸ್ಥಾನಗಳನ್ನು ಮೊದಲು ಅಹಿಂದ ವರ್ಗಗಳಿಗೆ ಮೀಸಲಿಟ್ಟು ಚುನಾವಣೆ ನಡೆಸುವ ಮೂಲಕ ಇತರ ಸಹಕಾರ ಸಂಸ್ಥೆಗಳಿಗೆ ಮಾದರಿಯಾಗಬೇಕು. ಕುಂಟು ನೆಪಗಳನ್ನು ಮುಂದಿಟ್ಟುಕೊಂಡು ಅಹಿಂದ ವರ್ಗದವರನ್ನು ಸಹಕಾರ ಕ್ಷೇತ್ರದಿಂದ ದೂರವಿಟ್ಟರೆ ಸಹಕಾರ ರಂಗ ಪರಿಪೂರ್ಣವಾಗಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಸಹಕಾರ ಕ್ಷೇತ್ರದಲ್ಲಿನ ಭ್ರಷ್ಟಾಚಾರದ ವಿಚಾರವೂ ಹಾವು ಸಾಯುವುದಿಲ್ಲ, ಕೋಲು ಮುರಿಯುವುದಿಲ್ಲ ಎಂಬ ಸ್ಥಿತಿಯಲ್ಲಿದೆ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಷ್ಟದ ಹಾದಿಯಲ್ಲಿರುವ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಬ್ಯಾಂಕ್ ನಷ್ಟಕ್ಕೆ ಕಾರಣರಾದವರು ಯಾರು ಎಂಬುದನ್ನು ಪ್ರಶ್ನಿಸಲು ಯಾರೂ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಬ್ಯಾಂಕ್‌ಗೆ ನಷ್ಟ ಉಂಟು ಮಾಡಿದವರನ್ನು ಹೊಣೆಗಾರರನ್ನಾಗಿ ಮಾಡದೆ ರಕ್ಷಿಸಲಾಗಿತ್ತು. ಈಗಲೂ ಅದೇ ಪರಿಸ್ಥಿತಿ ಮುಂದುವರಿದಿದೆ. ಆದ್ದರಿಂದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತ ಕಾಲ ಕಳೆಯುವ ಬದಲು, ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಬ್ಯಾಂಕನ್ನು ಅಭಿವೃದ್ಧಿಪಡಿಸಲು ಹಾಲಿ ಅಧ್ಯಕ್ಷರು, ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಅವರ ತಂಡ ಮುಂದಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ವಿ. ಗೋಪಿನಾಥ್ ಮಾತನಾಡಿ, ಸಹಕಾರ ಸಪ್ತಾಹ ಕಳೆಗುಂದಲು ಸಹಕಾರ ಕ್ಷೇತ್ರದಲ್ಲಿರುವವರೇ ಕಾರಣರಾಗಿದ್ದಾರೆ. ಸಹಕಾರ ಒಕ್ಕೂಟದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೂ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ. ಆಡಳಿತದಲ್ಲಿರುವವರಿಗೆ ಚುನಾವಣೆ ನಡೆಸಲು ಆಸಕ್ತಿ ಇಲ್ಲದಿರುವುದು ಸರಿಯಾದ ಧೋರಣೆಯಲ್ಲ ಎಂದು ಟೀಕಿಸಿದರು.

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ವಿ. ಮುನಿರಾಜು ಮಾತನಾಡಿ, ರಾಜಕಾರಣಿಗಳ ಹಸ್ತಕ್ಷೇಪ ಇಲ್ಲದಿದ್ದರೆ ಸಹಕಾರ ಕ್ಷೇತ್ರವನ್ನು ಶುದ್ಧವಾಗಿ ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು.

ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ಹಾಗೂ ಹಿರಿಯ ಸಹಕಾರಿ ಅಬ್ಬಣಿ ಶಂಕರ್ ಮಾತನಾಡಿ, ಸಹಕಾರ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆಯಲು ಪಹಣಿ ಹೊಂದಿರುವವರಿಗೆ ಮಾತ್ರ ಅವಕಾಶ ಕಲ್ಪಿಸುವ ಕಾಯ್ದೆಗೆ ತಿದ್ದುಪಡಿ ತರಬೇಕು. ಇದರಿಂದ ಅಹಿಂದ ವರ್ಗದವರಿಗೂ ಸಹಕಾರ ಸಂಸ್ಥೆಗಳ ಸದಸ್ಯತ್ವ ಪಡೆಯಲು ಅನುಕೂಲವಾಗುವಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ನಷ್ಟ ಉಂಟು ಮಾಡಿದವರೇ ಈಗ ಬ್ಯಾಂಕನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕಾದ ಪರಿಸ್ಥಿತಿ ಇದೆ ಎಂದರು.

ಸಹಕಾರ ಒಕ್ಕೂಟದ ನಿರ್ದೇಶಕ ವಿ. ಮುರಳೀಧರ್ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಅಹಿಂದ ವರ್ಗಗಳಿಗೂ ಸಹಕಾರ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ನೀಡಬೇಕು. ತಾವು ಪ್ರತಿನಿಧಿಸುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಗ್ರಾಮದ ಮೂರು ಪ್ರಮುಖ ಸಮುದಾಯಗಳ ಪ್ರತಿನಿಧಿಗಳು ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಲು ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿಯ ಧೋರಣೆ ಎಲ್ಲ ಸಹಕಾರ ಸಂಸ್ಥೆಗಳಲ್ಲೂ ಜಾರಿಗೆ ಬರಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಹಕಾರ ಒಕ್ಕೂಟದ ನಿರ್ದೇಶಕ ಕಲ್ವಮಂಜಲಿ ಟಿ.ಕೆ. ಬೈರೇಗೌಡ ಮಾತನಾಡಿ, ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಉತ್ತಮ ವಾತಾವರಣ, ತಂತ್ರಜ್ಞಾನ, ಕೌಶಲ್ಯಾಧಾರಿತ ಹಾಗೂ ವೃತ್ತಿಪರ ಸೇವೆಗಳು ಅತ್ಯಗತ್ಯವಾಗಿವೆ ಎಂದರು.

ಹಲವು ಕಾರಣಗಳಿಂದ ಈ ಬಾರಿ ಸಹಕಾರ ಸಪ್ತಾಹವನ್ನು ಸಾಂಕೇತಿಕವಾಗಿ ಆಚರಿಸಲಾಗಿದೆ. ಮುಂದಿನ ವರ್ಷದಿಂದ ಹಬ್ಬದ ರೀತಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಉಪಾಧ್ಯಕ್ಷ ಜಮ್ಮುನಹಳ್ಳಿ ಕೃಷ್ಣ ಹಾಗೂ ಸಹಕಾರ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಭಾರತಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande